ADVERTISEMENT

ಔರಾದ್ ನರೇಗಾ: ತೆರೆದ ಬಾವಿಯತ್ತ ರೈತರ ಚಿತ್ತ

ಮಳೆಯಾಶ್ರಿತ ಕೃಷಿ ಅವಲಂಬಿಸಿರುವ ರೈತರ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 6:51 IST
Last Updated 7 ನವೆಂಬರ್ 2025, 6:51 IST
ಔರಾದ್ ತಾಲ್ಲೂಕಿನ ಸಂತಪುರದಲ್ಲಿ ನರೇಗಾ ಯೋಜನೆಯಡಿ ತೋಡಿದ ತೆರೆದ ಬಾವಿ
ಔರಾದ್ ತಾಲ್ಲೂಕಿನ ಸಂತಪುರದಲ್ಲಿ ನರೇಗಾ ಯೋಜನೆಯಡಿ ತೋಡಿದ ತೆರೆದ ಬಾವಿ   

ಔರಾದ್: ಮಳೆಯಾಶ್ರಿತ ಕೃಷಿ ಅವಲಂಬಿಸಿರುವ ತಾಲ್ಲೂಕಿನ ರೈತರು ತೆರೆದ ಬಾವಿ ತೋಡುವಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದಾರೆ.

ಸಾಂಪ್ರದಾಯಿಕ ಕೃಷಿ ನೆಚ್ಚಿಕೊಂಡಿರುವ ರೈತರು ಮಳೆ ಹೆಚ್ಚು-ಕಡಿಮೆಯಾಗಿ ಪ್ರತಿ ವರ್ಷ ಹಾನಿ ಅನುಭವಿಸುತ್ತಿದ್ದಾರೆ. ಮಳೆಗಾಲ ಮೂರು ತಿಂಗಳು ಮಳೆ ಜಾಸ್ತಿಯಾಗಿ ಹಾನಿ ಅನುಭವಿಸಿದರೆ ಹಿಂಗಾರಿನಲ್ಲಿ ನೀರಿನ ಕೊರತೆಯಿಂದ ಕಷ್ಟ ಆಗುತ್ತಿದೆ. ಇದರಿಂದ ಹೊರಬರಲು ತಾಲ್ಲೂಕಿನ ರೈತರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಮೊರೆ ಹೋಗುತ್ತಿದ್ದಾರೆ.

ನರೇಗಾ ಯೋಜನೆಯಲ್ಲಿ ಸರ್ಕಾರದ ನೆರವಿನಿಂದ ತೆರೆದ ಬಾವಿ ಕೊರೆದು ಬಹು ಬೆಳೆ ಪದ್ಧತಿ ಅನುಸರಿಸುತ್ತಿದ್ದಾರೆ. ಹಿಂಗಾರಿನಲ್ಲಿ ತರಕಾರಿ ಹಾಗೂ ಅಲ್ಪ ಅವಧಿಯ ಬೆಳೆ ಬೆಳೆದು ಬದುಕಿಗೆ ಆಸರೆ ಮಾಡಿಕೊಳ್ಳುತ್ತಿದ್ದಾರೆ. ಹೈನುಗಾರಿಕೆಗೂ ಇದರಿಂದ ಅನುಕೂಲವಾಗುತ್ತಿದೆ ಎನ್ನುತ್ತಾರೆ ರೈತರು.

ADVERTISEMENT

‘ನಮ್ಮ ಮೂರು ಎಕರೆ ಜಮೀನು ಪಾಳು ಬಿದ್ದಿದೆ. ಹೆದ್ದಾರಿಗೆ ಹೊಂದಿಕೊಂಡಿರುವ ಈ ಜಮೀನು ಉಪಯೋಗಿಸಿಕೊಂಡರೆ ತುಂಬಾ ಅನುಕೂಲವಾಗಲಿದೆ ಎಂಬ ಅನುಭವಿ ರೈತರಿಂದ ಸಲಹೆ ಪಡೆದು ತೆರೆದ ಬಾವಿ ಕೊರೆದಿದ್ದೇನೆ. ಇದಕ್ಕೆ ನರೇಗಾ ನೆರವು ಸಿಕ್ಕಿದ್ದು, ಭರಪೂರ ನೀರು ಬಂದಿದೆ. ಹೀಗಾಗಿ ನನಗೆ ಈಗ ಕೃಷಿ ಚಟುವಟಿಕೆಯಲ್ಲಿ ವಿಶ್ವಾಸ ಮೂಡಿದೆ’ ಎನ್ನುತ್ತಾರೆ ಸಂತಪುರ ರೈತ ಕಂಠಯ್ಯ ಸ್ವಾಮಿ.

