ADVERTISEMENT

ಬೀದರ್: ನಾರಾಯಣರಾವ್ ನೆನೆದು ಭಾವುಕರಾದ ನಾಯಕರು

ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 15:27 IST
Last Updated 26 ಸೆಪ್ಟೆಂಬರ್ 2020, 15:27 IST
ಬೀದರ್‌ನ ಕಾಂಗ್ರೆಸ್ ಕಚೇರಿಯಲ್ಲಿ ಬಿ. ನಾರಾಯಣರಾವ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ
ಬೀದರ್‌ನ ಕಾಂಗ್ರೆಸ್ ಕಚೇರಿಯಲ್ಲಿ ಬಿ. ನಾರಾಯಣರಾವ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ   

ಬೀದರ್: ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶಿವನಗರದಲ್ಲಿ ಇರುವ ಪಕ್ಷದ ಕಚೇರಿಯಲ್ಲಿ ಶನಿವಾರ ಕೊರೊನಾದಿಂದ ನಿಧನರಾದ ಬಸವಕಲ್ಯಾಣ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಿ. ನಾರಾಯಣರಾವ್ ಅವರ ವ್ಯಕ್ತಿತ್ವ, ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಲು ನಡೆಸಿದ ಹೋರಾಟ ಹಾಗೂ ರಾಜಕೀಯ ಪಯಣದ ಕುರಿತು ಅನೇಕರು ಮಾತನಾಡಿದರು.

ಬಡ ಕುಟುಂಬದಿಂದ ಬಂದಿದ್ದ ಬಿ. ನಾರಾಯಣರಾವ್ ಅವರು ಬಡವರು, ಶೋಷಿತರು, ದೀನ ದಲಿತರು ಹಾಗೂ ಹಿಂದುಳಿದ ವರ್ಗಗಳ ದನಿಯಾಗಿದ್ದರು. ಜಯಪ್ರಕಾಶ ನಾರಾಯಣ ಹಾಗೂ ದೇವರಾಜ ಅರಸು ಅವರ ಪ್ರಭಾವಕ್ಕೊಳಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಹಿಂದುಳಿದ ವರ್ಗಗಳ ಏಳಿಗೆಗಾಗಿ ಹೋರಾಟಕ್ಕೆ ಧುಮುಕಿದ್ದರು ಎಂದು ಸ್ಮರಿಸಿದರು.

ADVERTISEMENT

ಎಸ್‍.ಟಿ ಗೊಂಡ ಪ್ರಮಾಣ ಪತ್ರ ಕೊಡಲು ಕಾರಣರಾದರು. ತಾಲ್ಲೂಕು ಮಟ್ಟದಲ್ಲಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ವಸತಿ ನಿಲಯ ಶುರು ಮಾಡಲು ಸರ್ಕಾರದ ಮೇಲೆ ಒತ್ತಡ ತಂದರು. ಅದರಲ್ಲಿ ಯಶ ಕೂಡ ಕಂಡರು. ತಮ್ಮ ಹೋರಾಟಗಳ ಮೂಲಕವೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರ ಗಮನ ಸೆಳೆದರು. ರಾಜ್ಯ ಹಿಂದುಳಿದ ವರ್ಗಗಳ ನಾಯಕರಲ್ಲಿ ಗುರುತಿಸಿಕೊಂಡರು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿದ ಅವರು ಸಾಕ್ಷರತಾ ಮಿಷನ್ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಬಸವಾದಿ ಶರಣರ ಕಾರ್ಯ ಕ್ಷೇತ್ರವಾದ ಬಸವಕಲ್ಯಾಣದಿಂದಲೇ ವಿಧಾನಸಭೆಗೆ ಆಯ್ಕೆಯಾಗಲು ಸಂಕಲ್ಪ ತೊಟ್ಟು ಚುನಾವಣೆ ಎದುರಿಸಿದರು. ಎರಡು ಬಾರಿ ಅವರಿಗೆ ಯಶಸ್ಸು ದೊರಕಲಿಲ್ಲ. ಮೂರನೇ ಬಾರಿ ಕ್ಷೇತ್ರದ ಜನ ಅವರ ಕೈಹಿಡಿದರು ಎಂದು ತಿಳಿಸಿದರು.

