
ಬೀದರ್: ‘ಹಾವೇರಿ ಜಿಲ್ಲೆಯಲ್ಲಿ ಬರುವ ಜನವರಿ 14,15ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರು ಪೀಠದ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೆರವೇರಿಸುವರು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಜ.14ರಂದು ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ, ಐಕ್ಯ ಮಂಟಪ ಪೂಜೆ, ಸಾಮೂಹಿಕ ರಕ್ತದಾನ ಶಿಬಿರ, ಸಾಮೂಹಿಕ ಸರಳ ವಿವಾಹ ಮಹೋತ್ಸವ, ಶಾಂತಮುನಿ ಸ್ವಾಮೀಜಿ 10ನೇ ಸ್ಮರಣೋತ್ಸವ, ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ವಚನ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಸಂಜೆ ಗಂಗಾರತಿ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಮಾಹಿತಿ ಹಂಚಿಕೊಂಡರು.
ಜ.15ರಂದು ಧರ್ಮ ಧ್ವಜಾರೋಹಣ, ಧರ್ಮಸಭೆ, ನಿಜಶರಣ ಅಂಬಿಗರ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ಥಳಿ, ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ, ಚೌಡಯ್ಯನವರ 906ನೇ ಜಯಂತಿ ಉತ್ಸವ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಪೀಠಾರೋಹದಣ ದಶಮಾನೋತ್ಸವ, ವಚನ ಗ್ರಂಥ ಮಹಾ ರಥೋತ್ಸವ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.
ಬಸವಕಲ್ಯಾಣದ ತ್ರಿಪುರಾಂತ ಕೆರೆಯಲ್ಲಿ ಅಂಬಿಗರ ಚೌಡಯ್ಯನವರ ಪ್ರತಿಮೆ ಸ್ಥಾಪನೆಗೆ ಮಾಜಿಶಾಸಕ ದಿವಂಗತ ಬಿ. ನಾರಾಯಣರಾವ್ ಅಧಿಕಾರದ ಅವಧಿಯಲ್ಲಿ ಪ್ರಯತ್ನಗಳು ನಡೆದಿದ್ದವು. ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಕೂಡ ಭರವಸೆ ನೀಡಿತ್ತು. ಅದರಂತೆ ಪ್ರತಿಮೆ ಸ್ಥಾಪಿಸಬೇಕು. ಬಸವಕಲ್ಯಾಣ ಹಾಗೂ ಬೀದರನಲ್ಲಿ ಚೌಡಯ್ಯನವರ ವೃತ್ತ ನಿರ್ಮಿಸಬೇಕೆಂದು ಮನವಿ ಮಾಡಿದರು.
ಬೀದರ್ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಅಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವ ಸಂಭ್ರಮದಿಂದ ನೆರವೇರಲಿದೆ. ಬೀದರ್ ಜಿಲ್ಲೆಯೊಂದರಿಂದಲೇ ಐದು ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಪ್ರಮುಖರಾದ ಬಸವರಾಜ ಸಪ್ಪಣ್ಣಗೊಳ್, ಸುನೀಲ ಕಾಶೆಂಪುರ್, ಸುನೀಲ ಭಾವಿಕಟ್ಟಿ, ಮಾರುತಿ ಮಾಸ್ಟರ್, ಶರಣಪ್ಪ ಅಣ್ಣಾಜಿ, ಷಣ್ಮುಖಪ್ಪ ಶೇಖಾಪುರ, ಅಪ್ಪಾರಾವ್ ಬ್ಯಾಲಳ್ಳಿಕರ್, ಶರಣು ಕಂದಗೂಳ್, ಅರುಣಕುಮಾರ ಬಾವಗೆ, ಶರಣಪ್ಪ ಗದ್ಲೇಗಾಂವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.