ADVERTISEMENT

ಬೀದರ್| ಉದ್ಘಾಟನಾ ‘ಭಾಗ್ಯ’ ಕಾಣದ ಅಂಗನವಾಡಿ

ಮಳೆ ಬಂದರೆ ತೊಟ್ಟಿಕ್ಕುವ ಹಳೆ ಕಟ್ಟಡ: ಕಿತ್ತು ಹೋದ ಕಿಟಕಿ, ಬಾಗಿಲುಗಳು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 19:30 IST
Last Updated 14 ಡಿಸೆಂಬರ್ 2019, 19:30 IST
ಕಮಲನಗರದ ಎಂಪಿಎಸ್ ಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕೇಂದ್ರದ ಕಟ್ಟಡದ ಹೊರನೋಟ
ಕಮಲನಗರದ ಎಂಪಿಎಸ್ ಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕೇಂದ್ರದ ಕಟ್ಟಡದ ಹೊರನೋಟ   

ಕಮಲನಗರ: ಪಟ್ಟಣದ ಮಾದರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣವಾಗಿ ಒಂದು ವರ್ಷ ಕಳೆದರೂ ಉದ್ಘಾಟನಾ ಭಾಗ್ಯ ಕಂಡಿಲ್ಲ.

ಕಮಲನಗರ ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ 140 ಮನೆಗಳಿವೆ. ಅಂಗನವಾಡಿ ಕೇಂದ್ರ ತೆರೆದು 15 ವರ್ಷವಾಯಿತು. ಕೆಲವು ವರ್ಷಗಳಿಂದ ಸಣ್ಣ ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಇದೇ ಕೊಠಡಿಯಲ್ಲಿ ದಿನಸಿ–ಸಾಮಗ್ರಿಗಳ ಶೇಖರಣೆ, ಅಡುಗೆಮನೆ, ಸರ್ಕಾರಿ ಕಡತ, ಮಕ್ಕಳ ಓದು ಹಾಗೂ ಮಕ್ಕಳಿಗೆ ಆಟ–ಪಾಠ ಎಲ್ಲ ನಡೆಯುತ್ತಿದೆ.

ಈಗಿರುವ ಹಳೆ ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 2015-16ನೇ ಸಾಲಿನಲ್ಲಿ ಹೈದರಾಬಾದ್(ಕಲ್ಯಾಣ) ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ₹13.7 ಲಕ್ಷ ನೀಡಿತ್ತು. ಅಂಗನವಾಡಿಯನ್ನೂ ಸಹ ನಿರ್ಮಿಸಲಾಗಿದೆ. ಆದರೆ ಇನ್ನೂ ಅದು ಬಳಕೆಗೆ ಮುಕ್ತವಾಗಿಲ್ಲ.

ADVERTISEMENT

ನೂತನ ಕಟ್ಟಡದ ಸುತ್ತ ಗಿಡ–ಗಂಟಿ ಬೆಳೆದು ಹುಳ, ವಿಷ ಜಂತುಗಳ ಆವಾಸಸ್ಥಾನವಾಗಿದೆ. ಅಲ್ಲದೆ, ಸುತ್ತಲೂ ಜನ ಬಯಲು ಬಹಿರ್ದೆಸೆ ಮಾಡುತ್ತಾರೆ. ಇದೀಗ ಶಾಲೆ ಹೊಸಕಟ್ಟಡವೊಂದನ್ನು ಸಹ ನಿರ್ಮಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಹಳೆ ಕಟ್ಟಡ: ‘ಸದ್ಯ 15 ವರ್ಷದ ಹಿಂದಿನ ಹಳೆಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಕೇಂದ್ರಕ್ಕೆ ನಿತ್ಯವೂ 19 ಮಕ್ಕಳು ಬರುತ್ತಾರೆ. ಈ ಹಳೆ ಕಟ್ಟಡದಲ್ಲಿ ಚಿಕ್ಕ ಮಕ್ಕಳು ಕುಳಿತುಕೊಳ್ಳಲು ಸಮಸ್ಯೆಯಾಗುತ್ತಿದೆ. ಕಟ್ಟಡದ ಕಿಟಕಿಗಳು ಸರಿಯಾಗಿಲ್ಲ. ಬಾಗಿಲು, ಮೇಲ್ಛಾವಣಿ ಬಿರುಕು ಬಿಟ್ಟಿದ್ದು ದುರಸ್ತಿಗೊಳಿಸಬೇಕಿದೆ. ಮಳೆ ಬಂದರೆ ಕಟ್ಟಡ ತೊಟ್ಟಿಕ್ಕುತ್ತದೆ. ಈ ಕುರಿತು ಬಾಲವಿಕಾಸ ಸಮಿತಿ ವತಿಯಿಂದ ಕಮಲನಗರ ಪಿಡಿಒ ಅವರಿಗೆ ಮನವಿ ಸಲ್ಲಿಸಿದ್ದೇವೆ ಎನ್ನುತ್ತಾರೆ’ ಅಂಗನವಾಡಿ ಸಹಾಯಕಿ ಸವಿತಾ ಎನಾಗುಂದೆ ಅವರು.

ಇದರಿಂದ ಪಾಲಕರು ಆತಂಕಗೊಂಡಿದ್ದು, ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ನೂತನ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.