ADVERTISEMENT

ಬಡ ವಿದ್ಯಾರ್ಥಿಗಳಿಗೆ ಆಸರೆಯಾದ ಔರಾದ್ ಐಟಿಐ ಕಾಲೇಜು

​ಪ್ರಜಾವಾಣಿ ವಾರ್ತೆ
Published 20 ಮೇ 2025, 6:54 IST
Last Updated 20 ಮೇ 2025, 6:54 IST
ಔರಾದ್ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮಾಹಿತಿ ಪಡೆಯುತ್ತಿರುವುದು
ಔರಾದ್ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮಾಹಿತಿ ಪಡೆಯುತ್ತಿರುವುದು   

ಔರಾದ್: ಕಳೆದ ಹದಿನೆಂಟು ವರ್ಷಗಳ ಹಿಂದೆ ಆರಂಭವಾದ ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ) ಬಡ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದೆ.

ಹಿಂದುಳಿದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ತರಬೇತಿ ಅಗತ್ಯ ಎಂಬ ಡಾ.ನಂಜುಂಡಪ್ಪ ಸಮಿತಿ ಶಿಫಾರಸ್ಸಿನ ಮೇರೆಗೆ ಇಲ್ಲಿ 2007ರಲ್ಲಿ ಸರ್ಕಾರಿ ಐಟಿಐ ಕಾಲೇಜು ಆರಂಭಿಸಲಾಗಿದೆ. ಆರಂಭದಲ್ಲಿ ಸೂಕ್ತ ಕಟ್ಟಡ ಹಾಗೂ ಅಗತ್ಯ ಶೈಕ್ಷಣಿಕ ಸೌಲಭ್ಯದ ಕೊರತೆ ಎದುರಿಸಿದ್ದ ಕಾಲೇಜು ವಿದ್ಯಾರ್ಥಿಗಳ ಹೋರಾಟ, ಸಿಬ್ಬಂದಿ ಕಾಳಜಿಯಿಂದಾಗಿ ಇಂದು ಸ್ವಂತ ಕಟ್ಟಡ ಹಾಗೂ ಅತ್ಯಾಧುನಿಕ ಸೌಲಭ್ಯ ಹೊಂದಿದ ಜಿಲ್ಲೆಯ ಮಾದರಿ ಕಾಲೇಜು ಆಗಿ ರೂಪುಗೊಂಡಿದೆ.

ಆರಂಭದಲ್ಲಿ 15ರಿಂದ 20 ವಿದ್ಯಾರ್ಥಿಗಳಿರುತ್ತಿದ್ದ ಈ ಕಾಲೇಜಿನಲ್ಲಿ ಈಗ 200ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಲ್ಲಿ ಎರಡು ವರ್ಷದ ಐಟಿಐ ತರಬೇತಿ ಜತೆಗೆ ಒಂದು ವರ್ಷದ ಅಲ್ಪಾವಧಿ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಐಸಿಟಿಎಸ್‌ಎಂ ಕೋರ್ಸ್‌ಗಳ ಜತೆಗೆ ಟಾಟಾ ಟೆಕ್ನಾಲಜಿ ಸಹಯೋಗದಲ್ಲಿ ಮೆಕ್ಯಾನಿಕ್ ಎಲೆಕ್ಟ್ರಿಕಲ್ ವೆಹಿಕಲ್, ಇಂಡಸ್ಟ್ರಿಯಲ್‌ ರೊಬೊಟಿಕ್, ಡಿಜಿಟಲ್ ಟೆಕ್ನಿಷಿಯನ್, ಇಂಟರನೆಟ್ ಆಫ್ ಥಿಂಕ್ಸ್, ಜ್ಯೂನಿಯರ್ ರೊಬೊಟಿಕ್ ಆಪರೇಟರ್, ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ ಎಂಬ ಅತ್ಯಾಧುನಿಕ ಕೋರ್ಸ್‌ಗಳು ಇಲ್ಲಿ ಲಭ್ಯ ಇವೆ.

ADVERTISEMENT

‘ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ಗಳು ತುಂಬಾ ಉಪಯೋಗಕಾರಿ. ವಾರ್ಷಿಕ ₹1200 ಶುಲ್ಕದಲ್ಲಿ ಪ್ರವೇಶ ಪಡೆಯಬಹುದಾಗಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ತೀರಾ ಬಡ ವಿದ್ಯಾರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ಪಡೆಯಲು ಅವಕಾಶವಿದೆ. ಇಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಲಾಗುತ್ತದೆ. ಅಪ್ರೆಂಟ್‌ಶಿಪ್ ತರಬೇತಿಗೆ ಮಾರ್ಗದರ್ಶನದ ಜತೆಗೆ ಕ್ಯಾಂಪಸ್ ಸಂದರ್ಶನಕ್ಕೆ ಕಳುಹಿಸಿ ಕಂಪನಿಗಳಲ್ಲಿ ಕೆಲಸ ಕೊಡಿಸುವಲ್ಲಿಯೂ ನಮ್ಮ ಸಿಬ್ಬಂದಿ ಸಹಕರಿಸುತ್ತಾರೆ’ ಎಂದು ಪ್ರಭಾರ ಪ್ರಾಂಶುಪಾಲ ಯುಸೂಫಮಿಯ್ಯ ಹೇಳುತ್ತಾರೆ.

‘ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಲಾಭ ಸಿಗಲಿ ಎಂಬ ಉದ್ದೇಶದಿಂದ ನಾವು ಪ್ರತಿವರ್ಷ ಪ್ರವೇಶ ಅಭಿಯಾನ ನಡೆಸುತ್ತೇವೆ. ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರನ್ನು ಭೇಟಿ ಮಾಡಿ ವೃತ್ತಿ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ತೀರಾ ಬಡ ವಿದ್ಯಾರ್ಥಿಗಳಿದ್ದಲ್ಲಿ ನಾವೇ ಅವರಿಗೆ ಪ್ರವೇಶ ಕೊಡಿಸಿ ಹಾಸ್ಟೆಲ್‌ ವ್ಯವಸ್ಥೆಯನ್ನೂ ಮಾಡುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

‘ಔರಾದ್ ಸರ್ಕಾರಿ ಐಟಿಐ ಕಾಲೇಜಿನಿಂದ ಈ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಇಲ್ಲಿ ಓದಿದ ಶೇ 80ರಷ್ಟು ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ನೌಕರಿ ಸಿಕ್ಕಿದೆ. ಅನೇಕ ವಿದ್ಯಾರ್ಥಿನಿಯರು ಸರ್ಕಾರಿ ಕೆಲಸಕ್ಕೂ ಸೇರಿಕೊಂಡಿದ್ದಾರೆ’ ಎಂದು ಇಲ್ಲಿಯ ನಿವೃತ್ತ ಪ್ರಾಂಶುಪಾಲ ಶಿವಶಂಕರ ಟೋಕರೆ ಹೇಳಿದರು.

----ಯುಸೂಫಮಿಯ್ಯ ಪ್ರಾಂಶುಪಾಲರು

ಔರಾದ್ ಸರ್ಕಾರಿ ಐಟಿಐ ಕಾಲೇಜಿಗೆ ಸರ್ಕಾರ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿದೆ. ಹೀಗಾಗಿ ಎಸ್‌ಎಸ್‌ಎಲ್‌ಎಸಿ ಪಾಸಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದುಕೊಂಡರೆ ತುಂಬಾ ಅನುಕೂಲವಾಗಲಿದೆ

–ಯೂಸೂಫಮಿಯ್ಯ ಪ್ರಭಾರ ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.