
ಔರಾದ್: ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿ ಬರುವ ಇಲ್ಲಿಯ ಪ್ರಸಿದ್ಧ ಅಮರೇಶ್ವರ ದೇವಸ್ಥಾನ ಪರಿಸರ ಅಸ್ವಚ್ಛತೆಯಿಂದ ಕೂಡಿದೆ.
ನಿತ್ಯ ಭಕ್ತರ ದಂಡು ಹರಿದು ಬರುವ ಈ ದೇವಸ್ಥಾನ ಕೆಲ ಮೂಲ ಸೌಲಭ್ಯ ಕೊರತೆ ಜತೆಗೆ ಸ್ವಚ್ಛತೆ ಸಮಸ್ಯೆಯೂ ಕಾಡುತ್ತಿದೆ. ದೇವಸ್ಥಾನ ಎದುರಲ್ಲೇ ಖಾಲಿ ಜಾಗ ಸೂಕ್ತ ಬಳಕೆಯಾಗದೆ ತಿಪ್ಪೆಗುಂಡಿಯಾಗಿ ಪರಿಣಮಿಸಿದೆ. ಇಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ವಸ್ತುಗಳ ಸಂಗ್ರವಾಗಿದೆ. ರಾತ್ರಿ ವೇಳೆ ಈ ಜಾಗ ಮೂತ್ರ ವಿಸರ್ಜನೆಗೂ ಬಳಕೆಯಾಗುತ್ತಿದ್ದು, ಬೆಳಿಗ್ಗೆ ದೇವಸ್ಥಾನಕ್ಕೆ ಭಕ್ತರು ಮೂಗು ಮುಚ್ಚಿಕೊಂಡು ಬರಬೇಕಾಗಿದೆ.
ದೇವಸ್ಥಾನ ಅಭಿವೃದ್ಧಿ ಹಾಗೂ ಸ್ವಚ್ಛತೆ ಕಾಪಾಡುವ ಕುರಿತು ನಾವು ಪದೇ ಪದೇ ಸಂಬಂಧಿತರಿಗೆ ಹೇಳುತ್ತಾ ಬಂದಿದ್ದೇವೆ. ದೇವಸ್ಥಾನ ಒಳಗಡೆ ಸ್ವಲ್ಪ ಸ್ವಚ್ಛತೆ ಇರುತ್ತದೆ. ಆದರೆ ಹೊರಗಡೆ ಯಾರೂ ನೋಡುವವರಿಲ್ಲ. ಇನ್ನು ಇಲ್ಲಿ ಭಿಕ್ಷುಕರ ಹಾವಳಿ ಜಾಸ್ತಿ ಇದೆ. 24 ಗಂಟೆ ಮಹಾದ್ವಾರ ಎದುರಲ್ಲೇ ಕೂತಿರುತ್ತಾರೆ. ಅವರಿಂದಲೂ ಸ್ವಚ್ಛತೆಗೆ ಭಂಗ ಆಗುತ್ತಿದೆ ಎಂದು ಸ್ಥಳೀಯ ಭಕ್ತರು ಹೇಳುತ್ತಾರೆ.
‘ಈಗ ಅಮರೇಶ್ವರ ಜಾತ್ರೆ ಬರುತ್ತಿದೆ. ಪಟ್ಟಣದಲ್ಲಿ ಒಂದು ವಾರ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಆದರೆ ಸಾಕಷ್ಟು ಕಡೆ ಬೀದಿ ದೀಪಗಳಿಲ್ಲ. ನೀರಿನ ಪೈಪ್ ಹಾಕಲು ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಈ ಎಲ್ಲವೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಕಾಣುತಿಲ್ಲವೇ?’ ಎಂದು ಲಿಂಗಾಯತ ಸಮಾಜದ ಯುವ ಘಟಕದ ಅಧ್ಯಕ್ಷ ವೀರೇಶ ಅಲ್ಮಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಸರ್ಕಾರ ಆಗಷ್ಟ ತಿಂಗಳಲ್ಲೇ ಆದೇಶ ಹೊರಡಿಸಿದೆ. ಆದರೆ ಇಲ್ಲಿಯ ಅಮರೇಶ್ವರ ಹಾಗೂ ಆಂಜನೇಯ ದೇವಸ್ಥಾನ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆ ಬೇಕಾಬಿಟ್ಟಿ ನಡೆಯುತ್ತಿದೆ. ಇಲ್ಲಿ ಮಾರಾಟ ಅಷ್ಟೇ ಅಲ್ಲದೆ ಬಳಸಿದ ಪ್ಲಾಸ್ಟಿಕ್ ತ್ಯಾಜ್ಯ ದೇವಸ್ಥಾನದ ಸುತ್ತ ಸಂಗ್ರಹವಾದರೂ ಯಾರು ಕೇಳುತ್ತಿಲ್ಲ ಎಂದು ಸ್ಥಳೀಯ ಪರಿಸರ ಪ್ರೇಮಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಫೆಬ್ರುವರಿಯಲ್ಲಿ ಅಮರೇಶ್ವರ ಜಾತ್ರೆ ಇರುವುದರಿಂದ ಸ್ಥಳೀಯರ ಹಾಗೂ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಮೂಲ ಸೌಲಭ್ಯ ಹಾಗೂ ಸ್ವಚ್ಛತೆ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ದೇವಸ್ಥಾನ ಹಾಗೂ ಸುತ್ತಲೂ ಪ್ಲಾಸ್ಟಿಕ್ ನಿಷೇಧ ಆದೇಶ ಪಾಲನೆ ಮಾಡಲು ಹೆಚ್ಚಿನ ಕಾಳಜಿ ವಹಿಸುತ್ತೇವೆ.– ಮಹೇಶ ಪಾಟೀಲ, ತಹಶೀಲ್ದಾರ್ ಔರಾದ್
‘ಗಂಭೀರವಾಗಿ ಪರಿಗಣಿಸಿ’
ಸರ್ಕಾರ ಆಗಸ್ಟ್ 15 2025 ರಂದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಿದೆ. ದೇವಾಲಯ ಆವರಣದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಬಳಕೆ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ. ಆದರೆ ಅನೇಕ ದೇವಾಲಯಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು ಸಂಬಂಧಿತ ಅಧಿಕಾರಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು ಎಂದು ಪರಿಸರ ಪ್ರೇಮಿ ರಿಯಾಜ್‌ಪಾಶಾ ಕೊಳ್ಳೂರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.