ADVERTISEMENT

ಔರಾದ್ | ಶಾಲಾ ಆವರಣದಲ್ಲಿ ನೀರು: ಪರದಾಟ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 5:37 IST
Last Updated 13 ಆಗಸ್ಟ್ 2025, 5:37 IST
ಔರಾದ್ ಪಟ್ಟಣದ ಸರ್ಕಾರಿ ಶಾಲಾ-ಕಾಲೇಜು ಆವರಣದಲ್ಲಿ ನೀರು ನಿಂತಿರುವುದು 
ಔರಾದ್ ಪಟ್ಟಣದ ಸರ್ಕಾರಿ ಶಾಲಾ-ಕಾಲೇಜು ಆವರಣದಲ್ಲಿ ನೀರು ನಿಂತಿರುವುದು    

ಔರಾದ್: ಪಟ್ಟಣದ ಸರ್ಕಾರಿ-ಶಾಲಾ ಕಾಲೇಜು ಆವರಣದಲ್ಲಿ ಮಳೆ ಹಾಗೂ ಹೊಲಸು ನೀರು ನಿಂತು ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿಯ ಸರ್ಕಾರಿ ಪ್ರೌಢ ಶಾಲಾ ಪರಿಸರದಲ್ಲಿ ಪ್ರಾಥಮಿಕ, ಪ್ರೌಢ, ಆದರ್ಶ ವಿದ್ಯಾಲಯ ಹಾಗೂ ಪದವಿಪೂರ್ವ ವಿಭಾಗದ ಸಾವಿರಾರು ವಿದ್ಯಾರ್ಥಿಗಳು ಓದುತ್ತಾರೆ. ಆದರೆ ಈ ಶಾಲಾ ಪರಿಸರದಲ್ಲಿ ಸ್ವಚ್ಛತೆ, ಶಿಸ್ತು, ಸೌಲಭ್ಯಗಳೇನೂ ಇಲ್ಲ. ಸ್ವಲ್ಪ ಮಳೆಯಾದರೂ ನೀರು ನಿಂತು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗುತ್ತದೆ. ಈ ಸಮಸ್ಯೆಗಳನ್ನು ನಿವಾರಿಸುವಂತೆ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕನಿಷ್ಠ ಗುಂಡಿ ತುಂಬಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಡುವ ಸಣ್ಣ ಕೆಲಸವೂ ಆಗುತ್ತಿಎಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈ ಶಾಲಾ ಪರಿಸರದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಆದರೆ ಅವರೆಲ್ಲರಿಗೂ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ. ಸಣ್ಣ ಮಳೆ ಬಂದರೂ ಸಾಕು ಇಡೀ ಆವರಣದಲ್ಲಿ ನೀರು ನಿಂತು ಓಡಾಡಲು ಅನಾನುಕೂಲವಾಗುತ್ತದೆ. ತೊಟ್ಟ ಬಟ್ಟೆಗಳೆಲ್ಲಾ ಒದ್ದೆಯಾಗುತ್ತದೆ. ಕೆಲವು ಬಾರಿ ವಿದ್ಯಾರ್ಥಿನಿಯರು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ಕುರಿತು ಶಿಕ್ಷಣಾಧಿಕಾರಿಗಳನ್ನು ಕೇಳಿದರೆ ಇದಕ್ಕೆ ನಮ್ಮಲ್ಲಿ ಅನುದಾನ ಇಲ್ಲ ಎನ್ನುತ್ತಾರೆ. ಇನ್ನು ಪಟ್ಟಣ ಪಂಚಾಯಿತಿಗೆ ಹೇಳಿದರೆ ನಮ್ಮಲ್ಲಿ ಸಿಬ್ಬಂದಿ ಇಲ್ಲ ಎನ್ನುತ್ತಾರೆ. ಹೀಗಿರುವಾಗ ಈ ಶಾಲಾ ಸಮಸ್ಯೆಯನ್ನು ಯಾರು ಪರಿಹರಿಸಬೇಕು’ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಹೀಮಮಸಾಬ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಶಾಲಾ ಆವರಣದಲ್ಲಿ ಸ್ವಲ್ಪ ಮಳೆಯಾದರೂ ನೀರು, ಕೆಸರು ಆವರಿಸಿ ವಿದ್ಯಾರ್ಥಿಗಳು ಶೂ, ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗುತ್ತದೆ. ಈ ವಿಷಯ ಸ್ಥಳೀಯ ಸಂಸ್ಥೆಯ ಗಮನಕ್ಕೂ ತಂದಿದ್ದೇವೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ’ ಎಂದು ವಿದ್ಯಾರ್ಥಿ ಮುಖಂಡ ಅಶೋಕ ಶೆಂಬೆಳ್ಳಿ ತಿಳಿಸಿದ್ದಾರೆ.

‘ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ನಮಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇರುವ ಸಿಬ್ಬಂದಿಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ನಾವು ಜನರಿಂದ ವಿರೋಧ ಎದುರಿಸಬೇಕಾಗಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ದಯಾನಂದ ಘುಳೆ ಹೇಳುತ್ತಾರೆ.

‘ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನರ ಬೇಡಿಕೆಯೂ ಜಾಸ್ತಿಯಾಗಿದೆ. 58 ಸಿಬ್ಬಂದಿ ಪೈಕಿ 24 ಜನ ಇದ್ದಾರೆ. ಇನ್ನು ಕಚೇರಿ ಕೆಲಸದಲ್ಲಿ 9ಕ್ಕೂ ಜಾಸ್ತಿ ಹುದ್ದೆ ಖಾಲಿ ಇವೆ. ಇದರಿಂದಾಗಿ ಜನರ ಬೇಡಿಕೆಗೆ ಸ್ಪಂದಿಸುವುದು ಸವಾಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರುಬಾಯಿ ಘುಳೆ.

ಶೌಚಾಲಯ ವ್ಯವಸ್ಥೆ ಕಲ್ಪಿಸಲು ನ್ಯಾಯಾಧೀಶರ ತಾಕೀತು ಸಿಬ್ಬಂದಿ ಕೊರತೆಗೆ ಪಪಂ. ಅಧ್ಯಕ್ಷರ ಬೇಸರ ಇರುವ ಸಿಬ್ಬಂದಿ ಸರಿಯಾಗಿ ಕೆಲಸ ಮಾಡಲು ಆಗ್ರಹ

ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವುದು ಪಟ್ಟಣ ಪಂಚಾಯಿತಿ ಜವಾಬ್ದಾರಿ. ಆದರೆ ಕೇಳಲು ಹೋದರೆ ಅಲ್ಲಿ ಯಾರೂ ಇರುವುದಿಲ್ಲ. ಮೊಬೈಲ್ ಕರೆ ಸ್ವೀಕರಿಸುವುದಿಲ್ಲ. ಹೀಗಾದರೆ ಜನ ಯಾರಿಗೆ ಕೇಳಬೇಕು?
ರಹೀಮಸಾಬ್ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.