
ಹುಲಸೂರ: ತಾಲ್ಲೂಕಿನ ಮೇಹಕರ ಠಾಣಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲಾ ಮಕ್ಕಳು ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ತೆರೆದ ಮನೆ ಪಾಠ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೊಲೀಸರ ಜೊತೆ ಸಂವಾದ ನಡೆಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಿಎಸ್ಐ ಗಂಗಮ್ಮ ಅವರು, ಪೊಲೀಸ್ ಎಂದರೆ ಸಾಮಾನ್ಯವಾಗಿ ಮಕ್ಕಳು ಭಯ ಪಡುವುದು ಸಹಜ. ಭಯ ತೊಲಗಿಸಿ, ಮಕ್ಕಳು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಅವಶ್ಯವೆನಿಸಿದಾಗ ಪೊಲೀಸ್ ಸಹಾಯ ಪಡೆಯಲು ಮಕ್ಕಳ ಸ್ನೇಹಿ ವಾತಾವರಣ ಸೃಷ್ಠಿಸಲು ‘ತೆರೆದ ಮನೆ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098 ಆರಂಭಿಸಲಾಗಿದೆ. ಪರಿಸರದ ಸುತ್ತಮುತ್ತ ಬಾಲ್ಯವಿವಾಹ ನಡೆಯುತ್ತಿದ್ದರೆ, ಲೈಂಗಿಕ ದೌರ್ಜನ್ಯ ಹಾಗೂ ಇತರೆ ಸಮಸ್ಯೆ ಬಗ್ಗೆ ಸಹಾಯವಾಣಿಗೆ ಮಕ್ಕಳು ತಿಳಿಸಬಹುದು. ಯಾವುದೇ ಕಾರಣಕ್ಕೂ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು.
ಹಾಗೆಯೇ ಠಾಣಾಧಿಕಾರಿಯು ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳು ‘ಕೈಗೆ ಬೇಡಿ ಏಕೆ ಹಾಕ್ತಾರೆ, ಮಕ್ಕಳನ್ನು ಜೈಲಿನಲ್ಲಿ ಇಟ್ಟುಕೊಳ್ಳುವುದಿಲ್ಲವೇ, ಪಿಸ್ತೂಲ್ ಯಾವಾಗ ಬಳಸುತ್ತೀರಾ, ಕಳ್ಳರನ್ನು ಹಿಡಿದು ಏನ್ ಮಾಡುತ್ತೀರಾ..’ –ಎಂಬ ಕುತೂಹಲದ ಪ್ರಶ್ನೆಗಳನ್ನು ಠಾಣಾಧಿಕಾರಿಗೆ ಕೇಳಿ ಗೊಂದಲ ನಿವಾರಿಸಿಕೊಂಡರು.
ಪೊಲೀಸ್ ಇಲಾಖೆ ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಎಎಸ್ಐ ಶರಣಪ್ಪ ಪಟ್ನೆ, ಎಎಸ್ಐ ಹನುಮಂತ ಶರ್ಮಾ, ಗೌಸೋದ್ದಿನ್, ರಾಜಕುಮಾರ ಮೆಹತ್ರೆ, ಪ್ರಕಾಶ ಇಟಿ, ದತ್ತಾತ್ರಿ ಮಹರಾಜ ಆಯಾ ಶಾಲಾ ಶಿಕ್ಷಕರು ಸೇರಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.