ಭಾಲ್ಕಿ: ಕಲ್ಯಾಣ ಕ್ರಾಂತಿಯ ನಂತರ ಕಲ್ಯಾಣದಿಂದ ಉಳವಿಯವರೆಗೆ ವಚನಗಳು ಉಳಿಸಿ, ರಕ್ಷಿಸಿದ ವಚನ ಮೂರ್ತಿ ಎಂದರೆ ಅಕ್ಕನಾಗಮ್ಮತಾಯಿ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಪಂಚಮಿ, ಅಕ್ಕನಾಗಮ್ಮ ಜಯಂತಿ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಣ್ಣನವರ ವ್ಯಕ್ತಿತ್ವ ರೂಪಗೊಳ್ಳಲು ಅಕ್ಕನಾಗಮ್ಮ ತಾಯಿಯವರದ್ದು ಬಹುದೊಡ್ಡ ಪಾತ್ರವಿದೆ. ಬಸವಣ್ಣನವರ ಬಾಲ್ಯದಿಂದ ಕೊನೆಯವರೆಗೂ ಅವರ ಜೊತೆಗಿದ್ದು ಅವರ ಹೆಗಲಿಗೆ ಹೆಗಲು ಕೊಟ್ಟು ಚಳುವಳಿ ಮುನ್ನಡೆಸಲು ಅವಿರತವಾಗಿ ಶ್ರಮಿಸಿದರು ಎಂದು ತಿಳಿಸಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಲಿಂಗಾಯತ ಧರ್ಮ ಅತ್ಯಂತ ವೈಚಾರಿಕ ಮತ್ತು ವೈಜ್ಞಾನಿಕ ಧರ್ಮವಾಗಿದೆ. ದೇಶದಲ್ಲಿ ಲಕ್ಷಾಂತರ ಮಕ್ಕಳು ಪೌಷ್ಟಿಕ ಆಹಾರ ಸಿಗದೆ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅದ್ಯಾಗೂ ನಾವು ಮಕ್ಕಳಿಗೆ ಹಾಲು ಕುಡಿಸದೇ ಕಲ್ಲನಾಗರಿಗೆ ಹಾಲನ್ನು ಹಾಕುತ್ತೇವೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಇದನ್ನು ಮನಗಂಡು ಶ್ರೀಮಠದ ವತಿಯಿಂದ ಪ್ರತಿವರ್ಷ ಬಡಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವಪಂಚಮಿಯನ್ನು ಸಡಗರದಿಂದ ಆಚರಣೆ ಮಾಡುತ್ತಿದ್ದೇವೆ. ಇದು ಎಲ್ಲ ಕಡೆ ಆಚರಣೆ ಮಾಡಬೇಕು ಎಂದು ಹೇಳಿದರು.
ಅರ್ಬನ್ ಬ್ಯಾಂಕ್ ನಿರ್ದೇಶಕಿ ಮನಿಷಾ, ಸಂಗಮೇಶ ವಾಲೆ, ತಾಲ್ಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ಮಲ್ಲಮ್ಮ ಆರ್.ಪಾಟೀಲ, ಶಿವಾನಂದ ಹೈಬತಪುರೆ, ಮಹಾನಂದಾ ಮಾಶೆಟ್ಟೆ, ಶ್ರೀದೇವಿ ಶಾಂತಯ್ಯ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.