ADVERTISEMENT

‘ಬಡವರಿರುವ ಶ್ರೀಮಂತ ಭಾರತ ಬೇಕಿಲ್ಲ’

ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಅಪ್ಪಗೆರೆ ಸೋಮಶೇಖರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:08 IST
Last Updated 15 ಏಪ್ರಿಲ್ 2024, 16:08 IST
ಬೀದರ್‌ನಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಜಿ.ಸಾಗರ, ಭಾಲ್ಕಿ ಗುರುಬಸವ ಪಟ್ಟದ್ದೇವರು ಸೇರಿದಂತೆ ಇತರೆ ಗಣ್ಯರು ಉದ್ಘಾಟಿಸಿದರು
ಬೀದರ್‌ನಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಜಿ.ಸಾಗರ, ಭಾಲ್ಕಿ ಗುರುಬಸವ ಪಟ್ಟದ್ದೇವರು ಸೇರಿದಂತೆ ಇತರೆ ಗಣ್ಯರು ಉದ್ಘಾಟಿಸಿದರು   

ಬೀದರ್‌: ಡಾ.ಬಿ.ಆರ್.ಅಂಬೇಡ್ಕರ್‌ ಅವರ 133ನೇ ಜನ್ಮದಿನೋತ್ಸವ ಸಮಿತಿಯಿಂದ ನಗರದಲ್ಲಿ ಭಾನುವಾರ ರಾತ್ರಿ ಬಾಬಾ ಸಾಹೇಬರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. 

ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಅಪ್ಪಗೆರೆ ಸೋಮಶೇಖರ ಮಾತನಾಡಿ,‘ಬಡವರಿರುವ ಶ್ರೀಮಂತ ಭಾರತ ನಮಗೆ ಬೇಕಿಲ್ಲ. ಸಮಾನತೆ, ಸಮೃದ್ಧ ಭಾರತ ಬೇಕಿದೆ’ ಎಂದರು.

ದೇಶದ ಭೂಮಿಯನ್ನು ರಾಷ್ಟ್ರೀಕರಣ ಮಾಡಿ ಸಹಕಾರ ಬೇಸಾಯ ಪದ್ಧತಿ ಮೂಲಕ ಕೃಷಿ ಅಭಿವೃದ್ಧಿ ಪಡಿಸಬೇಕು. ದೇಶದ ಎಲ್ಲರಿಗೂ ರಕ್ಷಾ ಕವಚವಾಗಿರುವ ಸಂವಿಧಾನದ ಕತೃ ಅಂಬೇಡ್ಕರ್‌ ಅವರ ಜಯಂತಿಯನ್ನು ಎಲ್ಲ ಮಠ, ಮಂದಿರ, ಮಸೀದಿ, ವಿಹಾರಗಳಲ್ಲಿ ಆಚರಿಸುವಂತಾಗಬೇಕು. ಆಗ ನಿಜವಾದ ಭಾರತೀಯರ ಭಾವೈಕ್ಯ ತೋರಿಸಿದಂತಾಗುತ್ತದೆ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಜಿ.ಸಾಗರ ಮಾತನಾಡಿ,‘ಸಂವಿಧಾನದ ಪ್ರಕಾರ ಆಡಳಿತ ನಡೆಸುವ ಹೆಸರಲ್ಲಿ ದೇಶದ ವಿವಿಧ ವಲಯಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಸಂವಿಧಾನದ ಆಶಯಕ್ಕೆ ಧಕ್ಕೆ ಬಂದಿದೆ. ದೇಶದ ಸಂಪತ್ತು ಬಂಡವಾಳಶಾಹಿಗಳ ಹಿಡಿತಕ್ಕೆ ಒಳಗಾಗುತ್ತಿರುವುದನ್ನು ದೇಶದ ಪ್ರಜೆಗಳು ತಡೆಯಬೇಕಿದೆ’ ಎಂದರು.

ವಿಠ್ಠಲ್ ವಗ್ಗನ ಮಾತನಾಡಿ,‘ಜಾತಿ ವ್ಯವಸ್ಥೆ ಬೇರು ಬಿಟ್ಟಿರುವ, ಬಿಡುತ್ತಿರುವ ಸಾಹಿತ್ಯ ಕೃತಿಗಳು ಕೈಬಿಡಬೇಕು. ಜಾತಿ ವ್ಯವಸ್ಥೆ ರೂಪಿಸುವ ಕೃತಿಗಳನ್ನು ಸಾಹಿತಿಗಳು ಬರೆಯಬಾರದು’ ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ,‘ಸಾಮಾಜಿಕ ಸಮಾನತೆಗಾಗಿ 12ನೇ ಶತಮಾನದಲ್ಲಿ ಬಸವಣ್ಣನವರು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಮಹಿಳಾ ಸಮಾಜಕ್ಕೆ ಸಾಮಾಜಿಕ ನ್ಯಾಯಕ್ಕಾಗಿ ಬಾಬಾ ಸಾಹೇಬರು ಕಾನೂನು ಮಂತ್ರಿ ಸ್ಥಾನ ತ್ಯಜಿಸಿದ್ದರು. ಇಬ್ಬರ ಕೊಡುಗೆ ಸಮಾಜ ಮರೆಯಬಾರದು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ,‘ಬುದ್ಧ, ಬಸವ, ಅಂಬೇಡ್ಕರ್‌ ಅವರನ್ನು ಅರ್ಥ ಮಾಡಿಕೊಂಡು ನುಡಿದಂತೆ ನಡೆಯಬೇಕು’ ಎಂದು ತಿಳಿಸಿದರು.

