ADVERTISEMENT

ಔರಾದ್: ಸಂತಪೂರ ನಾಡ ಕಚೇರಿಯಲ್ಲಿ ಮಳೆ ನೀರು, ಆತಂಕ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 6:31 IST
Last Updated 8 ಆಗಸ್ಟ್ 2025, 6:31 IST
ಶಿಥಿಲಗೊಂಡು, ಮಳೆ ನೀರು ಆವರಿಸಿಕೊಂಡಿರುವ ಔರಾದ್ ತಾಲ್ಲೂಕಿನ ಸಂತಪೂರ ನಾಡ ಕಚೇರಿ ಕಟ್ಟಡ 
ಶಿಥಿಲಗೊಂಡು, ಮಳೆ ನೀರು ಆವರಿಸಿಕೊಂಡಿರುವ ಔರಾದ್ ತಾಲ್ಲೂಕಿನ ಸಂತಪೂರ ನಾಡ ಕಚೇರಿ ಕಟ್ಟಡ    

ಔರಾದ್: ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾದ ಸಂತಪೂರ ನಾಡ ಕಚೇರಿ ಕಟ್ಟಡ ಶಿಥಿಲಗೊಂಡು ಅಲ್ಲಿಯ ಸಿಬ್ಬಂದಿ ಹಾಗೂ ಜನರಲ್ಲಿ ಆತಂಕ ಆವರಿಸಿದೆ. ಬುಧವಾರ ಸುರಿದ ಮಳೆಗೆ ನಾಡ ಕಚೇರಿ ಛಾವಣಿ ಮೇಲಿಂದ ನೀರು ಸುರಿಯುತ್ತಿದೆ. ಕಂಪ್ಯೂಟರ್ ಹಾಗೂ ದಾಖಲೆಗಳ ಮೇಲೆ ಹನಿ ಹನಿ ನೀರು ಬೀಳುತ್ತಿದ್ದು, ಸಿಬ್ಬಂದಿ ಇಂತಹ ಅವ್ಯವಸ್ಥೆ ನಡುವೆ ಕೆಲಸ ಮಾಡುತ್ತಿದ್ದಾರೆ.

ನಾಡ ಕಚೇರಿ ಕಟ್ಟಡ ಹಳೆಯದಾಗಿರುವುದರಿಂದ ಬಳಸಲು ಯೋಗ್ಯಾಗಿಲ್ಲ. ಸ್ವಲ್ಪ ಮಳೆಯಾದರೂ ಛಾವಣಿ ಮೇಲೆ ನೀರು ನಿಂತು ಕೊಠಡಿಯೊಳಗೆ ಬರುತ್ತಿದೆ. ನಾಲ್ಕು ಕೊಠಡಿಗಳಲ್ಲಿ ಒಂದೂ ಸುರಕ್ಷಿತಾಗಿಲ್ಲ ಎಂದು ಸ್ಥಳೀಯರು ಹಾಗೂ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

‘ಸಂತಪೂರ ಹೋಬಳಿ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ರೈತರು, ವಿದ್ಯಾರ್ಥಿಗಳು ಸೇರಿದಂತೆ ಸರ್ಕಾರಿ ಕೆಲಸ ಕಾರ್ಯಕ್ಕೆ ನಾಡ ಕಚೇರಿಗೆ ಬರುವುದು ಅನಿವಾರ್ಯ. ಆದರೆ ಇಲ್ಲಿ ಸೂಕ್ತ ಸೌಲಭ್ಯವಿಲ್ಲದೆ ಜನರಿಗೆ ತೊಂದರೆಯಾಗುತ್ತಿದೆ. ಛಾವಣಿ ಸೋರುತ್ತಿರುವುದರಿಂದ ಕಡತಗಳೂ ಸುರಕ್ಷಿತವಾಗಿಲ್ಲ. ಸರ್ಕಾರ ತಕ್ಷಣ ನಾಡ ಕಚೇರಿಯನ್ನು ಸೂಕ್ತ ಕಡೆ ಸ್ಥಳಾಂತರಿಸಬೇಕು. ಆದಷ್ಟು ಬೇಗ ಹೊಸ ಕಟ್ಟಡಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಒತ್ತಾಯಿಸಿದ್ದಾರೆ.

ADVERTISEMENT

‘ಸಂತಪೂರ ನಾಡ ಕಚೇರಿ, ಪಶು ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ, ಮೀನುಗಾರಿಕೆ ಕಚೇರಿ ಒಂದೇ ಕಡೆ ಇವೆ. ಆದರೆ ಈ ಕಚೇರಿಗಳಿಗೆ ಹೋಗಿ ಬರಲು ಸರಿಯಾದ ದಾರಿ ಇಲ್ಲ. ಮಳೆ ಬಂದರೆ ನೀರು ನಿಲ್ಲುತ್ತದೆ. ಇಡೀ ಪರಿಸರವೂ ಹಾಳಾಗಿದೆ. ಸಂಬಂಧ ಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮುಂದಿನ ಎದುರಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ ಮಲ್ಲಿಗೆ ತಿಳಿಸಿದ್ದಾರೆ.

‘ಸಂತಪೂರ ನಾಡ ಕಚೇರಿ ಹಳೆ ಡಿಸಿಸಿ ಬ್ಯಾಂಕ್ ಕಟ್ಟಡದಲ್ಲಿ ನಡೆಯುತ್ತಿದೆ. ಇದು ಶಿಥಿಲಗೊಂಡಿರುವುದು ನಮ್ಮ ಗಮನಕ್ಕೂ ಬಂದಿದೆ. ಪಕ್ಕದಲ್ಲೇ ಇರುವ ಸರ್ಕಾರಿ ಆಸ್ಪತ್ರೆ ಕಟ್ಟಡ ಬಳಸಿಕೊಳ್ಳಲು ಚಿಂತನೆ ನಡೆಸಿದ್ದೇವೆ’ ಎಂದು ತಹಶೀಲ್ದಾರ್ ಮಹೇಶ್ ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.