ADVERTISEMENT

ಕೆಟ್ಟ ರಸ್ತೆ: ಗುಂಡಿ ಮುಚ್ಚಲು ಮುಂದಾದ ಜನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 6:16 IST
Last Updated 20 ಜುಲೈ 2025, 6:16 IST
ಔರಾದ್ ತಾಲ್ಲೂಕಿನ ಕಂದಗೂಳ ಸೇತುವೆ ಬಳಿ ರಸ್ತೆ ಮೇಲಿನ ಗುಂಡಿಗಳು ಯುವಕರು ಮುಚ್ಚುತ್ತಿರುವುದು
ಔರಾದ್ ತಾಲ್ಲೂಕಿನ ಕಂದಗೂಳ ಸೇತುವೆ ಬಳಿ ರಸ್ತೆ ಮೇಲಿನ ಗುಂಡಿಗಳು ಯುವಕರು ಮುಚ್ಚುತ್ತಿರುವುದು   

ಔರಾದ್: ಹದಗೆಟ್ಟ ರಸ್ತೆಯಿಂದ ಬೇಸತ್ತ ಖಾನಾಪೂರ ಗ್ರಾಮಸ್ಥರು ತಾವೇ ರಸ್ತೆ ಮೇಲಿನ ಗುಂಡಿ ಮುಚ್ಚಲು ಮುಂದಾಗಿದ್ದಾರೆ.

ಬೀದರ್ ಜಿಲ್ಲಾ ಕೇಂದ್ರದಿಂದ ವಡಗಾಂವ್ ಹಾಗೂ ಹತ್ತಾರು ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ಚಂಬೋಳದಿಂದ ಕಂದಗೂಳ ಸೇತುವೆ ವರೆಗಿನ 2 ಕಿ.ಮೀ. ರಸ್ತೆ ತೀರಾ ಹದಗೆಟ್ಟಿದೆ. ರಸ್ತೆ ಮೇಲೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಸುಗಮ ಸಂಚಾರಕ್ಕೆ ಕುತ್ತು ಬಂದಿದೆ. ಅನೇಕ ಬೈಕ್ ಸವಾರರು ಕೈಕಾಲು ಮುರಿದುಕೊಂಡಿದ್ದಾರೆ. ಆಸ್ಪತ್ರೆಗೆ ಹೋಗುವ ರೋಗಿಗಳು ಪರದಾಡುತ್ತಿದ್ದಾರೆ.

‘ಈ ಕೆಟ್ಟ ರಸ್ತೆ ದುರಸ್ತಿ ಮಾಡುವಂತೆ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಶಾಸಕರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೂ ಅವರು ಕನಿಷ್ಠ ಗುಂಡಿ ಮುಚ್ಚಲು ಮುಂದಾಗುತ್ತಿಲ್ಲ. ಈ ಕಾರಣ ನಾವೇ ಗುಂಡಿ ಮುಚ್ಚಲು ಮುಂದಾಗಿದ್ದೇವೆ’ ಎಂದು ಸಾಮಾಜಿಕ ಕಾರ್ಯಕರ್ತ ಕಾಶಿನಾಥ ತಿಳಿಸಿದ್ದಾರೆ.

ADVERTISEMENT

‘ಎರಡು ದಿನಗಳ ಹಿಂದೆ ಓಮ್ಮಿ ವ್ಯಾನ್‌ನಲ್ಲಿ ಸಿಮೆಂಟ್, ಮರಳು, ಕಾಂಕ್ರಿಟ್ ತಂದು ಕಂದಗೂಳ ಸೇತುವೆ ಬಳಿ ಇರುವ ದೊಡ್ಡ ದೊಡ್ಡ ಗುಂಡಿ ಮುಚ್ಚಿದ್ದೇವೆ. ಈ ಕಾರ್ಯಕ್ಕೆ ನಮ್ಮ ಗೆಳೆಯರಾದ ದತ್ತಾತ್ರಿ, ದಯಾನಂದ, ನಾಗೇಶ, ರಾಜಕುಮಾರ, ಹುಸೇನಸಾಬ್ ಸಹಕಾರ ನೀಡಿದ್ದಾರೆ. ವಾರದೊಳಗೆ ಈ ರಸ್ತೆ ಮೇಲಿನ ಎಲ್ಲ ಗುಂಡಿ ಮುಚ್ಚದಿದ್ದರೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘ಚಾಂಬೋಳದಿಂದ ಕಂದಗಳೂರವರೆಗಿನ ರಸ್ತೆ ಕೆಟ್ಟಿರುವುದು ನಮ್ಮ ಗಮನಕ್ಕೂ ಇದೆ. ಈ ರಸ್ತೆ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ಮಾಡಲಾಗಿದೆ. ಅನುದಾನ ಬಂದ ಬಳಿಕ ಕೆಲಸ ಶುರು ಮಾಡುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.