ADVERTISEMENT

ಪಟಾಕಿ: ಬೀದರ್‌ನಲ್ಲೇ ಹೆಚ್ಚು ಮಾಲಿನ್ಯ

ಒಂದು ಕೋಟಿಗೂ ಹೆಚ್ಚಿನ ವಹಿವಾಟು; ಪ್ರತಿ ಸಲ ಸ್ಥಳ ಬದಲಾವಣೆಗೆ ಅಸಮಾಧಾನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ನವೆಂಬರ್ 2025, 7:15 IST
Last Updated 3 ನವೆಂಬರ್ 2025, 7:15 IST
ಬೀದರ್‌ನ ಚಿಕ್ಕಪೇಟೆ ಸಮೀಪ ತೆರೆದಿರುವ ಪಟಾಕಿ ಮಳಿಗೆಗಳಲ್ಲಿ ಪಟಾಕಿಗಳನ್ನು ಖರೀದಿಸುತ್ತಿರುವ ಜನ
ಬೀದರ್‌ನ ಚಿಕ್ಕಪೇಟೆ ಸಮೀಪ ತೆರೆದಿರುವ ಪಟಾಕಿ ಮಳಿಗೆಗಳಲ್ಲಿ ಪಟಾಕಿಗಳನ್ನು ಖರೀದಿಸುತ್ತಿರುವ ಜನ   

ಬೀದರ್: ದೀಪಾವಳಿಯ ಸಂದರ್ಭದಲ್ಲಿ ಬೀದರ್‌ನಲ್ಲೇ ಹೆಚ್ಚು ವಾಯು ಮಾಲಿನ್ಯ ಉಂಟಾಗಿದೆ.

ದೀಪಾವಳಿಯ ಮೂರು ದಿನಗಳಲ್ಲಿ ಇಡೀ ರಾಜ್ಯದಲ್ಲೇ ಬೀದರ್‌ನಲ್ಲಿ ಸರಾಸರಿ ವಾಯು ಗುಣಮಟ್ಟ ಇಂಡೆಕ್ಸ್‌ (ಎಕ್ಯೂಐ) ಸಾಮಾನ್ಯ ಮಾಲಿನ್ಯಕ್ಕಿಂತ ಶೇ 38ರಷ್ಟು ಹೆಚ್ಚಾಗಿರುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಪನ ಕೇಂದ್ರದಲ್ಲಿ ದಾಖಲಾಗಿದೆ.

2024ನೇ ಸಾಲಿನ ದೀಪಾವಳಿ ಸಂದರ್ಭದಲ್ಲಿ ಬೀದರ್‌ನಲ್ಲಿ ಎಕ್ಯೂಐ ಮಟ್ಟ 75ರಷ್ಟಿತ್ತು. ಈ ವರ್ಷ ಅದು 122ಕ್ಕೆ ಹೆಚ್ಚಾಗಿದೆ. ನಂತರದ ಸ್ಥಾನದಲ್ಲಿ ಬೆಳಗಾವಿ, ಬಾಗಲಕೋಟೆ, ಕೊಡಗು ಹಾಗೂ ಕಲಬುರಗಿ ಇದೆ. ಇನ್ನುಳಿದ ಜಿಲ್ಲೆಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ವಾಯು ಮಾಲಿನ್ಯದ ಪ್ರಮಾಣ ತಗ್ಗಿದೆ.

ADVERTISEMENT

ಕೋವಿಡ್‌ ನಂತರ ಬೀದರ್‌ ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಿಗಿಂತ ಅದ್ದೂರಿಯಾಗಿ ಮನೆ, ಮಳಿಗೆಗಳಲ್ಲಿ ಪೂಜೆ ನೆರವೇರಿಸಿ, ಹೆಚ್ಚಿನ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಿರುವುದು ವಾಯು ಮಾಲಿನ್ಯ ಹೆಚ್ಚಲು ಕಾರಣ ಎನ್ನಲಾಗಿದೆ.

