ADVERTISEMENT

ಭಾಲ್ಕಿ | ಬೆಳಗದ ವಿದ್ಯುತ್ ದೀಪ: ಪಾದಚಾರಿಗಳಿಗೆ ಸಂಕಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 8:02 IST
Last Updated 3 ಫೆಬ್ರುವರಿ 2025, 8:02 IST
ಭಾಲ್ಕಿಯ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತಕ್ಕೆ ತೆರಳುವ ರಸ್ತೆ ಮಧ್ಯೆ ಇರುವ ವಿದ್ಯುತ್ ದೀಪಗಳು ಬೆಳಗದೆ ಇರುವುದರಿಂದ ಕತ್ತಲು ಆವರಿಸಿರುವುದು
ಭಾಲ್ಕಿಯ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತಕ್ಕೆ ತೆರಳುವ ರಸ್ತೆ ಮಧ್ಯೆ ಇರುವ ವಿದ್ಯುತ್ ದೀಪಗಳು ಬೆಳಗದೆ ಇರುವುದರಿಂದ ಕತ್ತಲು ಆವರಿಸಿರುವುದು   

ಭಾಲ್ಕಿ: ಪಟ್ಟಣದ ವಿವಿಧೆಡೆಯ ರಸ್ತೆ ಅಕ್ಕಪಕ್ಕ ಮತ್ತು ರಸ್ತೆ ವಿಭಜಕದಲ್ಲಿ ಅಳವಡಿಸಿರುವ ಕೆಲ ಬೀದಿ ದೀಪಗಳು ಉರಿಯದೆ, ಜನರು ರಾತ್ರಿ ಹೊತ್ತು ಕತ್ತಲಲ್ಲಿ ತಿರುಗಾಡುವಂತಾಗಿದೆ.

ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತಕ್ಕೆ ತೆರಳುವ ರಸ್ತೆ ಮಧ್ಯೆ ಇರುವ ವಿದ್ಯುತ್ ದೀಪಗಳಲ್ಲಿ ಸುಮಾರು 12 ಕಂಬಗಳ ವಿದ್ಯುತ್ ದೀಪಗಳು ಬೆಳಗದೆ ಇರುವುದರಿಂದ ಕತ್ತಲು ಆವರಿಸುತ್ತಿದೆ.

ಈ ಮಾರ್ಗದಲ್ಲಿಯೇ ತಹಶೀಲ್ದಾರ್ ಕಚೇರಿ, ಪುರಭವನ, ಚನ್ನಬಸವಾಶ್ರಮ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೃಷ್ಣಾ ಗ್ರಾಮೀಣ ಬ್ಯಾಂಕ್ ಸೇರಿದಂತೆ ಸುಮಾರು 4 ಎಟಿಎಂಗಳಿವೆ. ಭಾಲ್ಕಿ ಕೆರೆಯ ಸುತ್ತ ನಿರ್ಮಿಸಿರುವ ವಾಕಿಂಗ್ ಟ್ರ್ಯಾಕ್‌ಗೆ ತೆರಳುವ ಮಾರ್ಗವೂ ಇದೆ ಆಗಿದೆ.

ADVERTISEMENT

ಹಾಗಾಗಿ, ರಾತ್ರಿ, ನಸುಕಿನ ಜಾವ ಈ ಮಾರ್ಗದಲ್ಲಿ ಸಂಚರಿಸುವ ಪಾದಚಾರಿಗಳಿಗೆ, ವಾಯು ವಿಹಾರಿಗಳಿಗೆ ನಡೆದಾಡಲು ಹಾಗೂ ಸುರಕ್ಷತೆಯ ದೃಷ್ಟಿಯಿಂದ ತುಂಬಾ ತೊಂದರೆ, ಭಯ ಆಗುತ್ತಿದೆ. ನಮಗೆಲ್ಲಾ ರಸ್ತೆ ಪಕ್ಕದ ಅಂಗಡಿಗಳ ಮುಂಭಾಗದ, ಕನ್ನಡ ಧ್ವಜ ಕಟ್ಟೆಯಲ್ಲಿರುವ ಹೈಮಾಸ್ಟ್ ದೀಪಗಳ ಬೆಳಕೇ ಆಧಾರ ಎಂಬಂತಾಗಿದೆ ಎಂದು ಪಟ್ಟಣ ವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಹಳೇ ಪಟ್ಟಣ, ಬೊಮ್ಮಗೊಂಡೇಶ್ವರ ವೃತ್ತದಿಂದ ಆರ್‌ಟಿಒ ಕಚೇರಿವರೆಗಿನ ರಸ್ತೆ ಮಧ್ಯದಲ್ಲಿರುವ ಸುಮಾರು ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ಮಹಾತ್ಮ ಗಾಂಧಿ ವೃತ್ತದಿಂದ ಸೇವಂತ್ ಡೇ ರಸ್ತೆ ಪಕ್ಕದ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನು ಕೆಲವೆಡೆಯ ಎರಡು ದೀಪಗಳಲ್ಲಿ ಒಂದು ಉರಿಯುತ್ತಿದೆ. ಮತ್ತೊಂದು ಬೆಳಗುತ್ತಿಲ್ಲ’ ಎಂದು ಈಶ್ವರ ರುಮ್ಮಾ ಅಳಲು ತೋಡಿಕೊಂಡರು.

