ADVERTISEMENT

ಸೌದಿಯಿಂದ ಮುಂಬೈಗೆ ಬಂದ ಅಬ್ದುಲ್‌ ಖದೀರ್: ವಿಮಾನ ನಿಲ್ದಾಣದಲ್ಲೇ ತಡೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 14:09 IST
Last Updated 4 ಮಾರ್ಚ್ 2020, 14:09 IST

ಬೀದರ್: ಸೌದಿಯಿಂದ ಬುಧವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್‌ ಅವರನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಡೆದು ಬೀದರ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶಾಹೀನ್‌ ಪ್ರಾಥಮಿಕ ಶಾಲೆ ಮಕ್ಕಳು ವಿವಾದಾತ್ಮಕ ನಾಟಕ ಪ್ರದರ್ಶಿಸಿದ್ದಕ್ಕೆ ಸಂಬಂಧಿಸಿದಂತೆ ಬೀದರ್‌ನ ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ಜನವರಿ 26 ರಂದು ಶಾಹೀನ್‌ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಅಬ್ದುಲ್‌ ಖದೀರ್‌ ಅವರು ತಲೆ ಮರೆಸಿಕೊಂಡ ನಂತರ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮುಂಬೈ ಹಾಗೂ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಲುಕ್‌ಔಟ್ ನೋಟಿಸ್ ಜಾರಿಗೆ ಪತ್ರ ಕಳಿಸಿದ್ದರು.

ADVERTISEMENT

ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಇಲ್ಲಿಯ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯ ಮಾ.3ರಂದು ಜಾಮೀನು ನೀಡಿದ ನಂತರ ಪ್ರಾಧಿಕಾರಕ್ಕೆ ಲುಕ್‌ಔಟ್ ನೋಟಿಸ್ ತೆರವುಗೊಳಿಸುವಂತೆ ಮಾಹಿತಿ ನೀಡಿರಲಿಲ್ಲ.

ಹೀಗಾಗಿ ಅಬ್ದುಲ್‌ ಖದೀರ್ ವಿಮಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಮುಂಬೈಗೆ ಬಂದಿಳಿಯುತ್ತಿದ್ದಂತೆಯೇ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಹೊರಗೆ ಹೋಗದಂತೆ ತಡೆದಿದ್ದಾರೆ. ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಮಾಹಿತಿ ಮುಟ್ಟಿಸಿದ್ದಾರೆ. ಅಬ್ದುಲ್‌ ಖದೀರ್ ಪರ ವಕೀಲ ಕೇಶವರಾವ್ ಶ್ರೀಮಾಳೆ ಅವರು ನ್ಯಾಯಾಲಯದ ದಾಖಲೆಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನೀಡಿದ್ದಾರೆ.

‘ಅಬ್ದುಲ್‌ ಖದೀರ್‌ ಅವರನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಡೆದಿರುವುದು ನಿಜ. ಆದರೆ, ಅವರನ್ನು ಬಂಧಿಸಿಲ್ಲ. ಪೊಲೀಸ್‌ ತನಿಖಾ ತಂಡ ಮುಂಬೈಗೆ ತೆರಳಿದ್ದು, ಪ್ರಾಧಿಕಾರಕ್ಕೆ ದಾಖಲೆಗಳನ್ನು ಪೂರೈಸಿ, ಖದೀರ್‌ ಅವರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಬಿಡಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ್‌ ಡಿ.ಎಲ್‌. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.