ಕೋಟಿಗೂ ಹೆಚ್ಚು ವಹಿವಾಟು: ದೀಪಾವಳಿ ಹಬ್ಬದ ಅಂಗವಾಗಿ ನಗರದ ಚಿಕ್ಕಪೇಟೆ ಸಮೀಪ 27 ಪಟಾಕಿ ಮಳಿಗೆಗಳನ್ನು ತೆರೆಯಲಾಗಿತ್ತು. ಅಕ್ಟೋಬರ್‌ 18ರಿಂದ ಪಟಾಕಿ ಮಳಿಗೆಗಳು ಮಾರಾಟ ಆರಂಭಿಸಿದ್ದು, ದೀಪಾವಳಿಯ ಮೂರು ದಿನಗಳಲ್ಲೇ ಅತ್ಯಧಿಕ ಪಟಾಕಿಗಳು ಮಾರಾಟವಾಗಿವೆ ಎನ್ನುತ್ತಾರೆ ವ್ಯಾಪಾರಿಗಳು.

ಇನ್ನೂ ಪಟಾಕಿ ಮಳಿಗೆಗಳು ಕೆಲಸ ನಿರ್ವಹಿಸುತ್ತಿವೆ. ಆದರೆ, ಹೆಚ್ಚಿನ ಕಡೆಗಳಲ್ಲಿ ಪೂಜೆ ಮುಗಿದಿರುವುದರಿಂದ ಸಹಜವಾಗಿಯೇ ವ್ಯಾಪಾರ ತಗ್ಗಿದೆ. ಆದರೆ, ಇಲ್ಲಿಯವರೆಗೆ ಸರಿಸುಮಾರು ಒಂದು ಕೋಟಿಗೂ ಅಧಿಕ ವಹಿವಾಟು ನಡೆದಿದೆ ಎಂದು ಗೊತ್ತಾಗಿದೆ.

ಸ್ಥಳ ಬದಲಾವಣೆಗೆ ಅಸಮಾಧಾನ: ಪಟಾಕಿ ಮಾರಾಟ ಮಳಿಗೆಗಳಿಗೆ ನಗರದಲ್ಲಿ ನಿರ್ದಿಷ್ಟವಾದ ಜಾಗವಿಲ್ಲ. ಕಳೆದ ಮೂರು ವರ್ಷಗಳಿಂದ ಜಾಗ ಬದಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ, ಮೊದಲ ವರ್ಷ ಬಿ.ವಿ.ಭೂಮರಡ್ಡಿ ಕಾಲೇಜು ಮೈದಾನ, ಹಿಂದಿನ ವರ್ಷ ನ್ಯಾಷನಲ್‌ ಕಾಲೇಜು ಆವರಣ ಹಾಗೂ ಈ ವರ್ಷ ಚಿಕ್ಕಪೇಟೆ ಸಮೀಪದ ಖಾಲಿ ಜಾಗದಲ್ಲಿ ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗೆ ಪ್ರತಿ ಸಲ ಒಂದೊಂದು ಜಾಗ ಕೊಡುತ್ತಿ ರುವುದರಿಂದ ವ್ಯಾಪಾರಕ್ಕೆ ತೊಂದರೆ ಆಗುತ್ತಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಒಟ್ಟು 27 ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಒಂದೊಂದು ಮಳಿಗೆಯಲ್ಲಿ ಕನಿಷ್ಠ 8ರಿಂದ 10 ಜನರನ್ನು ತಾತ್ಕಾಲಿಕವಾಗಿ ಕೆಲಸಕ್ಕೆ ನಿಯೋಜಿಸಲಾಗಿದೆ. ಎರಡು ವಾರಕ್ಕಾಗಿ ಕನಿಷ್ಠ ಒಬ್ಬರಿಗೆ ₹10ರಿಂದ ₹15 ಸಾವಿರ ಪೇಮೆಂಟ್‌ ಕೊಡಬೇಕು. ಅನುಮತಿಗೆ ಹಣ ಕಟ್ಟಬೇಕು. ಎಲ್ಲ ಖರ್ಚು ವೆಚ್ಚ ಹೋಗಿ ಬಹಳ ಕಡಿಮೆ ಉಳಿಯುತ್ತದೆ. ಸ್ಥಳ ಬದಲಾವಣೆಯಿಂದ ಹೆಚ್ಚು ಸಮಸ್ಯೆಯಾಗುತ್ತಿದೆ’ ಎಂದು ವ್ಯಾಪಾರಿಗಳಾದ ಗುಂಡಯ್ಯ, ಸಚಿನ್‌ ಹೇಳಿದರು.

