
ಚಾಂಬೋಳ್(ಜನವಾಡ): ‘ಆಯುರ್ವೇದದ ಇತ್ತೀಚಿನ ಚಿಕಿತ್ಸಾ ಪದ್ಧತಿಯಿಂದ ಬಹುತೇಕ ರೋಗಗಳನ್ನು ತ್ವರಿತವಾಗಿ ಗುಣಪಡಿಸಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೀದರ್ ತಾಲ್ಲೂಕಿನ ಚಾಂಬೋಳ ಸಮೀಪದ ನೂತನ ಜ್ಞಾನಸುಧಾ ಎ.ಕೆ. ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ಆಯುರ್ವೇದ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಆಯುರ್ವೇದ ಚಿಕಿತ್ಸೆಯಿಂದ ಅಡ್ಡ ಪರಿಣಾಮವಿಲ್ಲದೇ ರೋಗಗಳಿಗೆ ಚಿಕಿತ್ಸೆ ಪಡೆಯಬಹುದು. ಮನುಷ್ಯನ ಆಯುಷ್ಯವನ್ನೂ ಹೆಚ್ಚಿಸಿಕೊಳ್ಳಬಹುದು. ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಜಗತ್ತಿಗೆ ಪರಿಚಯಿಸಿದ್ದು ಭಾರತ. ಈ ಚಿಕಿತ್ಸಾ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ’ ಎಂದು ಹೇಳಿದರು.
‘ಇಂದಿನ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯ ಕಾರಣ ಬಹುತೇಕ ಮನುಷ್ಯರು ಒಂದಿಲ್ಲೊಂದು ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆಯುರ್ವೇದ ಚಿಕಿತ್ಸೆ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ತಿಳಿಸಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಜ್ಞಾನಸುಧಾ ಎ.ಕೆ. ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಸಹಜ ಹೆರಿಗೆ ಮಾಡಿಸಲಾಗುತ್ತಿದೆ. ಚಿಕಿತ್ಸೆಗೆ ಬರುವವರಿಗೆ ಬೀದರ್‌ನ ಕೇಂದ್ರ ಬಸ್ ನಿಲ್ದಾಣದಿಂದ ಆಸ್ಪತ್ರೆವರೆಗೆ ಪ್ರತಿದಿನ ಮಧ್ಯಾಹ್ನ 1ಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ರೋಗಿಗಳು ಅದರ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕ ಮುನೇಶ್ವರ ಲಾಖಾ ಮಾತನಾಡಿ, ‘ಜ್ಞಾನಸುಧಾ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡುತ್ತಿದೆ. ಇದೀಗ ಆರೋಗ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಲು ಮುಂದಾಗಿದ್ದು, ಆಸ್ಪತ್ರೆ ಆರಂಭಿಸಿದೆ’ ಎಂದು ತಿಳಿಸಿದರು.
ಜ್ಞಾನಸುಧಾ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಚನ್ನವೀರ ಪಾಟೀಲ, ಜ್ಞಾನಸುಧಾ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಪ್ರಾಚಾರ್ಯ ಡಾ.ರಾಜೇಶ ಉದಪುಡಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಧೀರಜ್ ಸೋನಿ, ಪ್ರಮುಖರಾದ ಚಂದ್ರಶೇಖರ ಪಾಟೀಲ, ರವಿ ಮೂಲಗೆ, ಶಂಕರರಾವ ಕೊಟರಕಿ, ಪೂಜಾ ಜಾರ್ಜ್ ಸ್ಯಾಮುವೆಲ್ ಹಾಜರಿದ್ದರು. ಡಾ.ಪ್ರಿಯಾ ಎಳ್ಳಿ ನಿರೂಪಿಸಿದರು. ಶಿವಶರಣಯ್ಯ ಮಠಪತಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.