ADVERTISEMENT

ಬೀದರ್‌: ಅಂಬಾ ಭವಾನಿ ಸನ್ನಿಧಿಗೆ ಭಕ್ತಿಯ ಹೆಜ್ಜೆ

ಕಾಲ್ನಡಿಗೆಯಲ್ಲಿ ತುಳಜಾಪೂರಕ್ಕೆ ಅಪಾರ ಭಕ್ತರ ದಂಡು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಅಕ್ಟೋಬರ್ 2025, 6:24 IST
Last Updated 6 ಅಕ್ಟೋಬರ್ 2025, 6:24 IST
ಜಯಘೋಷ ಹಾಕುತ್ತ ತುಳಜಾಪೂರಕ್ಕೆ ಹೊರಟಿರುವ ಯುವಕರು 
ಜಯಘೋಷ ಹಾಕುತ್ತ ತುಳಜಾಪೂರಕ್ಕೆ ಹೊರಟಿರುವ ಯುವಕರು    

ಬೀದರ್‌: ಕೈಯಲ್ಲಿ ಭಗವಾ ಧ್ವಜ ಹಿಡಿದು, ಅಂಬಾ ಭವಾನಿ ಮಾತೆಗೆ ಜಯವಾಗಲಿ ಎಂದು ಘೋಷಣೆಗಳನ್ನು ಹಾಕುತ್ತ ಹೆಜ್ಜೆ ಹಾಕುವ ಇವರಿಗೆ ದಣಿವೆಂಬುದೇ ಇಲ್ಲ. ಬದಲಾಗಿ ಇವರಿಡುವ ಪ್ರತಿಯೊಂದು ಭಕ್ತಿಯ ಹೆಜ್ಜೆ ಇವರ ಹುಮ್ಮಸ್ಸು ಹೆಚ್ಚಿಸುತ್ತದೆ..!

ಎಲ್ಲ ಹಳ್ಳ, ಕೊಳ್ಳಗಳು ನದಿ ಸೇರುವಂತೆ ಜಿಲ್ಲೆಯ ಪ್ರತಿಯೊಂದು ಮಾರ್ಗವೂ ಅಂಬಾ ಭವಾನಿಯ ಕಡೆಗೆ ಮುಖ ಮಾಡುತ್ತವೆ. ಎಲ್ಲ ಕಡೆಗಳಲ್ಲಿಯೂ ಭಕ್ತರ ದಂಡು ಕಾಣಿಸಿಕೊಳ್ಳುತ್ತದೆ. ಅದು ಸಹ ಕಾಲ್ನಡಿಗೆಯಲ್ಲಿ. ಕೆಲವರು ಕುಟುಂಬ ಸದಸ್ಯರೊಂದಿಗೆ ಹೆಜ್ಜೆ ಹಾಕಿದರೆ, ಮತ್ತೆ ಕೆಲವರು ಗ್ರಾಮಸ್ಥರು, ಸ್ನೇಹಿತರೊಂದಿಗೆ ತಂಡೋಪ ತಂಡವಾಗಿ ಹೊರಡುತ್ತಾರೆ. ಮತ್ತೆ ಕೆಲವರು ಏಕಾಂಗಿಯಾಗಿ ಮೌನವಾಗಿಯೇ ಮಂತ್ರ ಹೇಳುತ್ತ ನಡೆಯುತ್ತಾರೆ.

ಸೀಗಿ ಹುಣ್ಣಿಮೆಯ ದಿನ ಮಹಾರಾಷ್ಟ್ರದ ತುಳಜಾಪೂರದ ಅಂಬಾ ಭವಾನಿ ದರ್ಶನಕ್ಕಾಗಿ ಭಕ್ತ ಸಮೂಹವೇ ಅಲ್ಲಿಗೆ ಹೊರಡುತ್ತದೆ. ಅದು ಕೂಡ ಕಾಲ್ನಡಿಗೆಯಲ್ಲಿ ಎನ್ನುವುದು ವಿಶೇಷ. ಅನೇಕ ವರ್ಷಗಳ ಪರಂಪರೆ, ಸಂಪ್ರದಾಯ ಆಧುನಿಕ ಕಾಲಘಟ್ಟದ ಸಕಲ ವ್ಯವಸ್ಥೆಯಲ್ಲೂ ಮುಂದುವರೆದಿದೆ. 

