ADVERTISEMENT

ರಸ್ತೆಗಿಳಿದ ಕೆಲ ಕ್ಷಣಗಳಲ್ಲೆ ಆಟೊರಿಕ್ಷಾ ಬಂದ್

ನಗರದಲ್ಲಿ ನಿಯಮ ಸಡಿಲಿಕೆ: ಗೊಂದಲದ ಗೂಡು

ಚಂದ್ರಕಾಂತ ಮಸಾನಿ
Published 6 ಮೇ 2020, 10:44 IST
Last Updated 6 ಮೇ 2020, 10:44 IST
ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಬೆಂಗಳೂರಿನಿಂದ ಬಂದಿಳಿದ ಭಾಲ್ಕಿ ತಾಲ್ಲೂಕಿನ ಗ್ರಾಮವೊಂದರ ಕಾರ್ಮಿಕರು
ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಬೆಂಗಳೂರಿನಿಂದ ಬಂದಿಳಿದ ಭಾಲ್ಕಿ ತಾಲ್ಲೂಕಿನ ಗ್ರಾಮವೊಂದರ ಕಾರ್ಮಿಕರು   

ಬೀದರ್: ಸರ್ಕಾರ ಲಾಕ್‌ಡೌನ್‌ ಮೇ 17ರ ವರೆಗೆ ಮುಂದುವರಿಸಿದೆ. ಬೀದರ್‌ನ ಓಲ್ಡ್‌ಸಿಟಿಯನ್ನು ಹೊರತು ಪಡಿಸಿ ಜಿಲ್ಲೆಯನ್ನು ಕಿತ್ತಳೆ ವಲಯದಲ್ಲಿ ಗುರುತಿಸಿ ಆದೇಶ ಹೊರಡಿಸುವಷ್ಟರಲ್ಲಿ ಮತ್ತೆ ಏಳು ಮಂದಿಯಲ್ಲಿ ಕೋವಿಡ್‌ 19 ಸೋಂಕು ಕಾಣಿಸಿಕೊಂಡಿದೆ.

ನಗರದ ಮಧ್ಯಭಾಗದಲ್ಲಿರುವ ಖಾಜಿ ಕಾಲೊನಿ ಹಾಗೂ ಇಡೆನ್‌ ಕಾಲೊನಿಯಲ್ಲಿ ತಲಾ ಒಬ್ಬರಂತೆ ಇಬ್ಬರಿಗೆ ಸೋಂಕು ತಗುಲಿದೆ. ನಂತರ ಜಿಲ್ಲಾಡಳಿತ ಸಡಿಲಿಕೆ ನೀಡಬೇಕೋ, ಬೇಡವೋ ಎನ್ನುವ ಗೊಂದಲದಲ್ಲಿ ಇದೆ.

ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಿಗೆ ಸಾರಿಗೆ ಸೇವೆ ಆರಂಭವಾಗಿಲ್ಲ. ಬೆಳಿಗ್ಗೆ 9 ಗಂಟೆ ವೇಳೆಗೆ ಅಲ್ಲಲ್ಲಿ ಆಟೊರಿಕ್ಷಾಗಳು ರಸ್ತೆಗೆ ಇಳಿದಿದ್ದವು. ಪೊಲೀಸರು ಆಟೊ ಚಾಲಕರಿಗೆ ಎಚ್ಚರಿಕೆ ನೀಡಿ ಕಳಿಸಿ ಕೊಟ್ಟರು. ಸರ್ಕಾರದಿಂದ ಸ್ಪಷ್ಟ ಆದೇಶ ಬರುವವರೆಗೂ ಆಟೊ ಸಂಚಾರ ಶುರು ಮಾಡದಂತೆ ತಿಳಿಸಿದರು.

ADVERTISEMENT

ಜನ ಬೆಳಿಗ್ಗೆ ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿದ್ದು ಕಂಡು ಬಂದಿತು. ಕಿರಾಣಿ, ಮೊಬೈಲ್‌, ಎಲೆಕ್ಟ್ರಾನಿಕ್, ಆಟೊಮೊಬೈಲ್. ಪಾದರಕ್ಷೆ, ಪ್ಲಾಸ್ಟಿಕ್, ಸ್ಟೇಷನರಿ, ಎಲೆಕ್ಟ್ರಿಕಲ್‌ ಉಪಕರಣ, ಎಲೆಕ್ಟ್ರಿಕಲ್ ಉಪಕರಣಗಳ ದುರಸ್ತಿ ಅಂಗಡಿಗಳು ಮಧ್ಯಾಹ್ನದ ವರೆಗೂ ತೆರೆದುಕೊಂಡಿದ್ದವು.

ಕೆಲವು ಹೋಟೆಲ್‌ಗಳು ಬಾಗಿಲು ತೆರೆದುಕೊಂಡಿದ್ದವು. ಆದರೆ ಒಳಗೆ ಗ್ರಾಹಕರಿಗೆ ಪ್ರವೇಶ ಕಲ್ಪಿಸಿರಲಿಲ್ಲ. ಹೋಟೆಲ್‌ ಸಿಬ್ಬಂದಿ ಗ್ರಾಹಕರಿಗೆ ಉಪಾಹಾರದ ಪೊಟ್ಟಣಗಳನ್ನು ಕಟ್ಟಿಕೊಡುತ್ತಿದ್ದರು. ಗುರುನಾನಕ್‌ ಗೇಟ್‌ ಸಮೀಪದ ಕೆಲ ಹೋಟೆಲ್‌ಗಳು ಗ್ರಾಹಕರಿಗೆ ಚಹಾ ಮಾರಾಟ ಮಾಡಿದವು.

ಭಾಲ್ಕಿ, ಔರಾದ್, ಹುಮನಾಬಾದ್, ಕಮಲನಗರ, ಹುಲಸೂರು ತಾಲ್ಲೂಕಿನಲ್ಲಿ ಕೋವಿಡ್ 19 ಸೋಂಕಿತರು ಕಂಡು ಬಂದಿಲ್ಲ. ಹೀಗಾಗಿ ಈ ತಾಲ್ಲೂಕುಗಳಲ್ಲಿ ಸ್ವಲ್ಪ ಸಡಿಲಿಕೆ ನೀಡಲಾಗಿದೆ. ಆದರೆ, ಗಡಿಗಳಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಮಾತ್ರ ಬಿಗಿ ಬಂದೋಬಸ್ತ್‌ ಇದೆ. ಹೊರ ರಾಜ್ಯದವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.