ನಾರಾಯಣರಾವ್ ಅವರು ಜನರ ನಿರೀಕ್ಷೆ ಹುಸಿ ಮಾಡಲಿಲ್ಲ. ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದರು. ಲಾಕ್‍ಡೌನ್ ವೇಳೆ ಆಹಾರಧಾನ್ಯ ಕಿಟ್ ವಿತರಿಸಿ ಬಡವರಿಗೆ ನೆರವಾದರು. ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತಾಗಲು ಮೇಲಿಂದ ಮೇಲೆ ವೈದ್ಯರ ಸಭೆ ನಡೆಸಿದ್ದರು ಎಂದು ಹೇಳಿದರು.

ಬಸವಾನುಯಾಯಿ ಆಗಿದ್ದ ನಾರಾಯಣರಾವ್ ಅವರು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ನಿರಂತರ ಶ್ರಮಿಸಿದ್ದರು. ಅದರ ಶಂಕುಸ್ಥಾಪನೆಗೆ ರಾಷ್ಟ್ರಪತಿ ಅವರನ್ನು ಕರೆಸುವ ಹೆಬ್ಬಯಕೆ ಹೊಂದಿದ್ದರು. ಅದು ಈಡೇರುವ ಮುನ್ನವೇ ವಿಧಿ ವಶರಾಗಿರುವುದು ನೋವಿನ ಸಂಗತಿ ಎಂದರು.

ರಾಜ್ಯ ಸರ್ಕಾರ ನಾರಾಯಣರಾವ್ ಅವರ ಆಶಯಕ್ಕೆ ಅನುಗುಣವಾಗಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಬೇಕು. ರಾಷ್ಟ್ರಪತಿ ಅವರನ್ನು ಆಹ್ವಾನಿಸಿ ಅದರ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಒತ್ತಾಯಿಸಿದರು.

ನಾರಾಯಣರಾವ್ ಅವರ ಒಡನಾಡಿಗಳಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಅಮೃತರಾವ್ ಚಿಮಕೋಡೆ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಜಿಲ್ಲಾ ಅಧ್ಯಕ್ಷ ಗೋವರ್ಧನ ರಾಠೋಡ್ ಭಾಷಣದ ವೇಳೆ ಭಾವುಕರಾದರು.

ಇದಕ್ಕೂ ಮೊದಲು ಬಿ. ನಾರಾಯಣರಾವ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಎರಡು ನಿಮಿಷಗಳ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಚಾರ ಸಮಿತಿ ಅಧ್ಯಕ್ಷ ಬಶಿರೊದ್ದೀನ್ ಹಾಲಹಿಪ್ಪರ್ಗಾ, ವಕ್ತಾರ ರಾಜಶೇಖರ ಪಾಟೀಲ ಅಷ್ಟೂರ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಮುಖಂಡರಾದ ಶಿವರಾಜ ಹಾಸನಕರ್, ಶಂಕರರಾವ್ ದೊಡ್ಡಿ, ಸಂಜಯ ಜಾಗೀರದಾರ್, ಸಂಜುಕುಮಾರ ಡಿ.ಕೆ, ಜಾರ್ಜ್ ಫರ್ನಾಂಡೀಸ್, ಲತಾ ರಾಠೋಡ್, ವೆಂಕಟರಾವ್ ಶಿಂದೆ, ಮಾರುತಿ ಶಾಖಾ, ಕರೀಮ್ ಸಾಬ್, ಸುನೀಲ ಬಚ್ಚನ್, ಶರಣಪ್ಪ ಶರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.