ADVERTISEMENT

ಸಚಿವ ಚವಾಣ್ ವಿರುದ್ಧ ಕ್ರಮಕ್ಕೆ ಅರಳಿ ಒತ್ತಾಯ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 13:05 IST
Last Updated 3 ಡಿಸೆಂಬರ್ 2020, 13:05 IST
ಅರವಿಂದಕುಮಾರ ಅರಳಿ
ಅರವಿಂದಕುಮಾರ ಅರಳಿ   

ಬೀದರ್: ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಕಮಲನಗರದಲ್ಲಿ ₹ 9.5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎನ್ನಲಾದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ನವೆಂಬರ್ 30 ರಿಂದಲೇ ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ನಡುವೆ ಸಚಿವರು ಕಾಮಗಾರಿಗೆ ಚಾಲನೆ ನೀಡಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಕರ್ನಾಟಕ ಪಂಚಾಯತ್‍ರಾಜ್ ಅಧಿನಿಯಮ 1993 ರ, ಕರ್ನಾಟಕ ಮುನ್ಸಿಪಾಲಿಟಿ ಅಧಿನಿಯಮ 1964 ರ ಹಾಗೂ ಕರ್ನಾಟಕ ಮುನ್ಸಿಪಾಲಿಟಿ ಅಧಿನಿಯಮ 1976ರ ನಿಯಮಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಚಿವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು ಮಾಡಬೇಕು. ಅವರು ಚಾಲನೆ ನೀಡಿದ ಕಾಮಗಾರಿಗಳನ್ನು ತಡೆ ಹಿಡಿಯಬೇಕು. ಚುನಾವಣೆ ನಂತರ ಅವುಗಳಿಗೆ ಚಾಲನೆ ನೀಡಬೇಕು. ಜಿಲ್ಲೆಯಾದ್ಯಂತ ನವೆಂಬರ್ 30 ರಂದು ಯಾವುದೇ ಕಾಮಗಾರಿ ಶಂಕುಸ್ಥಾಪನೆ ಮಾಡಿದ್ದರೆ ಅಥವಾ ಘೋಷಿಸಿದ್ದರೆ ಅವುಗಳನ್ನು ರದ್ದುಪಡಿಸಬೇಕು. ಕಾಮಗಾರಿ ಘೋಷಿಸಿದವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ರಾಜ್ಯ ಚುನಾವಣಾ ಆಯುಕ್ತರಿಗೂ ದೂರಿನ ಪ್ರತಿ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.