ADVERTISEMENT

ಅಸಾದುದ್ದಿನ್ ಓವೈಶಿ ಹೇಳಿಕೆಗೆ ಅರಳಿ ತೀವ್ರ ಖಂಡನೆ

ಖರ್ಗೆ-ಮುಸ್ಲಿಮ್‌ ಸಮುದಾಯದ ಸಂಬಂಧ ಹಾಳುಗೆಡುವ ಯತ್ನ: ಆರೋಪ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 16:16 IST
Last Updated 30 ಸೆಪ್ಟೆಂಬರ್ 2019, 16:16 IST
ಅರವಿಂದಕುಮಾರ ಅರಳಿ
ಅರವಿಂದಕುಮಾರ ಅರಳಿ   

ಬೀದರ್: ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಶಿ ನೀಡಿರುವ ಹೇಳಿಕೆಯನ್ನು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ತೀವ್ರವಾಗಿ ಖಂಡಿಸಿದ್ದಾರೆ.

ಖರ್ಗೆ ಅವರು ಸರ್ವ ಜನಾಂಗದ ಏಳಿಗೆಗೆ ಶ್ರಮಿಸುತ್ತ ಬಂದಿದ್ದಾರೆ. ಅವರು ಯಾವ ಜಾತಿಯವರನ್ನೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಓವೈಶಿ ಕಲಬುರ್ಗಿಯಲ್ಲಿ ಎಐಎಂಐಎಂ ಕಾರ್ಯಕ್ರಮದಲ್ಲಿ ತಮ್ಮ ಭಾಷಣದಲ್ಲಿ ಮುಸ್ಲಿಮ್‌ ಸಮುದಾಯ ಹಾಗೂ ಖರ್ಗೆ ಅವರ ನಡುವೆ ಒಳ್ಳೆಯ ಸಂಬಂಧವನ್ನು ಹಾಳುಗೆಡುವ ಹಾಗೂ ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.

ಖರ್ಗೆ ಅವರು ನಡೆದು ಬಂದ ದಾರಿ ಎಂತಹದ್ದು ಎನ್ನುವುದು ಓವೈಶಿ ಅವರಿಗೆ ಗೊತ್ತಿಲ್ಲದಂತೆ ಕಾಣುತ್ತದೆ. ಖರ್ಗೆ ಅವರು ಮುಸ್ಲಿಮ್‌ ಸಮುದಾಯವನ್ನು ಬಳಸಿಕೊಂಡು, ಅವರಿಗೆ ಏನು ಮಾಡಿದ್ದಾರೆ, ಈಗ ಎಲ್ಲಿದ್ದಾರೆ ಎಂದು ಓವೈಶಿ ಪ್ರಶ್ನಿಸಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಕಲಬುರ್ಗಿಯಿಂದ 1999 ರಿಂದ 2009 ರ ವರೆಗೆ ಇಕ್ಬಾಲ್ ಅಹಮ್ಮದ್ ಸರಡಗಿ ಅವರನ್ನು ಸಂಸದರನ್ನಾಗಿ ಮಾಡಿದ್ದು ಖರ್ಗೆ. ಈ ಅವಧಿಯಲ್ಲಿ ಸರಡಗಿಗೆ ಆಲ್ ಇಂಡಿಯಾ ಹಜ್ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುವ ಅವಕಾಶ ಕೊಡಿಸಿದ್ದರು. 2013-14 ರಲ್ಲಿ ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಕೂಡ ಕೊಡಿಸಿದ್ದರು. ಆದರೆ, ಕೇಂದ್ರ ಸಚಿವಾಲಯದ ಕೆಲಸದ ನಿಮಿತ್ತ ಅವರು ಜಿನಿವಾಕ್ಕೆ ಹೋಗಿದ್ದಾಗ ನಡೆದ ಚುನಾವಣೆಯಲ್ಲಿ ಅನಿವಾರ್ಯ ಕಾರಣಗಳಿಂದ ಸರಡಗಿಗೆ ಸೋಲು ಉಂಟಾಯಿತು. ಆದರೆ, ಖರ್ಗೆ ಅವರು ವಿದೇಶದಿಂದ ಮರಳಿದ ನಂತರ ಹಠ ಬಿಡದೆ ಸರಡಗಿ ಅವರನ್ನು ಮತ್ತೆ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಿಸಿದ್ದರು. ಬಳ್ಳಾರಿಯ ಡಾ. ನಾಸೀರ್ ಹುಸೇನ್ ಅವರನ್ನು 2018 ರಲ್ಲಿ ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡುವುದಕ್ಕೂ ಕಾರಣರಾಗಿದ್ದರು. ಖರ್ಗೆ ಅವರ ಜನಪರ ಕಾರ್ಯಗಳು ಓವೈಶಿಗೆ ತಿಳಿದಿಲ್ಲವೋ ಅಥವಾ ಗೊತ್ತಿದ್ದೂ ಉದ್ದೇಶಪೂರ್ವಕವಾಗಿಯೇ ಈ ರೀತಿ ಹೇಳಿಕೆ ನೀಡಿದ್ದಾರೋ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಓವೈಶಿ ಅವರು ಮೋದಿ ಹಾಗೂ ಅಮಿತ್ ಶಾ ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎನ್ನುವ ಆರೋಪಿಗಳು ಅನೇಕರಿಂದ ಕೇಳಿ ಬರುತ್ತಿವೆ. ಕಲಬುರ್ಗಿಯಲ್ಲಿನ ಅವರ ಹೇಳಿಕೆ ನೋಡಿದರೆ ತಮಗೂ ಅದೇ ರೀತಿಯ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.