ADVERTISEMENT

ಬಸವ ಜಯಂತಿಯನ್ನುಮನೆಯಲ್ಲಿಯೇ ಆಚರಿಸಿ

ಸಂಕಷ್ಟದಲ್ಲಿರುವವರಿಗೆ ನೆರವಾಗಿ: ಧನ್ನೂರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 13:51 IST
Last Updated 21 ಏಪ್ರಿಲ್ 2020, 13:51 IST
ಬಸವರಾಜ ಧನ್ನೂರು
ಬಸವರಾಜ ಧನ್ನೂರು   

ಬೀದರ್: ‘ಕೋವಿಡ್–19 ಸೋಂಕಿನ ಪ್ರಯುಕ್ತ ಲಾಕ್‍ಡೌನ್ ಜಾರಿಯಲ್ಲಿ ಇರುವ ಕಾರಣ ಬಸವಾನುಯಾಯಿಗಳು ಏ. 26ರಂದು ತಮ್ಮ ತಮ್ಮ ಮನೆಗಳಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಬಸವ ಜಯಂತಿ ಆಚರಿಸಬೇಕು’ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮನವಿ ಮಾಡಿದ್ದಾರೆ.

‘ಅಂದು ಬೆಳಿಗ್ಗೆ 8 ಗಂಟೆಗೆ ತಮ್ಮ ಮನೆಗಳ ಮೇಲೆ ಷಟ್‍ಸ್ಥಲ ಧ್ವಜಾರೋಹಣ ಮಾಡಬೇಕು. ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಪ್ರತಿಯೊಬ್ಬರು ಕನಿಷ್ಠ ತಲಾ ಐದು ವಚನಗಳನ್ನು ಪಠಿಸಬೇಕು’ ಎಂದು ತಿಳಿಸಿದ್ದಾರೆ.

‘ಕೊರೊನಾ ಸೋಂಕಿನಿಂದ ವಿಶ್ವವೇ ನಲುಗಿದೆ. ಎಲ್ಲೆಡೆ ಭಯ, ಆತಂಕ ಮನೆ ಮಾಡಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆದ್ದರಿಂದ ಕೊರೊನಾ ಪ್ರಕೋಪದಿಂದ ಮನುಕುಲದ ಉಳಿವಿಗೆ ಭಕ್ತಿ, ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ಲಾಕ್‍ಡೌನ್‍ನಿಂದ ನಿತ್ಯದ ಬದುಕಿಗೆ ಕೂಲಿ ಕೆಲಸವನ್ನೇ ಅವಲಂಬಿಸಿದವರು, ಕಡು ಬಡವರು, ನಿರ್ಗತಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳ್ಳವರು ತಮ್ಮ ನೆರೆಹೊರೆಯ ಪ್ರದೇಶದಲ್ಲಿ ಇರುವ ತಲಾ ಐವರಿಗೆ ಧನ, ಧಾನ್ಯ ದಾಸೋಹ ಮಾಡುವ ಮೂಲಕ ಜಗತ್ತಿಗೆ ಕಾಯಕ, ದಾಸೋಹ ತತ್ವ ಪ್ರತಿಪಾದಿಸಿದ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು’ ಎಂದು ಸಲಹೆ ಮಾಡಿದ್ದಾರೆ.

‘ಬಸವ ತತ್ವದಲ್ಲಿ ದಾಸೋಹ ದೊಡ್ಡ ಸೌಭಾಗ್ಯವಾಗಿದೆ. ಇಲ್ಲಿ ದಾಸೋಹ ಮಾಡುವವರಿಗಿಂತ ಪಡೆದುಕೊಳ್ಳುವವರು ಶ್ರೇಷ್ಠರಾಗಿದ್ದಾರೆ. ಹೀಗಾಗಿ, ತೊಂದರೆಯಲ್ಲಿ ಇರುವವರಿಗಾಗಿ ಅನ್ನ ದಾಸೋಹ ಏರ್ಪಡಿಸಬೇಕು. ಈ ಮೂಲಕ ಬಸವಣ್ಣನವರ ಕೃಪೆಗೆ ಪಾತ್ರರಾಗಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.