ADVERTISEMENT

ಧಾರ್ಮಿಕ ಸಾಮರಸ್ಯದ ಅಷ್ಟೂರ ಜಾತ್ರೆ

ಗುಮ್ಮಟಗಳ ಪರಿಸರದಲ್ಲಿ ಸಡಗರ, ಸಂಭ್ರಮದ ವಾತಾವರಣ

ನಾಗೇಶ ಪ್ರಭಾ
Published 3 ಏಪ್ರಿಲ್ 2024, 5:07 IST
Last Updated 3 ಏಪ್ರಿಲ್ 2024, 5:07 IST
ಬೀದರ್ ತಾಲ್ಲೂಕಿನ ಅಷ್ಟೂರಿನ ಸುಲ್ತಾನ್ ಅಹಮ್ಮದ್ ಶಾವಲಿ ಬಹಮನಿ ಅವರ ಸಮಾಧಿ ಇರುವ ಗುಮ್ಮಟ
ಬೀದರ್ ತಾಲ್ಲೂಕಿನ ಅಷ್ಟೂರಿನ ಸುಲ್ತಾನ್ ಅಹಮ್ಮದ್ ಶಾವಲಿ ಬಹಮನಿ ಅವರ ಸಮಾಧಿ ಇರುವ ಗುಮ್ಮಟ   

ಅಷ್ಟೂರ (ಜನವಾಡ): ಬೀದರ್ ತಾಲ್ಲೂಕಿನ ಅಷ್ಟೂರ ಜಾತ್ರೆ ಧಾರ್ಮಿಕ ಸಾಮರಸ್ಯದ ಜಾತ್ರೆಗಳಲ್ಲಿ ಒಂದು. ಜಾತಿ, ಮತ, ಪಂಥ ಎನ್ನದೆ ಸರ್ವ ಧರ್ಮೀಯರು ಭಕ್ತಿ ಭಾವದಿಂದ ಪಾಲ್ಗೊಳ್ಳುವುದು ಇದರ ವೈಶಿಷ್ಟ್ಯ.

ಗುಮ್ಮಟಗಳ ಪರಿಸರದಲ್ಲಿ ಪ್ರತಿ ವರ್ಷ ಹೋಳಿ ಹಬ್ಬದ ನಂತರ ನಡೆಯುವ ಜಾತ್ರೆಗೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆಯ ಅಪಾರ ಭಕ್ತರು ಸಾಕ್ಷಿಯಾಗುತ್ತಾರೆ. ಸುಲ್ತಾನ್ ಅಹಮ್ಮದ್ ಶಾ ವಲಿ ಬಹಮನಿ ಅವರ ಸಮಾಧಿ ಇರುವ ಗುಮ್ಮಟದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತವೆ.

ಭಕ್ತರು ಸಮಾಧಿಗೆ ಬಟ್ಟೆ, ಹೂವಿನ ಚಾದರ್, ಪುಷ್ಪ, ಕಾಯಿ, ನೈವೇದ್ಯ ಸಮರ್ಪಿಸಿ ಕೃತಾರ್ಥರಾಗುತ್ತಾರೆ. ಬಹಮನಿ ಸುಲ್ತಾನರ ಕಾಲದಿಂದಲೂ ಜಾತ್ರೆ ನಡೆದುಕೊಂಡು ಬಂದಿದೆ. ಸುಲ್ತಾನ್ ಅಹಮ್ಮದ್ ಶಾ ವಲಿ ಬಹಮನಿ ಅವರ ಮೇಲೆ ಹಿಂದೂ, ಮುಸ್ಲಿಮ್ ಸೇರಿದಂತೆ ಸರ್ವ ಧರ್ಮೀಯರ ಶ್ರದ್ಧೆ ಇದೆ. ಅಹಮ್ಮದ್ ಶಾ ವಲಿ ಬಹಮನಿ ಅವರನ್ನು ಮುಸ್ಲಿಮರು ವಲಿ ಹಾಗೂ ಹಿಂದೂಗಳು ಅಲ್ಲಮಪ್ರಭು ಎಂದು ಪೂಜಿಸುತ್ತಾರೆ ಎಂದು ಹೇಳುತ್ತಾರೆ ಗ್ರಾಮದ ಸುಲ್ತಾನ್ ಖಲೀಲ್ ಶಾ ಬಹಮನಿ.

ADVERTISEMENT

ವಲಿ ಅವರ ಜನ್ಮದಿನದ ಅಂಗವಾಗಿ ಜಾತ್ರೆ ನಡೆಯುತ್ತದೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡ್ಯಾಳದ ಜಂಗಮರ ಆಗಮನದೊಂದಿಗೆ ಜಾತ್ರೆಗೆ ಚಾಲನೆ ದೊರೆತಿದೆ. ಏಪ್ರಿಲ್ 5 ರಂದು ಜಾತ್ರೆಯ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸುತ್ತಾರೆ ಅವರು.

ಕಲಾಂ ಓದುವುದು, ಶಂಖ ಊದುವುದು, ಸಮಾಧಿಗೆ ಪುಷ್ಪವೃಷ್ಟಿ ಮಾಡುವುದು, ಗುಮ್ಮಟದ ನಾಲ್ಕೂ ದಿಕ್ಕುಗಳಲ್ಲಿ ಪೂಜೆ ಸಲ್ಲಿಸುವುದು, ದೀಪಾಲಂಕಾರ ಮೊದಲಾದವು ಜಾತ್ರೆಯ ಭಾಗವಾಗಿವೆ ಎಂದು ಹೇಳುತ್ತಾರೆ.

ಗುಮ್ಮಟಗಳ ಪರಿಸರದಲ್ಲಿ ವಿವಿಧ ಮಳಿಗೆಗಳು ತೆರೆದುಕೊಂಡಿವೆ. ಸಡಗರ, ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ವಿವಿಧ ಕಾರ್ಯಕ್ರಮಗಳು ಜಾತ್ರೆಯ ಮೆರುಗು ಹೆಚ್ಚಿಸಲಿವೆ ಎಂದು ತಿಳಿಸುತ್ತಾರೆ.

ಏಪ್ರಿಲ್ 3 ರಂದು ದೀಪೋತ್ಸವ, 4 ರಂದು ಸಿಡಿಮದ್ದು ಪ್ರದರ್ಶನ ಹಾಗೂ 5 ರಂದು ಜಂಗಿ ಕುಸ್ತಿ ಸ್ಪರ್ಧೆಗಳು ನಡೆಯಲಿವೆ. ಅಷ್ಟೂರ ಜಾತ್ರೆ ಕುಸ್ತಿ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ವಿವಿಧ ರಾಜ್ಯಗಳ ಪೈಲ್ವಾನರು ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡು ತೋಳ್ಬಲ ಪ್ರದರ್ಶಿಸುತ್ತಾರೆ ಎಂದು ಹೇಳುತ್ತಾರೆ.

ಬೀದರ್ ತಾಲ್ಲೂಕಿನ ಅಷ್ಟೂರಿನಲ್ಲಿ ಇರುವ ಗುಮ್ಮಟಗಳು
ಜಾತ್ರೆ ನಿಮಿತ್ತ ಅಷ್ಟೂರಿಗೆ ಬಂದ ಬೃಹತ್ ಜೋಕಾಲಿ ಬ್ರೇಕ್ ಡ್ಯಾನ್ಸ್ ಹಾಗೂ ಇತರ ಯಂತ್ರಗಳು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.