‘ಹಲವು ದಿನಗಳಿಂದ ಈ ದೀಪಗಳು ಉರಿಯದೆ, ಪಟ್ಟಣದ ಪ್ರಮುಖ ಬೀದಿಯಲ್ಲಿ ರಾತ್ರಿ ಹೊತ್ತು ಕತ್ತಲು ಆವರಿಸುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಕಳ್ಳತನ ಸೇರಿದಂತೆ ಅಪರಾಧ ಚಟುವಟಿಕೆಗಳು ಕತ್ತಲೆಯಲ್ಲಿ ನಡೆಯುತ್ತವೆ. ಹಾಗಾಗಿ, ಪಟ್ಟಣದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನವೂ ನಡೆಯುತ್ತಿದೆ’ ಎಂದು ಪುರಸಭೆ ಸದಸ್ಯ ಪ್ರವೀಣ ಸಾವರೆ ತಿಳಿಸಿದರು.

ಬೀದಿದೀಪದ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿರುವ ನಾಗರಿಕ ಸೌಲಭ್ಯ. ಅದೇ ಇಲ್ಲದಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಎಲ್ಲೆಡೆಯ ಎಲ್ಲ ದೀಪಗಳನ್ನು ಬೆಳಗಿಸಲು ಪುರಸಭೆ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಪಟ್ಟಣದಲ್ಲಿ ನಡೆಯುತ್ತಿರುವ ಕಳ್ಳತನ ಸೇರಿದಂತೆ ಯಾವುದೇ ಕೆಟ್ಟ ಕೆಲಸಗಳನ್ನು ತಡೆಯಲು ಕೂಡಲೇ ಎಲ್ಲೆಡೆ ವಿದ್ಯುತ್ ದೀಪಗಳು ಬೆಳಗುವಂತೆ ಮಾಡಬೇಕು
ಪ್ರವೀಣ ಸಾವರೆ ಪುರಸಭೆ ಸದಸ್ಯ ಭಾಲ್ಕಿ
ಪಟ್ಟಣದ ವಿವಿಧೆಡೆ ಕಾರ್ಯನಿರ್ವಹಿಸದ ವಿದ್ಯುತ್ ದೀಪಗಳಿಂದ ಪಾದಚಾರಿಗಳಿಗೆ ಸಾರ್ವಜನಿಕರಿಗೆ ತುಂಬಾ ಅನನುಕೂಲ ಆಗುತ್ತಿದೆ. ವಿದ್ಯುತ್ ದೀಪಗಳು ತೋರಿಕೆಗೆ ಎಂಬಂತಾಗಿವೆ
ಈಶ್ವರ ರುಮ್ಮಾ ಪಟ್ಟಣ ನಿವಾಸಿ
ಕೆಲವೆಡೆ ವೈರಿಂಗ್ ಸಮಸ್ಯೆಯಿಂದ ವಿದ್ಯುತ್ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ. ಶೀಘ್ರದಲ್ಲಿ ಪಟ್ಟಣದ ಎಲ್ಲ ದೀಪಗಳು ಬೆಳಗುವಂತೆ ಕ್ರಮ ವಹಿಸುತ್ತೇನೆ
ಸಂಗಮೇಶ ಕಾರಬಾರಿ ಪುರಸಭೆ ಮುಖ್ಯಾಧಿಕಾರಿ ಭಾಲ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.