ADVERTISEMENT

‘ಸಮಾಜದ ಕಟ್ಟಕಡೆಯವರಿಗೂ ಸೌಲಭ್ಯ ಸಿಗಲಿ’

ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 15:56 IST
Last Updated 10 ಫೆಬ್ರುವರಿ 2019, 15:56 IST
ಬೀದರ್‌ನ ಶರಣ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಸಮಾಜಸೇವಕ ಪ್ರಕಾಶ ಟೊಣ್ಣೆ ಚಾಲನೆ ನೀಡಿದರು. ಆಶಾ ಪ್ರಭು, ರಮೇಶ ಮಠಪತಿ, ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕೆ ಇದ್ದಾರೆ
ಬೀದರ್‌ನ ಶರಣ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಸಮಾಜಸೇವಕ ಪ್ರಕಾಶ ಟೊಣ್ಣೆ ಚಾಲನೆ ನೀಡಿದರು. ಆಶಾ ಪ್ರಭು, ರಮೇಶ ಮಠಪತಿ, ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕೆ ಇದ್ದಾರೆ   

ಬೀದರ್‌: ವಚನ ವಿಜಯೋತ್ಸವ ನಿಮಿತ್ತ ನಗರದ ಶರಣ ಉದ್ಯಾನದಲ್ಲಿ ಭಾನುವಾರ ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಸಮಾಜಸೇವಕ ಪ್ರಕಾಶ ಟೊಣ್ಣೆ ಮಾತನಾಡಿ, ‘ಅಂಗವಿಕಲರಿಗೆ ನೆರವಾಗುವ ದಿಸೆಯಲ್ಲಿ ಹಮ್ಮಿಕೊಂಡಿರುವ ಈ ಮಾನವೀಯ ಕಾರ್ಯ ಅಕ್ಕ ಅನ್ನಪೂರ್ಣ ಅವರ ಜನಪರ ಕಾಳಜಿ ತೋರಿಸುತ್ತದೆ’ ಎಂದು ಶ್ಲಾಘಿಸಿದರು.

ಅಕ್ಕ ಅನ್ನಪೂರ್ಣ ಮಾತನಾಡಿ, ‘ಲಿಂಗಾಯತ ಮಹಾಮಠ, ಬೆಂಗಳೂರಿನ ಎಡಿಡಿ ಫೌಂಡೇಷನ್, ಕರ್ನಾಟಕ ಜೈನ ಅಸೋಸಿಯೇಷನ್ ಮತ್ತು ಕರ್ನಾಟಕ ಮಾರ್ವಾಡಿ ಯುಥ್ ಫೆಡರೇಷನ್‌ಗಳ ಸಹಯೋಗದಿಂದ ಈ ಶಿಬಿರ ಏರ್ಪಡಿಸಲಾಗಿದೆ. 119 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದರು.

ADVERTISEMENT

’ಜಗತ್ತಿನಲ್ಲಿ ಎಷ್ಟೊಂದು ದುಃಖ ತುಂಬಿದೆ. ಎಲ್ಲರ ದುಃಖ ದೂರ ಮಾಡಲೂ ಸಾಧ್ಯ ಇಲ್ಲವಾದರೂ ಈ ಶಿಬಿರದ ಮೂಲಕ ದುಃಖದ ಕತ್ತಲೆ ಕಳೆಯಲು ಮಿಣುಕು ದೀಪ ಹೊತ್ತಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ದೇವರು ಹಸಿದವರ ಮೂಲಕ ಉಣ್ಣುವನು. ಬತ್ತಲೆಯಿದ್ದವರ ಮೂಲಕ ಬಟ್ಟೆ ತೊಡುವನು. ಇದು ಉಪಕಾರವಲ್ಲ ದೇವರ ಸೇವೆ. ಅಂಗವಿಕಲರನ್ನು ಕಂಡು ಹಿಯಾಳಿಸಬಾರದು. ದೇವರು ನಮಗೆ ಎಲ್ಲವನ್ನು ಕರುಣಿಸಿದ್ದಾನೆಂದು ಕೃತಜ್ಞತೆ ಸಲ್ಲಿಸಿ ಅಂಗವಿಕಲರಿಗೆ ಸೇವೆ ಸಲ್ಲಿಸಬೇಕು’ ಎಂದು ಮಾರ್ಮಿಕವಾಗಿ ನುಡಿದರು.

ಶಿಬಿರದ ಸಂಯೋಜಕಿ ಬೆಂಗಳೂರಿನ ಆಶಾ ಪ್ರಭು ಮಾತನಾಡಿ, ‘ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೇವೆ ಸಲ್ಲಿಸುವ ಪ್ರಯತ್ನವಿದು. ಬೆಂಗಳೂರಿನ ಜೈನ ಅಸೋಸಿಯೇಷನ್ ನೂರರ ಸಂಭ್ರಮದಲ್ಲಿರುವ ಕಾರಣ ಈ ಶಿಬಿರ ಮಹತ್ವದ್ದು. ಈ ಭಾಗದಲ್ಲಿ ಇಂಥ ಶಿಬಿರ ಆಯೋಜನೆ ಮಾಡಿರುವ ಅಕ್ಕನವರ ಕಾರ್ಯ ಮೆಚ್ಚುವಂಥದ್ದು’ ಎಂದರು.

‘ಶಿಬಿರದಲ್ಲಿ ಕಾಲಿನ ಅಳತೆ ಪಡೆದು, ಸ್ಥಳದಲ್ಲಿಯೇ ಕೃತಕ ಕಾಲು ಸಿದ್ಧಪಡಿಸಿ ಅಳವಡಿಸಲಾಗುವುದು. ಎರಡು ದಿನಗಳ ಕಾಲ ಶಿಬಿರದಲ್ಲಿ ಪಾಲ್ಗೊಂಡ ಎಲ್ಲರಿಗೂ ಕೃತಕ ಕಾಲು ಜೋಡಿಸಲಾಗುವುದು’ ಎಂದು ಹೇಳಿದರು.

ಗಂಗಾಂಬಿಕೆ ಅಕ್ಕ ಮಾತನಾಡಿದರು. ತಂತ್ರಜ್ಞ ಮುರುಳಿ ಬೆಂಗಳೂರು, ವಿಜಯಕುಮಾರ ಜೈನ್, ನಿರ್ದೇಶಕರು, ಕರ್ನಾಟಕ ಜೈನ ಅಸೋಸಿಯೇಶನ್, ಸಿ.ಎಸ್. ಪಾಟೀಲ, ಚಂದ್ರಕಾಂತ ಮಿರ್ಚೆ, ಸಿ.ಎಸ್. ಗಣಾಚಾರಿ, ಮಲ್ಲಿಕಾರ್ಜುನ ಪಂಚಾಕ್ಷರಿ, ಬಸವರಾಜ ಶೇರಿಕಾರ, ರಾಜಕುಮಾರ ಪಾಟೀಲ ಇದ್ದರು. ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.