ADVERTISEMENT

ಕೂಡಿಟ್ಟ ಹಣವೆಲ್ಲ ಆಶ್ರಮಕ್ಕೆ ಕೊಟ್ಟ ಕಾಶೀನಾಥ: ಸ್ವಾಮಿ ಅಭಯಾನಂದ ಮಹಾರಾಜ

ಕಾಶೀನಾಥ ವಿಶ್ವಕರ್ಮ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಸ್ವಾಮಿ ಅಭಯಾನಂದ ಮಹಾರಾಜ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 16:41 IST
Last Updated 19 ಮಾರ್ಚ್ 2021, 16:41 IST
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಕಾಶೀನಾಥ ವಿಶ್ವಕರ್ಮ ನುಡಿ ನಮನ ಕಾರ್ಮಕ್ರಮದಲ್ಲಿ ಸ್ವಾಮಿ ಜ್ಯೋತಿರ್ಮಯಾನಂದ ಮಾತನಾಡಿದರು
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಕಾಶೀನಾಥ ವಿಶ್ವಕರ್ಮ ನುಡಿ ನಮನ ಕಾರ್ಮಕ್ರಮದಲ್ಲಿ ಸ್ವಾಮಿ ಜ್ಯೋತಿರ್ಮಯಾನಂದ ಮಾತನಾಡಿದರು   

ಬೀದರ್‌: ‘ಸ್ವಾಮಿ ವಿವೇಕಾನಂದರ ವಿಶ್ವ ಧರ್ಮದ ಪರಿಕಲ್ಪನೆ ಏನೆಂಬುದು ಚೆನ್ನಾಗಿ ಅರಿತಿದ್ದ ಆಧ್ಯಾತ್ಮಿಕ ಜೀವಿ ಕಾಶೀನಾಥ ವಿಶ್ವಕರ್ಮ ಅವರು ಇಲ್ಲಿ ರಾಮಕೃಷ್ಣ ಆಶ್ರಮದ ಕಟ್ಟಡ ಕಟ್ಟಿ ಜಿಲ್ಲೆಯ ಇತಿಹಾಸದ ಪುಟ ಸೇರಿದ್ದಾರೆ’ ಎಂದು ಬೆಂಗಳೂರಿನ ಯಲಹಂಕದ ರಾಮಕೃಷ್ಣ ವೇದಾಂತ ಆಶ್ರಮದ ಅಧ್ಯಕ್ಷ ಸ್ವಾಮಿ ಅಭಯಾನಂದ ಮಹಾರಾಜರು ಹೇಳಿದರು.

ಇಲ್ಲಿನ ಶಿವನಗರದಲ್ಲಿರುವ ಆಶ್ರಮದ ವಿವೇಕ ಭವನದಲ್ಲಿ ಆಯೋಜಿಸಿದ್ದ ಶ್ರೀ ರಾಮಕೃಷ್ಣರ ಜಯಂತ್ಯುತ್ಸವ ಹಾಗೂ ಕಾಶೀನಾಥ ವಿಶ್ವಕರ್ಮ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಶೀನಾಥ ಅವರು ಕಟ್ಟಿಕೊಟ್ಟ ಕಟ್ಟಡ ಇಂದು ವ್ಯಕ್ತಿ ನಿರ್ಮಾಣದ ಮಹೋನ್ನತ ಚಟುವಟಿಕೆಗಳ ಕೇಂದ್ರವಾಗಿ ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ದೇಶ, ಧರ್ಮ, ಸಮಾಜ, ಸಂಸ್ಕೃತಿ, ಸಂಸ್ಕಾರದ ಸಂರಕ್ಷಣೆ ಜತೆಗೆ ರಾಮಕೃಷ್ಣ ವಿವೇಕಾನಂದರ ಮೌಲಿಕ ಚಿಂತನೆಗಳು ಎಲ್ಲೆಡೆ ಹರಿಯಬೇಕೆಂಬ ನಿಟ್ಟಿನಲ್ಲಿ ಆಶ್ರಮ ಕಟ್ಟಿ ಬೆಳೆಸಿದ ವಿಶ್ವಕರ್ಮ ಅವರು ಸಮಾಜಕ್ಕೆ ಮಾದರಿಯಾಗಿ, ಆದರ್ಶಪ್ರಾಯರಾಗಿ ನಿಲ್ಲುತ್ತಾರೆ. ಅವರಿಂದು ನಮ್ಮ ಮಧ್ಯ ಇಲ್ಲ. ಆದರೆ ಅವರು ಮಾಡಿದ ಕೆಲಸಗಳು ಚಿರಸ್ಥಾಯಿ’ ಎಂದು ಬಣ್ಣಿಸಿದರು.

