ADVERTISEMENT

ವಚನ ಸಾಹಿತ್ಯದಲ್ಲಿ ಅರಿವಿನ ಅನಾವರಣ

ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಬಸವ ದಳದ ಪ್ರಮುಖ ಮಲ್ಲಿಕಾರ್ಜುನ ಡೋಣಗಾಪುರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 11:25 IST
Last Updated 19 ಮಾರ್ಚ್ 2021, 11:25 IST
ಕಮಲನಗರ ತಾಲ್ಲೂಕಿನ ತೋರಣಾ ಗ್ರಾಮದ ಅನುಭವ ಮಂಟಪದಲ್ಲಿ ನಡೆದ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಡೋಣಗಾಪುರೆ ಮಾತನಾಡಿದರು
ಕಮಲನಗರ ತಾಲ್ಲೂಕಿನ ತೋರಣಾ ಗ್ರಾಮದ ಅನುಭವ ಮಂಟಪದಲ್ಲಿ ನಡೆದ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಡೋಣಗಾಪುರೆ ಮಾತನಾಡಿದರು   

ತೋರಣಾ (ಕಮಲನಗರ): ‘ವಚನಗಳು ಸಾಹಿತ್ಯ ದರ್ಶನದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿವೆ. ಅವುಗಳಲ್ಲಿ ಅರಿವಿನ ಅನಾವರಣವಿದೆ. ಸತ್ಯದ ಸಂದೇಶವಿದೆ’ ಎಂದು ಭಾಲ್ಕಿ ರಾಷ್ಟ್ರೀಯ ಬಸವ ದಳದ ಪ್ರಮುಖ ಮಲ್ಲಿಕಾರ್ಜುನ ಡೋಣಗಾಪುರೆ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತೋರಣಾ ಗ್ರಾಮದ ಅನುಭವ ಮಂಟಪದಲ್ಲಿ ಈಚೆಗೆ ನಡೆದ 74ನೇ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾದರ ಚನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಸೇರಿ ಅನೇಕ ಶರಣರು ತಳಸಮುದಾಯಗಳನ್ನು ಮೇಲೆತ್ತುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ. ಬಸವಣ್ಣ ತಳಸಮುದಾಯಕ್ಕೆ ನೀಡಿದ ಬಹುಮುಖ್ಯವಾದ ಕೊಡುಗೆಯೆಂದರೆ ಸಂಸ್ಕಾರ’ ಎಂದು ತಿಳಿಸಿದರು.

ADVERTISEMENT

‘ಶರಣರು ಭಕ್ತಿಯ ಅನಾವರಣ ಮಾಡುತ್ತ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ ಮಾಡಿದರು. ಅಂಕು-ಡೊಂಕುಗಳನ್ನು ತಿದ್ದಿದ್ದರು. ರಾಜಾಶ್ರಮದಲ್ಲಿ ಬಂಧಿಯಾಗಿದ್ದ ಸಾಹಿತ್ಯವನ್ನು ಜನಸಾಮನ್ಯರ ಬಳಿ ತಂದರು’ ಎಂದು ಅವರು ವಿಶ್ಲೇಷಿಸಿದರು.

ಬಸವಕಲ್ಯಾಣದ ಬಸವ ಮಂಟಪದ ರೂವಾರಿ ಬಸವಪ್ರಭು ಮಹಾಸ್ವಾಮೀಜಿ ಮಾತನಾಡಿ,‘ಬಸವಣ್ಣ ತನ್ನ ಅಕ್ಕ ನಾಗಮ್ಮರಿಗೆ ಉಪನಯನ ಸಂಸ್ಕಾರ ಇಲ್ಲವೆಂದಾಗ ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ ಎಂದು ನಿರಾಕರಿಸಿದ ಸನ್ನಿವೇಶ ಮತ್ತು ಸಮಗಾರ ಹರಳಯ್ಯ, ಬ್ರಾಹ್ಮಣರ ಮಧುವರಸನ ಕುಟುಂಬದ ನಡುವೆ ಅಂತರ್ಜಾತಿ ವಿವಾಹ ಮಾಡಿಸಿದ್ದು, ಈ ಎರಡು ಘಟನೆಗಳು ಲಿಂಗ, ಜಾತಿ ತಾರತಮ್ಯವನ್ನು ತೊಡೆದು ಹಾಕಲು ಮಾಡಿದ ಕ್ರಾಂತಿ’ ಎಂದು ಬಣ್ಣಿಸಿದರು.

ತೋರಣಾ ಕೃಷಿ ಅಧಿಕಾರಿ ಭೀಮರಾವ ಸಿಂಧೆ ಮಾತನಾಡಿ,‘12ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದರು. ನಾವು ವಚನಗಳನ್ನು ಓದಲು ಸೀಮಿತಗೊಳಿಸದೇ ಅನುಸರಣೆ ಮಾಡಬೇಕು’ ಎಂದು ಸಲಹೆ ನೀಡಿದರು.

ಔರಾದ್(ಬಿ) ತಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೋರಣಾ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾವಗಿರಾವ ಕೋರೆ ಷಟಸ್ಥಳ ಧ್ವಜಾರೋಹಣ ಮಾಡಿದರು. ಗ್ರಾ.ಪಂ. ಉಪಾಧ್ಯಕ್ಷ ಸುನೀಲ ಸಿಗರೆ, ಸದಸ್ಯ ಸುನೀಲ ಮೊರಗೆ, ಸತ್ಯನಾರಾಯಣ ಲಕೋಟಿಯಾ, ಮಂಗಲಾ.ಎಸ್. ರಾಜೋಳೆ, ಸಂಗೀತಾ ಬೇಂದ್ರೆ, ದಯಾನಂದ ರಾಜೋಳೆ , ಸುಭದ್ರಾಬಾಯಿ ನೀಲಕಂಠ, ಕಲಾವತಿ, ಹಾವಪ್ಪ ಮೇತ್ರೆ, ಪಾಂಡುರಂಗ, ಶಂಕರ, ಬಸವರಾಜ, ಧನರಾಜ, ರವೀಂದ್ರ, ಸುಜಾತಾ ಅಮರ, ಸ್ವಾತಿ ಶಂಕರ, ಈಶ್ವರಿ ಶಿವಕುಮಾರ ಹಾಗೂ ಸಂಗೀತಾ ಪ್ರೇಮಸಾಗರ ಇದ್ದರು.

ತೋರಣಾ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಪ್ರಕಾಶ ಶೆಟಕಾರ ನಿರೂಪಿಸಿದರು. ಮೀನಾಕ್ಷಿ ಸಜ್ಜನ ಕೋರೆ ಸ್ವಾಗತಿಸಿದರು. ಸ್ವಾತಿ ಶಂಕರ ಕಾಡೋದೆ ಬಸವ ಪೂಜೆ ಮಾಡಿದರು. ಗುಂಡಮ್ಮ ನಾಗನಾಥ ತಪಂಡಾರೆ ಭಕ್ತಿಸೇವೆ ಮಾಡಿದರು. ಬಸವ ದಳದ ಕಾರ್ಯದರ್ಶಿ ಸುನೀಲ ಕೋರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.