ADVERTISEMENT

‘ಬಸವಣ್ಣ ಒಂದು ಜಾತಿಗೆ ಸೀಮಿತರಲ್ಲ’

​ಪ್ರಜಾವಾಣಿ ವಾರ್ತೆ
Published 4 ಮೇ 2025, 15:51 IST
Last Updated 4 ಮೇ 2025, 15:51 IST
ಬೀದರ್‌ನ ಅಲ್ಲಮಪ್ರಭು ನಗರದಲ್ಲಿ ನಡೆದ ಬಸವಣ್ಣನವರ ಜಯಂತಿಯನ್ನು ಚನ್ನಬಸವಾನಂದ ಸ್ವಾಮೀಜಿ ಉದ್ಘಾಟಿಸಿದರು
ಬೀದರ್‌ನ ಅಲ್ಲಮಪ್ರಭು ನಗರದಲ್ಲಿ ನಡೆದ ಬಸವಣ್ಣನವರ ಜಯಂತಿಯನ್ನು ಚನ್ನಬಸವಾನಂದ ಸ್ವಾಮೀಜಿ ಉದ್ಘಾಟಿಸಿದರು   

ಬೀದರ್‌: ‘ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಒಂದು ಜಾತಿಗೆ ಸೀಮಿತರಲ್ಲ. ಈ ಕಾರಣಕ್ಕಾಗಿಯೇ ಅವರನ್ನು ವಿಶ್ವಗುರು ಬಸವಣ್ಣ, ಜಗಜ್ಯೋತಿ ಎಂದು ಕರೆಯುತ್ತಾರೆ’ ಎಂದು ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಅಲ್ಲಮಪ್ರಭು ನಗರದ ಉದ್ಯಾನದಲ್ಲಿ ಜರುಗಿದ ಬಸವೇಶ್ವರರ 892ನೇ ಜಯಂತಿ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದ ಶರಣರು ಜಾತಿ ನಿರ್ಮೂಲನೆಗೆ ಶ್ರಮಿಸಿ ಜ್ಯೋತಿತತ್ವ ಬೆಳಗಿದರು. ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪ ಸ್ಥಾಪಿಸಿ, ಎಲ್ಲ ಜಾತಿ ಜನಾಂಗದವರನ್ನು ಸೇರಿಸಿಕೊಂಡು ಎಲ್ಲ ವಿಷಯಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಿದ್ದರು ಎಂದು ಹೇಳಿದರು.

ADVERTISEMENT

ಬಿಜೆಪಿ ಮುಖಂಡ ಈಶ್ವರ ಸಿಂಗ್‌ ಠಾಕೂರ್‌ ಉದ್ಘಾಟಿಸಿ, ಬಸವಣ್ಣನವರ ಆಶಯದಂತೆ ಕೇಂದ್ರದ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ. ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿಯಲ್ಲಿ ನಾವೆಲ್ಲ ಜೀವನ ಸಾಗಿಸುತ್ತಿರುವುದು ಸೌಭಾಗ್ಯ ಎಂದರು.

ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಮಲ್ಲಿಕಾರ್ಜುನ ಬುಕ್ಕಾ ದಂಪತಿ ಬಸವಪೂಜೆ ನೆರವೇರಿಸಿದರು. ಕೆಎಎಸ್ ಪಾಸಾದ ಬಡಾವಣೆಯ ಯುವಕ ಶಿವಕುಮಾರ ಮನೋಹರ ಸ್ವಾಮಿ ಹಾಗೂ ಐಐಟಿ ಪಾಸಾದ ರಾಹುಲ್‌ ಚಂದ್ರಕಾಂತ ಪಟ್ನೆ ಅವರನ್ನು ಸನ್ಮಾನಿಸಲಾಯಿತು.

ಶ್ರೀನಾಥ ಕೋರೆ, ಅಕ್ಕಮಹಾದೇವಿ ಸ್ವಾಮಿ ವಚನ ಗಾಯನ ಮಾಡಿದರು. ಬಸವಕುಮಾರ ಚಟನಳ್ಳಿ ಪ್ರಾರ್ಥಿಸಿದರು. ಕಾರ್ತಿ ಘೂಳೆ ವಚನ ನೃತ್ಯ ಮಾಡಿದರು. ಚಂದ್ರಕಾಂತ ಪಟ್ನೆ ಸ್ವಾಗತಿಸಿದರು. ಸುಜೀತಕುಮಾರ ಬಿ. ನಿರೂಪಿಸಿದರೆ, ಶಶಿಧರ ಹೊಸದೊಡ್ಡಿ ವಂದಿಸಿದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ನೂರಂದಪ್ಪ ಗಿರಿ, ಮಲ್ಲಯ್ಯ ಸ್ವಾಮಿ, ಭೀಮರಾವ ಪ್ರೊ.ಪಾಟೀಲ, ವೀರಶೆಟ್ಟಿ ಗಣಾಪುರ, ಚಂದ್ರಶೇಖರ ಸ್ವಾಮಿ, ಶಿವರಾಜ ಪಟ್ನೆ, ಚಂದ್ರಶೇಖರ ರೆಡ್ಡಿ, ಬಸಯ್ಯ ಸ್ವಾಮಿ, ರಾಜಕುಮಾರ ಸ್ವಾಮಿ, ಗಣಪತಿ ಬಿರಾದಾರ, ಗಣಪತರಾವ ಗುಡುರೆ, ಈಶ್ವರಮ್ಮ ಪಾಟೀಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.