ಮುಖಂಡ ರಮೇಶ ಡಾಕುಳಗಿ ಮಾತನಾಡಿ,‘ಅಂಬೇಡ್ಕರ್‌ ಅವರ ಪ್ರಯತ್ನದಿಂದ ದೇಶದ ಎಲ್ಲ ನಾಗರಿಕರಿಗೂ ಮತದಾನದ ಹಕ್ಕು ಸಿಕ್ಕಿದೆ’ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಸಂಘ ರಕ್ಷಿತ, ಮುಖಂಡರಾದ ಪ್ರಕಾಶ ಮಾಳಗೆ, ವಿಷ್ಣುವರ್ಧನ್‌ ವಾಲದೊಡ್ಡಿ, ಅವಿನಾಶ ದೀನೆ, ಪವನ ಮಿಠಾರೆ, ವಿನೋದ ಬಂದಗೆ, ಅನಿಲಕುಮಾರ ಬೇಲ್ದಾರ, ಬಾಬುರಾವ್‌ ಪಾಸ್ವಾನ್‌, ರಾಜಕುಮಾರ ಬನ್ನೇರ್, ಕಲ್ಯಾಣರಾವ ಭೋಸ್ಲೆ, ಶಿವಕುಮಾರ ನೀಲಿಕಟ್ಟೆ, ಶ್ರೀಪತರಾವ ದೀನೆ, ಅಂಬಾದಾಸ ಗಾಯಕವಾಡ, ಸಾಹಿತಿ ಸುಬ್ಬಣ್ಣ ಕರಕನಳ್ಳಿ, ವಿಜಯಕುಮಾರ ಸೋನಾರೆ, ಶಾಲಿವಾನ ಬಡಿಗೇರ್, ಬಾಬುರಾವ ಮಿಠಾರೆ, ರಾಹುಲ ಡಾಂಗೆ, ರವಿ ಭೂಸಂಡೆ, ರಾಜಕುಮಾರ ಡೊಂಗರೆ, ವಿನಯ್‌ ಮಾಳಗೆ, ರಂಜೀತಾ, ಜೈನೂರು ಸುಧಾರಾಣಿ ಗುಪ್ತಾ, ರಾಜಕುಮಾರ ವಾಘಮಾರೆ, ಪ್ರಕಾಶ ಭಾವಿಕಟ್ಟಿ, ರಾಹುಲ್‌ ಹಾಲಹಿಪ್ಪರ್ಗ, ರಾಜಕುಮಾರ ಗುನ್ನಳ್ಳಿ, ಮಹೇಶ ಗೋರನಾಳಕರ್, ಅರುಣ ಪಟೇಲ್‌ ಹಾಜರಿದ್ದರು. ಪ್ರತಿಭಾವಂತ ಮಕ್ಕಳನ್ನು ಸತ್ಕರಿಸಲಾಯಿತು.

ಬೀದರ್‌ನಲ್ಲಿ ಭಾನುವಾರ ರಾತ್ರಿ ನಡೆದ ಬಾಬಾ ಸಾಹೇಬರ ಜಯಂತಿ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು

ತಡರಾತ್ರಿ ವರೆಗೆ ಸಂಭ್ರಮ

ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಅಂಗವಾಗಿ ನಗರದ ವಿವಿಧ ಭಾಗಗಳಿಂದ ಬಾಬಾ ಸಾಹೇಬರ ಭಾವಚಿತ್ರಗಳನ್ನು ಅಲಂಕರಿಸಿದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಡಿ.ಜೆ ಸದ್ದಿಗೆ ಕುಣಿಯುತ್ತ ಅಂಬೇಡ್ಕರ್‌ ಪರ ಘೋಷಣೆಗಳನ್ನು ಕೂಗುತ್ತ ಹೆಜ್ಜೆ ಹಾಕಿದರು. ಎಲ್ಲ ವಯೋಮಾನದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯ ಜನ ಅಂಬೇಡ್ಕರ್‌ ವೃತ್ತಕ್ಕೆ ಬಂದದ್ದರಿಂದ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ತಡರಾತ್ರಿ ವರೆಗೆ ಸಂಭ್ರಮಾಚರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.