‘ಎಲ್ಲ ಧರ್ಮಗಳ ಜತೆಗೆ ಸಮಾನತೆ, ಸಹಬಾಳ್ವೆ, ಎಲ್ಲರನ್ನೂ ಸ್ವೀಕರಿಸುವ, ಎಲ್ಲವನ್ನೂ ಒಪ್ಪುವ ವಿವೇಕಾನಂದರ ಸಮಗ್ರ ವಿಶ್ವ ಧರ್ಮ ಕಲ್ಪನೆಯನ್ನು ವಿಶ್ವಕರ್ಮ ಅವರು ಚೆನ್ನಾಗಿ ಅರಿತಿದ್ದರು. ಇದಕ್ಕೆ ಪೂರಕವಾಗಿ, ಪ್ರೇರಕವಾಗಿ ಇಲ್ಲೊಂದು ರಾಮಕೃಷ್ಣ ಆಶ್ರಮದ ಅಗತ್ಯತೆ ಎಷ್ಟಿದೆ ಎಂದು ಮನಗಂಡು, ಸತ್ಯ ಶುದ್ಧ ಕಾಯಕದಿಂದ ಕೂಡಿಟ್ಟ ಒಂದು ಕೋಟಿಗೂ ಅಧಿಕ ಹಣ ಒದಗಿಸಿ ಆಶ್ರಮ ಕಟ್ಟಿಸಿರುವುದು ಸಾಮಾನ್ಯವೇನಲ್ಲ’ ಎಂದರು.

‘ಸದ್ಗುಣಿ, ಸಂಸ್ಕಾರ ಸಂಪನ್ನ ವ್ಯಕ್ತಿ ಈ ರೀತಿ ದಾನ ಮಾಡಿದರೆ ದೇವರಂತೆ ಚಿರಸ್ಥಾಯಿಯಾಗುತ್ತಾರೆ. ಆ ಕೆಲಸ ವಿಶ್ವಕರ್ಮ ಮಾಡಿದ್ದಾರೆ. ಅಂತೆಯೇ ರಾಮಕೃಷ್ಣರ ಜಯಂತಿ ದಿನವೇ ಅವರ ವೈಕುಂಠಸಮರಾಧನೆ ನುಡಿನಮನ ಆಶ್ರಮದಲ್ಲಿ ನಡೆಯುತ್ತಿರುವುದು ಯೋಗಾಯೋಗ’ ಎಂದರು.

‘ಸತ್ಯವೇ ದೇವರು. ಇಡೀ ವಿಶ್ವವೇ ನನ್ನ ದೇಶ. ಇನ್ನೊಬ್ಬರ ಒಳಿತಿಗೆ ಸಾವಿರ ನರಕಕ್ಕೂ ಹೋಗುವಂಥ `ಧರ್ಮ ನನ್ನದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅವರ ವಿಚಾರದ ತಳಹದಿ ಮೇಲೆ ಸನಾತನ ಧರ್ಮದ ಸಂರಕ್ಷಣೆ ಮಾಡಿ, ಸಮೃದ್ಧ ಹಾಗೂ ಸದೃಢ ಭಾರತ ಕಟ್ಟಲು ಸಾಧ್ಯ ಧರ್ಮದಲ್ಲಿ ತಪ್ಪಿಲ್ಲ, ದೋಷವೂ ಇಲ್ಲ. ಆದರೆ ಧರ್ಮದ ಅನುಯಾಯಿಗಳಲ್ಲಿ ದೋಷವಿದೆ. ಇದೇ ಇಂದಿನ ಬಹುತೇಕ ಸಮಸ್ಯೆಗಳಿಗೆ ಕಾರಣ’ ಎಂದು ಶ್ರೀಗಳು ವಿಷಾದಿಸಿದರು.