ರಮೇಶ ಕಾಶಿನಾಥ
ನಗರ ಹೊರವಲಯದ ಚಿಕ್ಕಪೇಟೆಯಲ್ಲಿ ಪಟಾಕಿ ಮಳಿಗೆ ತೆರೆಯಲು ಅವಕಾಶ ಕೊಟ್ಟಿರುವುದರಿಂದ ಹೆಚ್ಚಿನ ಜನ ಬಂದಿಲ್ಲ. ಮಹಿಳೆಯರಂತೂ ಬಂದೇ ಇಲ್ಲ. ನಗರದ ಮಧ್ಯಭಾಗದಲ್ಲಿ ಮಳಿಗೆ ತೆರೆಯಲು ಅವಕಾಶ ನೀಡಿದ್ದರೆ ಇನ್ನೂ ಹೆಚ್ಚು ವ್ಯಾಪಾರ ಆಗುತ್ತಿತ್ತು
ರಮೇಶ ಕಾಶಿನಾಥ, ವ್ಯಾಪಾರಿ

ವ್ಯಾಪಾರದ ಮೇಲೆ ಪರಿಣಾಮ

‘30 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವೆ. ವರ್ಷ ವರ್ಷ ಪಟಾಕಿ ಮಾರಾಟದ ಜಾಗ ಬದಲಿಸುತ್ತಿರುವ ಕಾರಣ ವ್ಯಾಪಾರದ ಮೇಲೆ ಪರಿಣಾಮ ಉಂಟಾಗುತ್ತಿದೆ. ತ್ವರಿತವಾಗಿ ಎನ್‌ಒಸಿ ಕೊಡುತ್ತಿಲ್ಲ. ದೀಪಾವಳಿ ಹಬ್ಬದ ಕನಿಷ್ಠ 15 ದಿನಗಳ ಮುಂಚೆ ಅನುಮತಿ ಹಾಗೂ ಜಾಗ ಕೊಡಬೇಕು. ಎರಡ್ಮೂರು ದಿನಗಳಿರುವಾಗ ಅಂತಿಮಗೊಳಿಸುತ್ತಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ ತೊಂದರೆ ಎದುರಾಗುತ್ತಿದೆ’ ಎನ್ನುತ್ತಾರೆ ಪಟಾಕಿ ವ್ಯಾಪಾರಿ ಗುಂಡಯ್ಯ ಫಬ್ಬಾ.

ಏಕಗವಾಕ್ಷಿ ಪದ್ಧತಿ ಮೂಲಕ ಅನುಮತಿ ಕೊಡಬೇಕು. ಹತ್ತು ಡಿಪಾರ್ಟ್‌ಮೆಂಟ್‌ ಓಡಾಡಬೇಕಿರುವುದರಿಂದ ಅಧಿಕಾರಿಗಳು ಕಿರುಕುಳ ಕೊಡುತ್ತಾರೆ. ಈಗ ಕೊಟ್ಟಿರುವ ಜಾಗ ಸರಿ ಇಲ್ಲ. ನಗರದ ಮಧ್ಯ ಭಾಗದಲ್ಲಿ ಬೇಕಾದರೆ ಎರಡು ಕಡೆ ಕೊಟ್ಟರೆ ಉತ್ತಮ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.