
ಔರಾದ್: ಇಲ್ಲಿಯ ಪ್ರಸಿದ್ಧ ಅಮರೇಶ್ವರ ದೇವಸ್ಥಾನದ ಮಹಾದ್ವಾರ ಅಪಾಯದ ಅಂಚಿನಲ್ಲಿದ್ದು, ಭಕ್ತರು ಆತಂಕ ಪಡುತ್ತಿದ್ದಾರೆ. ಇತಿಹಾಸ ಪ್ರಸಿದ್ಧ ಈ ದೇವಾಲಯ ಸರ್ಕಾರದ ಅಧೀನದಲ್ಲಿದ್ದರೂ ಭಕ್ತರು ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ದಶಕದ ಮೊದಲು ಭಕ್ತರಿಗೆ ದಾಸೋಹ ಸೇರಿದಂತೆ ಸಕಲ ಸೌಲಭ್ಯ ದೊರೆಯುತ್ತಿತ್ತು. ಆದರೆ ಈಗ ಈ ಎಲ್ಲ ಸೌಲಭ್ಯಕ್ಕೆ ಕತ್ತರಿ ಹಾಕಲಾಗಿದೆ ಎಂದು ಭಕ್ತರು ದೂರುತ್ತಾರೆ. ‘ಭಕ್ತರು ನೀಡಿದ ದೇಣಿಗೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಜಮಾ ಆಗುತ್ತದೆ. ಈ ಹಣದಿಂದಲೇ ದೇವಾಲಯದ ಅಭಿವೃದ್ಧಿ ಮಾಡುವಂತೆ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ಉಪ ವಿಭಾಗಾಧಿಕಾರಿ ಮತ್ತು ತಾಲ್ಲೂಕು ದಂಡಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ದೂರಿದ್ದಾರೆ.
‘ಮಳೆ ಬಂದರೆ ದೇವಸ್ಥಾನದ ಒಳಗೆ ನೀರು ಬರುತ್ತದೆ. ಮಹಾದ್ವಾರ ಹಳೆಯದಾಗಿದ್ದು, ಯಾವ ಕ್ಷಣದಲ್ಲಾದರೂ ಬೀಳಬಹುದಾಗಿದೆ. ರಾತ್ರಿ ವೇಳೆ ಬರುವ ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮತ್ತು ಭದ್ರತೆ ಇಲ್ಲ. ಕಳ್ಳರ ಕಾಟ ಜಾಸ್ತಿಯಾಗಿದೆ. ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಮಾಡಿಕೊಂಡ ಮನವಿಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಳೆ ಮಹಾದ್ವಾರ ಕೆಡವಿ ಹೊಸದಾಗಿ ನಿರ್ಮಿಸುವುದು, ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವುದು, ನಿರಂತರ ದಾಸೋಹ ವ್ಯವಸ್ಥೆ ಮುಂದುವರಿಸಿಕೊಂಡು ಹೋಗುವುದು, ಭದ್ರತಾ ಸಿಬ್ಬಂದಿ ನೇಮಿಸುವುದು, ಕಲ್ಯಾಣ ಮಂಟಪ ನವೀಕರಣ ಮಾಡುವುದು ಸೇರಿದಂತೆ ಮಂದಿರದ ಅಭಿವೃದ್ಧಿಗಾಗಿ ಈಗಾಗಲೇ ಸಂಬಂಧಿತರಿಗೆ ಸಾಕಷ್ಟು ಸಲ ಮನವಿ ಮಾಡಿಕೊಳ್ಳಲಾಗಿದೆ.
ವಾರದೊಳಗೆ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೆ ಇದ್ದರೆ ಮುಜರಾಯಿ ಇಲಾಖೆ ಸಚಿವ ರಾಜಶೇಖರ ಪಾಟೀಲರ ಮನೆ ಎದುರು ಧರಣಿ ನಡೆಲಾಗುವುದು ಎಂದು ವಡ್ಡೆ ಎಚ್ಚರಿಸಿದ್ದಾರೆ.
ಅಮರೇಶ್ವರ ದೇವಸ್ಥಾನದ ಖಾತೆಯಲ್ಲಿ ಹಣ ಇದ್ದರೂ ಅದನ್ನು ಬಳಕೆ ಮಾಡದೆ ಭಕ್ತರಿಗೆ ಸೌಲಭ್ಯದಿಂದ ವಂಚಿಸಲಾಗುತ್ತಿದೆ.
- ಗುರುನಾಥ ವಡ್ಡೆ, ಸಾಮಾಜಿಕ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.