ADVERTISEMENT

ಜಲ ಜಾಗೃತಿ: ಒಂದೂವರೆ ವರ್ಷದಿಂದ ನಾಗರಾಜ ಗೌಡ ಸೈಕಲ್ ಸವಾರಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 20:00 IST
Last Updated 24 ಜೂನ್ 2019, 20:00 IST
ಜಲ ಜಾಗೃತಿಗಾಗಿ ದೇಶದಾದ್ಯಂತ ಸೈಕಲ್ ಯಾತ್ರೆ ನಡೆಸುತ್ತಿರುವ ಹಾಸನದ ನಾಗರಾಜ ಗೌಡ ಸೋಮವಾರ ಬೀದರ್‌ಗೆ ತಲುಪಿದರು
ಜಲ ಜಾಗೃತಿಗಾಗಿ ದೇಶದಾದ್ಯಂತ ಸೈಕಲ್ ಯಾತ್ರೆ ನಡೆಸುತ್ತಿರುವ ಹಾಸನದ ನಾಗರಾಜ ಗೌಡ ಸೋಮವಾರ ಬೀದರ್‌ಗೆ ತಲುಪಿದರು   

ಬೀದರ್: ಜಲ ಹಾಗೂ ಹಸಿರು ಜಾಗೃತಿಗೆ ದೇಶದಾದ್ಯಂತ ಸೈಕಲ್ ಯಾತ್ರೆ ನಡೆಸುತ್ತಿರುವ ಹಾಸನದ ನಾಗರಾಜ ಗೌಡ ಸೋಮವಾರ ಪರಂಪರೆ ನಗರಿಯನ್ನು ತಲುಪಿದರು.

ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ, ಸರ್ಕಾರಿ ಆಸ್ಪತ್ರೆ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ ನೀರು, ಪರಿಸರ, ಗೋರಕ್ಷಣೆ, ಆಧ್ಯಾತ್ಮದ ಜಾಗೃತಿ ಮೂಡಿಸಿದರು. ವಿಶ್ವಶಾಂತಿಯ ಸಂದೇಶವನ್ನೂ ನೀಡಿದರು.

‘2017ರ ಡಿಸೆಂಬರ್ 3 ರಿಂದ ಮುಂಬೈನಿಂದ ಸೈಕಲ್ ಯಾತ್ರೆ ಆರಂಭಿಸಿದ್ದೇನೆ. ಈವರೆಗೆ ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲಪ್ರದೇಶ, ಉತ್ತರಾಖಂಡ, ನವದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಸಂಚರಿಸಿದ್ದೇನೆ. ತೆಲಂಗಾಣದಿಂದ ಬೀದರ್ ಪ್ರವೇಶಿಸಿದ್ದೇನೆ’ ಎಂದು 50 ವರ್ಷದ ಅವರು ತಿಳಿಸಿದರು.

ADVERTISEMENT

‘ಪ್ರತಿ ದಿನ 80 ರಿಂದ 100 ಕಿ.ಮೀ. ಸೈಕಲ್ ಯಾತ್ರೆ ಕೈಗೊಳ್ಳುತ್ತಿದ್ದೇನೆ. ಬೆಳಿಗ್ಗೆ 5 ಗಂಟೆಗೆ ತಂಪಾದ ವಾತಾವರಣದಲ್ಲಿ ಯಾತ್ರೆ ಶುರು ಮಾಡಿ, ಬಿಸಿಲು ಹೆಚ್ಚಾಗುವವರೆಗೂ ಸೈಕಲ್ ಓಡಿಸುತ್ತೇನೆ. ಮಧ್ಯಾಹ್ನ ಮಲಗಿ, ಮತ್ತೆ ಸಂಜೆ 4 ಗಂಟೆಯಿಂದ 7 ಗಂಟೆವರೆಗೂ ಸೈಕಲ್ ತುಳಿಯುತ್ತೇನೆ’ ಎಂದು ಹೇಳಿದರು.

‘ರಾತ್ರಿ ಆಶ್ರಮ, ಮಂದಿರ, ಗುರುದ್ವಾರಗಳಲ್ಲಿ ಮಲಗುತ್ತೇನೆ. ಧಾರ್ಮಿಕ ಸ್ಥಳಗಳಲ್ಲೇ ಊಟ, ಉಪಾಹಾರ ಸೇವಿಸುತ್ತೇನೆ. ಕೆಲವೊಮ್ಮೆ ರಾತ್ರಿ ಧಾಬಾದವರು ಉಚಿತ ಊಟ ಕೊಡುತ್ತಾರೆ. ಯಾವುದೇ ಸ್ಥಳಕ್ಕೆ ಹೋದರೂ ಜನಸಾಮಾನ್ಯರೇ ನನ್ನ ನೆರವಿಗೆ ಬರುತ್ತಾರೆ ಹೊರತು ದೊಡ್ಡವರಲ್ಲ’ ಎಂದು ತಿಳಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ನನ್ನ ಯಾತ್ರೆಯ ಉದ್ದೇಶವನ್ನು ವಿವರಿಸುತ್ತೇನೆ. ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

ನಾಗರಾಜ ಗೌಡ ಅವರು ತಮ್ಮ ಸೈಕಲ್‌ ಮೇಲೆ ಯಾತ್ರೆ ಸಂದರ್ಭದಲ್ಲಿ ದಿನ ನಿತ್ಯ ಬಳಕೆಗಾಗಿ ಬಟ್ಟೆ, ಹಾಸಿಗೆ, ಹೊದಿಕೆ ಮತ್ತಿತರ ಸಾಮಗ್ರಿಗಳನ್ನು ಇಟ್ಟುಕೊಂಡಿದ್ದಾರೆ. ಭಾರತದ ಧ್ವಜ ಕಟ್ಟಿದ್ದಾರೆ. ‘ಎರಡು ತಿಂಗಳಲ್ಲಿ ನನ್ನ ಯಾತ್ರೆ ಪೂರ್ಣಗೊಳ್ಳಲಿದೆ’ ಎಂದು ಹೇಳುತ್ತಲೇ ಅವರು ವಾಸ್ತವ್ಯಕ್ಕಾಗಿ ಗುರುದ್ವಾರದತ್ತ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.