ADVERTISEMENT

ಕಿರಿಯರಿಂದ ಹಿರಿಯ ವಯಸ್ಸಿನವರೆಲ್ಲರೂ ತಾವಿರುವ ಸ್ಥಳದಿಂದ ಅಂಬಾ ಭವಾನಿ ಇರುವ ಜಾಗಕ್ಕೆ ಹೋದರೆ ಇಷ್ಟಾರ್ಥಗಳೆಲ್ಲ ಸಿದ್ಧಿಸುತ್ತವೆ. ಹರಕೆಗಳೆಲ್ಲ ಈಡೇರುತ್ತವೆ ಎಂಬ ಅಚಲ ನಂಬಿಕೆಯೇ ಇದಕ್ಕೆ ಸಾಕ್ಷಿ. ಅಂದಹಾಗೆ, ತುಳಜಾಪೂರಕ್ಕೆ ತೆರಳುವವರಲ್ಲಿ ಎಲ್ಲ ಜಾತಿ, ಮತ, ಪಂಥದವರು ಸೇರಿದ್ದಾರೆ. ಇಲ್ಲಿ ಯಾವುದೇ ತರತಮಕ್ಕೆ ಅವಕಾಶ ಇಲ್ಲ. ಬಡವ–ಶ್ರೀಮಂತ, ಮೇಲು–ಕೀಳೆಂಬ ವ್ಯತ್ಯಾಸವಿಲ್ಲ.

ತುಳಜಾಪೂರದ ಅಂಬಾ ಭವಾನಿ ಪ್ರಮುಖ ಶಕ್ತಿಪೀಠವಾಗಿ ಗುರುತಿಸಿಕೊಂಡಿದೆ. ಇದು ಬೀದರ್‌ ಗಡಿ ಜಿಲ್ಲೆಗೆ ಹೊಂದಿಕೊಂಡಿದ್ದು, ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಅಪಾರ ಭಕ್ತರನ್ನು ಹೊಂದಿದೆ. ಅದರಲ್ಲೂ ದಸರಾ ಬಂತೆಂದರೆ ಇಲ್ಲಿಗೆ ಹೋಗಿ ದರ್ಶನ ಪಡೆಯುವವರ ಸಂಖ್ಯೆ ಅತಿ ಹೆಚ್ಚು. 

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪ್ರತಿ ಮನೆಯಿಂದ ಒಬ್ಬ ಸದಸ್ಯನಾದರೂ ತುಳಜಾಪೂರಕ್ಕೆ ಹೋಗಿ ಅಂಬಾ ಭವಾನಿ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ. ಹೀಗಾಗಿಯೇ ಜನ ಅಲ್ಲಿಗೆ ಹೋಗಿ ಭವಾನಿ ಸನ್ನಿಧಿಯ ದೀಪಗಳಿಗೆ ಎಣ್ಣೆ ಸಮರ್ಪಿಸಿ ಬರುತ್ತಾರೆ. 

ವಿಜಯದಶಮಿಯ ದಿನ ಬನ್ನಿ ಮುಡಿದು, ಮನೆ ದೇವರು, ಹಿರಿಯರಿಗೆ ಬನ್ನಿ ಕೊಟ್ಟು ಆಶೀರ್ವಾದ ಪಡೆದ ನಂತರ ಅಂಬಾ ಭವಾನಿ ಇರುವ ಸ್ಥಳದ ಕಡೆಗೆ ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕುತ್ತಾರೆ. ಮಳೆ, ಚಳಿ, ಬಿಸಿಲು ಲೆಕ್ಕಿಸದೇ ಹಗಲು–ರಾತ್ರಿ ಪಾದಯಾತ್ರೆ ಕೈಗೊಳ್ಳುತ್ತಾರೆ. 

