ಜನವಾಡ: ಚಾಂಬೋಳ್-ಶ್ರೀಮಂಡಲ್ ಡಾಂಬರ್ ರಸ್ತೆ ನಿರ್ಮಾಣದ ಕನಸು ನನಸಾದೀತೆ?...
ಚಾಂಬೋಳ್ ಹಾಗೂ ಶ್ರೀಮಂಡಲ್ ಗ್ರಾಮಸ್ಥರನ್ನು ಕಾಡುತ್ತಿರುವ ಪ್ರಶ್ನೆ ಇದು. 1972ರ ಬರಗಾಲದ ವೇಳೆ ನಿರ್ಮಿಸಿದ ಐದು ಕಿ.ಮೀ. ಉದ್ದದ ಚಾಂಬೋಳ್- ಶ್ರೀಮಂಡಲ್ ಕಚ್ಚಾ ರಸ್ತೆ ಈಗ ಹೆಸರಿಗೆ ಮಾತ್ರ ಉಳಿದುಕೊಂಡಿದೆ.
ರಸ್ತೆಯ ಉದ್ದಕ್ಕೂ ತಗ್ಗು, ದಿನ್ನೆಗಳು ಸೃಷ್ಟಿಯಾಗಿವೆ. ಎರಡೂ ಬದಿಯಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಹೀಗಾಗಿ ವಾಹನ ಹಾಗೂ ಜನ ಸಂಚಾರ ದುರ್ಲಭವಾಗಿದೆ. ಹಿಂದೆ ಈ ಮಾರ್ಗದಲ್ಲಿ ಖಾಸಗಿ ವಾಹನಗಳು ಸಂಚರಿಸುತ್ತಿದ್ದವು. ಆದರೆ, ಸದ್ಯ ರೈತರು ಹೊಲಗಳಲ್ಲಿ ರಾಶಿ ಮಾಡಿದ ಧಾನ್ಯ ಮನೆಗೆ ತರಲು ಸಹ ತೊಂದರೆ ಅನುಭವಿಸಬೇಕಾಗಿದೆ. ಮಳೆಗಾಲದಲ್ಲಿ ನಡೆದಾಡುವುದೂ ತ್ರಾಸದಾಯಕವಾಗಿದೆ.
‘ಬರಗಾಲ ಸಂದರ್ಭದಲ್ಲಿ ನಿರ್ಮಿಸಿದ ಬಹುತೇಕ ಕಚ್ಚಾ ರಸ್ತೆಗಳು ನಂತರ ಪಕ್ಕಾ ರಸ್ತೆಗಳಾಗಿವೆ. ಆದರೆ, ಚಾಂಬೋಳ್- ಶ್ರೀಮಂಡಲ್ ರಸ್ತೆಗೆ ಮಾತ್ರ ಆ ಭಾಗ್ಯ ಬಂದಿಲ್ಲ’ ಎಂದು ಬೇಸರದಿಂದ ನುಡಿಯುತ್ತಾರೆ ಚಾಂಬೋಳ್ ಗ್ರಾಮದ ಓಂಕಾರ ಪಾಟೀಲ.
ಚಾಂಬೋಳ್‍ನಿಂದ ಶ್ರೀಮಂಡಲ್‌ವರೆಗೆ ಹೊಸ ಡಾಂಬರ್ ರಸ್ತೆ ನಿರ್ಮಿಸಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಾಗಿದೆ. ಆದರೆ, ಆಡಳಿತ ಈವರೆಗೂ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಕಚ್ಚಾ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುವ ಕಾರಣ ರಸ್ತೆ ಅಕ್ಕ- ಪಕ್ಕದ ಹೊಲಗಳ ರೈತರಿಗೆ ರಾಶಿ ಮಾಡಿದ ಆಹಾರ ಧಾನ್ಯ ಮನೆಗೆ ಒಯ್ಯುವುದು ದೊಡ್ಡ ಸಾಹಸವಾಗುತ್ತಿದೆ. ಚಾಂಬೋಳ್ ಗ್ರಾಮದ ಹೊರವಲಯದಲ್ಲಿನ ಶ್ರೀ ರುದ್ರಮುನೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ನಡೆದುಕೊಂಡು ಹೋಗಲು ಮಕ್ಕಳು ಸಮಸ್ಯೆ ಎದುರಿಸಬೇಕಾಗಿದೆ ಎಂದು ತಿಳಿಸುತ್ತಾರೆ.
