ಬೀದರ್: ಜಿಲ್ಲಾ ಬಿಜೆಪಿಯು ಶನಿವಾರ (ಫೆ.10) ‘ಮತದಾರರಿಗೆ ಉತ್ತರಿಸಿ’ ಅಭಿಯಾನ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಹುಡಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕರು ಈವರೆಗೆ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಒತ್ತಾಯಿಸಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗುವ ಹೊಸ್ತಿಲಲ್ಲಿದೆ. ಕ್ಷೇತ್ರದ ಮತದಾರರು ಹಲವಾರು ಭರವಸೆಗಳು, ನಿರೀಕ್ಷೆಗಳನ್ನು ಇಟ್ಟುಕೊಂಡು ವಿಧಾನಸಭೆಗೆ ಕಳಿಸಿಕೊಟ್ಟಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಈ ಅವಧಿಯಲ್ಲಿ ನಿಮ್ಮ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ನೀವು ಅಧಿಕಾರಕ್ಕೆ ಬಂದ ಮೇಲೆ ಏನು ಕೆಲಸ ಮಾಡಿರುವಿರಿ? ಕ್ಷೇತ್ರದ ಮತದಾರರಿಗೆ ವಿವರ ನೀಡುವುದು ನಿಮ್ಮ ಕರ್ತವ್ಯ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
10ಕ್ಕೂ ಹೆಚ್ಚು ಪ್ರಶ್ನೆಗಳ ಮೂಲಕ ‘ಮತದಾರರಿಗೆ ಉತ್ತರಿಸಿ’ ಎಂಬ ವಿನೂತನ ಅಭಿಯಾನ ನಡೆಸಲಾಗುತ್ತಿದೆ. ಮತದಾರರ ಧ್ವನಿಯಾಗಿ ನಾವು ಆಡಳಿತಾರೂಢ ಶಾಸಕರಿಂದ ಉತ್ತರವನ್ನು ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ 10ಕ್ಕೆ ಬೀದರ್ ಉತ್ತರ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಪೌರಾಡಳಿತ ಸಚಿವ ರಹೀಂ ಖಾನ್ ಅವರ ಚಿದ್ರಿಯಲ್ಲಿರುವ ನಿವಾಸಕ್ಕೆ ತೆರಳಿ ಮತದಾರರಿಗೆ ಉತ್ತರಿಸಿ ಎಂಬ ಪತ್ರ ಸಲ್ಲಿಸಲಾಗುತ್ತದೆ. ಬಳಿಕ ನಗರದ ಡಾ.ಅಂಬೇಡ್ಕರ್ ವೃತ್ತದ ಹತ್ತಿರವಿರುವ ಪ್ರವಾಸಿ ಮಂದಿರದಿಂದ ಸಚಿವ ರಹೀಂ ಖಾನ್ ಅವರ ಮನೆಗೆ ತೆರಳಲಾಗುವುದು. ಜಿಲ್ಲಾ ಕೇಂದ್ರ ಬೀದರ್ ಪ್ರಗತಿಗೆ ರಹೀಂ ಖಾನ್ ಮಾಡಿದ್ದೇನು? ಎಂಬ ಪ್ರಶ್ನೆ ಸಹ ಕೇಳಲಾಗುವುದು. ಆನಂತರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಭಾಲ್ಕಿ ವಿಧಾನಸಭೆ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರ ಮನೆಗೆ ತೆರಳಿ ಪತ್ರ ಸಲ್ಲಿಸಿ ಮಾಹಿತಿ ಕೋರಲಾಗುವುದು. ಸಂಜೆ 4ಕ್ಕೆ ಭಾಲ್ಕಿ ಪಟ್ಟಣದ ಗಾಂಧಿ ವೃತ್ತದಿಂದ ಸಚಿವ ಈಶ್ವರ ಖಂಡ್ರೆ ಅವರ ಮನೆಗೆ ತೆರಳಿ ಪತ್ರವನ್ನು ಸಲ್ಲಿಸಿ ವಿವರ ಕೇಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.