ತುಳಜಾಪೂರದ ಅಂಬಾ ಭವಾನಿಯ ದರ್ಶನಕ್ಕೆ ಹೊರಟಿರುವ ಭಕ್ತರ ದಂಡು ಬೀದರ್‌–ಹುಮನಾಬಾದ್‌ ರಸ್ತೆಯಲ್ಲಿ ಕಂಡಿದ್ದು
ನಾನು ಕಳೆದ 13 ವರ್ಷಗಳಿಂದ ತುಳಜಾಪೂರದ ಅಂಬಾ ಭವಾನಿ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದೇನೆ. ಭವಾನಿಯ ಆಶೀರ್ವಾದದಿಂದ ನಮ್ಮ ಕುಟುಂಬಕ್ಕೆ ಒಳ್ಳೆಯದಾಗಿದೆ.
–ರಮೇಶ ಆಣದೂರ ಗ್ರಾಮಸ್ಥ
ದಸರಾ ಸಂದರ್ಭದಲ್ಲಿ ಅಂಬಾ ಭವಾನಿ ದರ್ಶನ ಪಡೆದರೆ ಇಷ್ಟಾರ್ಥಗಳೆಲ್ಲ ಈಡೇರುತ್ತವೆ. ನಮ್ಮ ಮನೆ ಮಂದಿಯೆಲ್ಲಿ ಪ್ರತಿವರ್ಷ ಕಾಲ್ನಡಿಗೆಯಲ್ಲಿ ತುಳಜಾಪೂರಕ್ಕೆ ಹೋಗುತ್ತೇವೆ.
–ಸಾವಿತ್ರಮ್ಮ ಕಮಠಾಣ ಗ್ರಾಮಸ್ಥೆ

ಹೆಜ್ಜೆ ಹೆಜ್ಜೆಗೂ ಅನ್ನ ಸಂತರ್ಪಣೆ

ತುಳಜಾಪೂರಕ್ಕೆ ಕಾಲ್ನಡಿಗೆಯಲ್ಲಿ ತೆರಳುವವರಿಗೆ ಆಯಾ ಊರಿನವರು ಸಂಘ ಸಂಸ್ಥೆಗಳವರು ಮಾರ್ಗದುದ್ದಕ್ಕೂ ಅನ್ನ ದಾಸೋಹ ಮಾಡುತ್ತಾರೆ. ಪಾನಕ ಕುಡಿಯುವ ನೀರು ಪೂರೈಸುತ್ತಾರೆ. ಆದಕಾರಣ ನಡೆದುಕೊಂಡು ಹೋಗುವವರು ಬುತ್ತಿ ಕಟ್ಟಿಕೊಂಡು ಹೋಗುವ ಪ್ರಮೇಯವೇ ಇಲ್ಲ.  ಕಾಲ್ನಡಿಗೆ ಮೂಲಕ ಹೋಗುವ ಭಕ್ತರಿಗೆ ಆತಿಥ್ಯ ಉಪಾಚಾರ ಮಾಡುವುದೇ ಅಂಬಾ ಭವಾನಿಯ ನಿಜವಾದ ಸೇವೆ ಎಂದು ನಂಬಿದವರು ಹಲವರಿದ್ದಾರೆ. ಇನ್ನೂ ಮಾರ್ಗ ಮಧ್ಯದಲ್ಲಿ ಬರುವ ಮಠ ಮಂದಿರ ಹಾಗೂ ಹೊಲಗಳಲ್ಲಿ ಭಕ್ತರಿಗೆ ವಾಸ್ತವ್ಯಕ್ಕೂ ಅವಕಾಶ ಕಲ್ಪಿಸುತ್ತಾರೆ. ಈ ಕಾರಣಕ್ಕಾಗಿಯೇ ಭಕ್ತರು ಯಾವುದೇ ಚಿಂತೆಯಿಲ್ಲದೆ ಭವಾನಿಯ ಭಕ್ತಿಯಲ್ಲಿ ಮೈಮರೆತು ಹೆಜ್ಜೆ ಹಾಕುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.