‘ನರೇಗಾ ಯೋಜನೆಯಲ್ಲಿ ತೆರೆದ ಬಾವಿ ತೋಡಿಕೊಳ್ಳಲು ರೈತರು ಮುಂದೆ ಬರುತ್ತಿದ್ದಾರೆ. ನಾವು ಕೂಡ ಅವರಿಗೆ ಸ್ಪಂದಿಸುತ್ತಿದ್ದು, ಈ ವರ್ಷ ಸಂತಪುರ ಗ್ರಾಮ ಪಂಚಾಯಿತಿಯಲ್ಲಿ 17 ವೈಯಕ್ತಿಕ ತೆರೆದ ಬಾವಿ ತೋಡಿದ್ದೇವೆ’ ಎಂದು ಪಿಡಿಒ ಸಂತೋಷ ಪಾಟೀಲ ತಿಳಿಸಿದ್ದಾರೆ.

‘ತೆರೆದ ಬಾವಿ ತೋಡುವುದರಿಂದ ಸಾಕಷ್ಟು ಅನುಕೂಲ ಇರುವ ಹಿನ್ನೆಲೆಯಲ್ಲಿ ರೈತರಿಗೆ ಪ್ರೋತ್ಸಾಹಿಸಲಾಗುತ್ತಿದೆ. ನರೇಗಾ ಯೋಜನೆಯಲ್ಲಿ 2024-25ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ 300ರಷ್ಟು ವೈಯಕ್ತಿಕ ತೆರೆದ ಬಾವಿ ತೋಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳುತ್ತಾರೆ.

‘18ರಿಂದ 20 ಅಡಿ ಆಳ, 27ರಿಂದ 30 ಅಡಿ ಅಗಲದ ಬಾವಿಗೆ ₹ 1.50 ಲಕ್ಷ ಖರ್ಚು ಬರುತ್ತದೆ. 15 ರಿಂದ 20 ಕಾರ್ಮಿಕರು ಒಂದು ತಿಂಗಳ ಕೆಲಸ ಮಾಡುತ್ತಾರೆ. ಇದರಿಂದ ರೈತ ಕಾರ್ಮಿಕರಿಗೆ ಕೆಲಸವೂ ಸಿಗುತ್ತದೆ ಹಾಗೂ ತಮ್ಮ ಹೊಲದಲ್ಲಿ ಬಾವಿಯೂ ಆಗುತ್ತದೆ. ಈ ಕಾರಣ ಹೆಚ್ಚಿನ ರೈತರು ತೆರೆದ ಬಾವಿ ಕಡೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ ಪ್ರತಿ ಬೇಸಿಗೆಯಲ್ಲಿ ನೀರು, ಮೇವಿನ ಸಮಸ್ಯೆ ಸಾಮಾನ್ಯವಾಗಿದೆ. ಈ ರೀತಿ ಹೆಚ್ಚು ಹೆಚ್ಚು ತೆರೆದ ಬಾವಿ ತೋಡುವುದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಜತೆಗೆ ಕೃಷಿ ಮತ್ತು ಜಾನುವಾರುಗಳಿಗೆ ನೀರಿನ ಸೌಲಭ್ಯ ಸಿಗುತ್ತದೆ ಎಂಬ ಕಾರಣಕ್ಕೆ ತಾಲ್ಲೂಕಿನಲ್ಲಿ ನರೇಗಾ ಯೋಜನೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದೇವೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಕಿರಣ ಪಾಟೀಲ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.