
ಬೀದರ್: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಶಿವಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಪೌರಾಡಳಿತ ಸಚಿವ ರಹೀಂ ಖಾನ್ ಉದ್ಘಾಟಿಸಿ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳವಳಿಯಲ್ಲಿ ಅವರಿಗೆ ಅಂಬಿಗರ ಚೌಡಯ್ಯನವರು ಹೆಗಲಾಗಿ ನಿಂತಿದ್ದರು. ತಮ್ಮ ನೇರ, ನಿಷ್ಠುರ, ತೀಕ್ಷ್ಣ ಬರಹಗಳ ಮೂಲಕ ವರ್ಣ ವ್ಯವಸ್ಥೆ, ಲಿಂಗ ತಾರತಮ್ಯ, ಅಸ್ಪೃಶ್ಯತೆ ಮುಂತಾದ ಸಾಮಾಜಿಕ ಅನಿಷ್ಠಗಳ ವಿರುದ್ಧ ನಿರಂತರ ಜಾಗೃತಿ ಮೂಡಿಸಿದರು ಎಂದರು.
ನಿರ್ಮಲ ಭಕ್ತಿ, ನಿಸ್ವಾರ್ಥ ಸೇವೆಯೇ ಭಗವಂತನನ್ನು ಒಲಿಸಿಕೊಳ್ಳುವ ಮಾರ್ಗ. ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವವನ್ನು ಸಾರಿದ ಮಹಾನ್ ಶರಣ ಅಂಬಿಗರ ಚೌಡಯ್ಯ. ಅವರು 12ನೇ ಶತಮಾನದಲ್ಲೇ ಅಸ್ಪೃಶ್ಯತೆಯ ವಿರುದ್ಧ ಧೈರ್ಯವಾಗಿ ಹೋರಾಡಿ, ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಂಕು ಡೊಂಕುಗಳನ್ನು ತಿದ್ದುವ ಮಹತ್ವದ ಕಾರ್ಯ ಮಾಡಿದರು ಎಂದು ಹೇಳಿದರು.
ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, 12ನೇ ಶತಮಾನದಲ್ಲಿ ಹಾವೇರಿಯಿಂದ ಬಸವಕಲ್ಯಾಣಕ್ಕೆ ಆಗಮಿಸಿದ ನಿಜಶರಣ ಅಂಬಿಗರ ಚೌಡಯ್ಯನವರು, ಜನರನ್ನು ನದಿಯ ಒಂದು ದಡದಿಂದ ಮತ್ತೊಂದು ದಡ ಸೇರಿಸುವ ಕೆಲಸ ಮಾಡುತ್ತಿದ್ದರು. ತಮ್ಮ ನೇರ, ನಿಷ್ಠುರ ಬರಹಗಳ ಮೂಲಕ ಗುರುತಿಸಿಕೊಂಡಿದ್ದಾರೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮಾಣಿಕ್ ನೇಳಗಿ, ಚೌಡಯ್ಯನವರು ಶರಣ ಚಳವಳಿಯಲ್ಲಿ ಪಾಲ್ಗೊಂಡು, ಸಾಮಾಜಿಕ ಬದಲಾವಣೆಗೆ ಶ್ರಮಿಸಿದವರು. ತನ್ನ ಸಂಪತ್ತು ದಾನವಾಗಿ ಕೊಟ್ಟ ಮಹಾನ್ ವ್ಯಕ್ತಿ. ಇವರು 278 ವಚನಗಳನ್ನು ರಚಿಸಿದ್ದಾರೆ. ಕಾಯಕ, ಭಕ್ತಿಗೆ ಮಹತ್ವ ಕೊಟ್ಟಿದ್ದರು. ಅಂಬಿಗರ ಚೌಡಯ್ಯನವರ ತತ್ವ ಸಿದ್ಧಾಂತ ಆದರ್ಶವನ್ನು ಯುವ ಪೀಳಿಗೆ ಪಾಲಿಸಬೇಕು. ದುಶ್ಚಟಗಳಿಗೆ ಬಲಿಯಾಗಬಾರದು ಎಂದು ತಿಳಿಸಿದರು.
ಬೀದರ್ ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಟೋಕರಿ ಕೋಳಿ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ, ಉಪಾಧ್ಯಕ್ಷ ಸುನೀಲ್ ಕಾಶೆಂಪುರೆ, ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ ಕರಣೆ, ಅಂಬಿಗರ ಚೌಡಯ್ಯನವರ ಸಂಘದ ಅಧ್ಯಕ್ಷ ಅಶೋಕ್ ಬಂಡೆ, ಸುನೀಲ್ ಭಾವಿಕಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮತ್ತಿತರರು ಪಾಲ್ಗೊಂಡಿದ್ದರು.
ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಬಳಿಕ ನಗರದ ಪ್ರಮುಖ ಮಾರ್ಗಗಳಲ್ಲಿ ಅವರ ಭಾವಚಿತ್ರದ ಮೆರವಣಿಗೆ ಜರುಗಿತು.
ಬೀದರ್‌ನ ನೌಬಾದ್ ಸಮೀಪದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಗೌರವ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮುಖಂಡರಾದ ಈಶ್ವರ ಸಿಂಗ್ ಠಾಕೂರ್ ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕ ರಾಜಶೇಖರ ನಾಗಮೂರ್ತಿ ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಪಾಟೀಲ ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ ಬಾವಗಿ ರವೀಂದ್ರ ಬಾಲೆಬಾಯಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ರೆಡ್ಡಿ ಗಣೇಶ ಭೋಸ್ಲೆ ಪ್ರಕಾಶ ಮರಕಲ್ ಭೀಮಣ್ಣಾ ಚಿಕ್ಕಪೇಟ್ ರಾಜು ಜಮಾದಾರ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿವಾಸ ಚೌಧರಿ ಹಾಜರಿದ್ದರು.
ಜಿಲ್ಲಾ ಟೋಕ್ರಿ ಕೋಳಿ ಸಮಾಜ ಜನಕಲ್ಯಾಣ ಸೇವಾ ಸಂಘ ಹಾಗೂ ಸ್ಪರ್ಶ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಶಿಬಿರದಲ್ಲಿ 35 ಜನ ರಕ್ತದಾನ ಮಾಡಿದರು. ಸಂಘದ ಅಧ್ಯಕ್ಷ ಸತ್ಯ ಪ್ರಕಾಶ್ ಸ್ಪರ್ಶ ಆಸ್ಪತ್ರೆಯ ಡಾ. ಲೋಕೇಶ್ ಹಿರೇಮಠ ಸಂಘದ ಉಪಾಧ್ಯಕ್ಷ ಹರೀಶ್ ಅಗ್ರಹಾರ ಮುಖಂಡ ಈಶ್ವರ ಸಿಂಗ್ ಠಾಕೂರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.