ಬೀದರ್ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಮಾತನಾಡಿ, ‘ಸಮಾಜದಲ್ಲಿರುವ ಮಠ, ಪೀಠಗಳಲ್ಲಿ ಹೆಚ್ಚಿನವು ವ್ಯಕ್ತಿ ಕೇಂದ್ರೀತವಾಗಿವೆ. ಆದರೆ ರಾಮಕೃಷ್ಣ ವಿವೇಕಾನಂದ ಆಶ್ರಮಗಳು ತತ್ವ ಕೇಂದ್ರೀತವಾಗಿ ಕೆಲಸ ಮಾಡುತ್ತಿವೆ. ಇಲ್ಲಿ ಮಠದ ಅಧ್ಯಕ್ಷರ ಹೆಸರಿನಲ್ಲಿ ಆಸ್ತಿ, ಅಂತಸ್ತು ಸೇರಿ ಏನೂ ಇರಲ್ಲ. ಈ ಕಾರಣಕ್ಕೆ ರಾಮಕೃಷ್ಣ ಆಶ್ರಮ ತಮ್ಮದೇ ಸ್ಥಾನಮಾನ ಹೊಂದಿದೆ’ ಎಂದರು.

‘ಕಾಶೀನಾಥ ವಿಶ್ವಕರ್ಮ ಅವರು ದೊಡ್ಡ ಶ್ರೀಮಂತರಲ್ಲದಿದ್ದರೂ ಬಂದ ಹಣವೆಲ್ಲ ಕೂಡಿಟ್ಟು ಆಶ್ರಮ ಸ್ಥಾಪನೆಗೆ ವಿನಿಯೋಗಿಸಿರುವುದು ಮಾದರಿ. ಕಟ್ಟಡ ನಿರ್ಮಾಣಕ್ಕೆ ಹಣದ ಅಗತ್ಯವಿದ್ದಾಗ ಅವರ ಪತ್ನಿ ಪ್ರೇಮಾ ಅವರು ಮೈಮೇಲಿನ ಬಂಗಾರದ ಒಡವೆಗಳು ಮಾರಿ ಹಣ ಕೊಟ್ಟಿರುವುದು ಅವರ್ಣನೀಯ. ಸಮಾನತೆ, ಮಾನವತೆ ನೆಲೆಗಟ್ಟಿನ ಕಾರ್ಯಕ್ಕೆ ಈ ದಂಪತಿ ನೀಡಿದ ಕೊಡುಗೆ ಇಂದಿನ ಪೀಳಿಗೆಗೆ ಆದರ್ಶ. ಅವರ ಸೇವೆ, ದಾನ, ಶ್ರೇಷ್ಠ ಚಿಂತನೆ, ಆದರ್ಶಗಳು ಸದಾ ಜೀವಂತವಾಗಿವೆ’ ಎಂದರು.

ಕಲಬುರಗಿ ಯುನೈಟೆಡ್ ಆಸ್ಪತ್ರೆ ಮುಖ್ಯಸ್ಥ ಡಾ. ವಿಕ್ರಮ ಸಿದ್ದಾರೆಡ್ಡಿ, ಹಿರಿಯ ಪತ್ರಕರ್ತ ಸ.ದಾ.ಜೋಶಿ, ಪ್ರಮುಖರಾದ ಶಕುಂತಲಾ ತಂಬಾಕೆ, ರಾಜಶೇಖರ ಪಾಟೀಲ ಅಷ್ಟೂರ್, ಪಿ. ಸೋಮಣ್ಣ, ಪದ್ಮಜಾ ವಿಶ್ವಕರ್ಮ, ಕೆ.ಎಂ.ರಾವ್, ಜಯಪ್ರಕಾಶ, ಸಚಿನ್ ವಿಶ್ವಕರ್ಮ, ವೀರಶೆಟ್ಟಿ ಮಣಗೆ ಅವರು ನುಡಿನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.