ಪ್ರಸ್ತುತ ಶ್ರೀಮಂಡಲ್ ಗ್ರಾಮದವರು ಹೋಬಳಿ ಕೇಂದ್ರ ಜನವಾಡಕ್ಕೆ ನವಲಸಪುರ, ಚಾಂಬೋಳ್ ಮಾರ್ಗವಾಗಿ ಬರಬೇಕಾಗಿದೆ. ಇದರ ಅಂತರ 15 ಕಿ.ಮೀ. ಆಗಿದೆ. ಆದರೆ, ಚಾಂಬೋಳ್- ಶ್ರೀಮಂಡಲ್ ರಸ್ತೆ ನಿರ್ಮಾಣಗೊಂಡರೆ ಅಂತರ ಅರ್ಧದಷ್ಟು ಕಡಿಮೆಯಾಗಲಿದೆ. ಕಂದಗೂಳ, ವಡಗಾಂವ್, ಜಮಗಿ, ಸಂತಪುರ, ಔರಾದ್, ನೆರೆಯ ತೆಲಂಗಾಣದ ನಾರಾಯಣಖೇಡ್‍ಗೆ ಹೋಗಲು ಕೂಡ ಅನುಕೂಲವಾಗಲಿದೆ ಎನ್ನುತ್ತಾರೆ ಓಂಕಾರ ಪಾಟೀಲ.
ಚಾಂಬೋಳ್-ಶ್ರೀಮಂಡಲ್ ಮಾರ್ಗದಲ್ಲಿ ಇರುವ ಹಳ್ಳಕ್ಕೆ ಮಳೆಗಾಲದಲ್ಲಿ ನೀರು ಹರಿದು ಬರುತ್ತದೆ. ಆಗ ಸಂಚಾರಕ್ಕೆ ತೊಡಕು ಉಂಟಾಗುತ್ತದೆ. ಕಾರಣ, ಹೊಸ ರಸ್ತೆ ಜತೆಗೆ ಹಳ್ಳಕ್ಕೆ ಸೇತುವೆ ಸಹ ನಿರ್ಮಿಸಿದರೆ ಒಳ್ಳೆಯದು ಎಂದು ತಿಳಿಸುತ್ತಾರೆ ಚನ್ನಬಸಪ್ಪ ಪಾಟೀಲ, ದತ್ತು ರೊಡ್ಡಾ.
ಐದು ಕಿ.ಮೀ. ಉದ್ದದ ಕಚ್ಚಾ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಬದಲಾಗುವ ರಸ್ತೆ ಹೊಸ ರಸ್ತೆ ನಿರ್ಮಿಸಿದರೆ ಹೋಬಳಿ ಕೇಂದ್ರ ಸನಿಹ
ಚಾಂಬೋಳ್-ಶ್ರೀಮಂಡಲ್ ಹೊಸ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಈ ಮೂಲಕ ರೈತರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕುಪ್ರಕಾಶ ಕುಲಕರ್ಣಿ ಚಾಂಬೋಳ್ ಗ್ರಾಮಸ್ಥ
ಚಾಂಬೋಳ್- ಶ್ರೀಮಂಡಲ್ ಹೊಸ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವ ಸದ್ಯಕ್ಕೆ ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗದ ಮುಂದಿಲ್ಲಮಹಮ್ಮದ್ ಕಲೀಮುದ್ದೀನ್ ಪಂಚಾಯತ್‍ರಾಜ್ ಎಂಜಿನಿಯರಿಂಗ್ ಬೀದರ್ ಉಪ ವಿಭಾಗದ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.