ADVERTISEMENT

ಭಾಲ್ಕಿ | ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಿ: ಸಚಿವ ಈಶ್ವರ ಖಂಡ್ರೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 7:00 IST
Last Updated 9 ಡಿಸೆಂಬರ್ 2025, 7:00 IST
ಭಾಲ್ಕಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು
ಭಾಲ್ಕಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು   

ಭಾಲ್ಕಿ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲು ಶೇ 50ರಷ್ಟು ಶಾಸಕರ ಮತ್ತು ಸಂಸದರ ಅನುದಾನ ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಶಾಸಕರ ನಿಧಿ ಮತ್ತು ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಬರುವ ಡಿ. 18ರೊಳಗೆ ಕ್ರಿಯಾ ಯೋಜನೆ ಸಲ್ಲಿಸಬೇಕು. ಅಗತ್ಯ ಇರುವ ಕಡೆಗಳಲ್ಲಿ ಶಾಲಾ ಕೋಣೆ, ಶೌಚಾಲಯ, ಅಂಗನವಾಡಿ ನವೀಕರಣ, ಸುತ್ತುಗೋಡೆ ನಿರ್ಮಾಣ ಸೇರಿದಂತೆ ಮುಂತಾದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನಮೋದನೆ ಪಡೆದು ಹೊಸ ವರ್ಷ ಆರಂಭದ ಜನವರಿ ತಿಂಗಳಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿ ಹಂಚಿಕೆ ಮಾಡಬೇಕು. ಕಾಮಗಾರಿಯಲ್ಲಿ ರಾಜಿ ಮಾಡಿಕೊಳ್ಳಬಾರದು. ಬೋಗಸ್ ಕಾಮಗಾರಿ ಕಂಡುಬಂದರೆ ಮತ್ತು ಬಿಡುಗೆಯಾದ ಅನುದಾನ ಬಳಕೆಯಲ್ಲಿ ವಿಫಲರಾದರೇ ಸಂಬಂಧಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮನೆಯಲ್ಲಿ ಕೂತರೆ ಟಿಸಿ ರಿಪೇರಿ ಆಗುತ್ತ: ಮಳೆಯಿಂದ ಎಷ್ಟು ವಿದ್ಯುತ್ ಕಂಬಗಳು ನೆಲಕ್ಕರುಳಿವೆ. ಕಂಡಕ್ಟರ್ ಮತ್ತು ಟ್ರಾನ್ಸ್‌ಫಾರ್ಮರ್‌ ಸ್ಥಿತಿಗತಿ ಬಗ್ಗೆ ಸಚಿವ ಖಂಡ್ರೆ ಮಾಹಿತಿ ಕೇಳಿದರು.

ಜೆಸ್ಕಾಂ ಅಧಿಕಾರಿ ಮಾತನಾಡಿ, ‘ವಿದ್ಯುತ್ ಕಂಬಗಳ ಜೋಡಣೆ ಕಾರ್ಯ ನಡೆಯುತ್ತಿದೆ. ಕೆಲ ಟ್ರಾನ್ಸ್‌ಫಾರ್ಮರ್‌ ದುರಸ್ತಿ ಆಗಬೇಕಿವೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಟ್ರಾನ್ಸ್‌ಫಾರ್ಮರ್ ಕೆಟ್ಟು ಬಹಳ ದಿನಗಳಾಗಿವೆ. ಇನ್ನೂ ದುರಸ್ತಿ ಆಗಿಲ್ಲವೆಂದರೆ ಹೇಗೆ? ಮನೆಯಲ್ಲಿ ಕೂತರೆ ದುರಸ್ತಿಯಾಗುತ್ತದೆಯೇ, ಫಾಲೋಪ್ ಮಾಡಿ, ಕೆಲಸ ಮಾಡಬೇಕು. ಈ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸಬೇಕು’ ಎಂದು ಹೇಳಿದರು.

5 ಲಕ್ಷ ಸಸಿ ಸಿದ್ಧಪಡಿಸಲು ಸೂಚನೆ: ನರೇಗಾ ಯೋಜನೆಯ ಸಹಾಯ ಪಡೆದು ತಲಾ ಒಂದು ಗ್ರಾ.ಪಂ ವತಿಯಿಂದ ಕನಿಷ್ಠ ಮೂರು ಸಾವಿರ ಸಸಿಗಳನ್ನು ಸಿದ್ಧಪಡಿಸಬೇಕು. ಈಗಿನಿಂದಲೇ ಸಸಿಗಳ ಬೆಳೆಸುವಿಕೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಜೂನ್‍ನಲ್ಲಿ ಜಿಲ್ಲೆಯಾದ್ಯಂತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವ ಖಂಡ್ರೆ ತಿಳಿಸಿದರು.

ಬಹಿರ್ದೆಸೆ ಜೀವಂತ–ತೀವ್ರ ಅಸಮಾಧಾನ: ತಾಲ್ಲೂಕಿನ ಬಹುತೇಕ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಣೆ ಮಾಡಲಾಗಿದೆ. ಆದರೆ ಇಂದಿಗೂ ಬಹಿರ್ದೆಸೆ ಜೀವಂತವಾಗಿದೆ. ಅಭಿವೃದ್ಧಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಸಚಿವ ಖಂಡ್ರೆ ಕಿಡಿಕಾರಿದರು.

ಕೋನಮೇಳಕುಂದಾ, ನೀಲಮನಳ್ಳಿ, ಜೋಳದಾಪಕಾ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಇಂದಿಗೂ ಬಯಲು ಬಹಿರ್ದೆಸೆಗೆ ಹೋಗುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕಾರ್ಯನಿರ್ವಾಹಕ ಅಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಪ್ರಕಾಶ ಕುದರೆ, ಯೋಜನಾಧಿಕಾರಿ ಸೂರ್ಯಕಾಂತ ಬಿರಾದಾರ, ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಬೀದರ್ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಬೃಹತ್ ಪ್ರಾಮಾಣದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು ಎಲ್ಲ ಅಧಿಕಾರಿಗಳು ಸಾಥ್ ನೀಡಬೇಕು ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.