ADVERTISEMENT

ಬಸವತತ್ವಗಳ ಪರಿಪಾಲನೆ ಇಂದಿನ ಅಗತ್ಯ: ಗಂಗಾಂಬಿಕಾ

ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವದಲ್ಲಿ ಅಕ್ಕ ಗಂಗಾಂಬಿಕಾ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:43 IST
Last Updated 23 ಸೆಪ್ಟೆಂಬರ್ 2025, 4:43 IST
ಬಸವಕಲ್ಯಾಣದಲ್ಲಿ ಸೋಮವಾರ ಶರಣ ವಿಜಯೋತ್ಸವ ಅಂಗವಾಗಿ ನಡೆದ ವಚನ ಸಾಹಿತ್ಯದ ಪಲ್ಲಕ್ಕಿ ಮೆರವಣಿಗೆಯಲ್ಲಿ ಅಕ್ಕ ಗಂಗಾಬಿಕಾ ಮಾತನಾಡಿದರು
ಬಸವಕಲ್ಯಾಣದಲ್ಲಿ ಸೋಮವಾರ ಶರಣ ವಿಜಯೋತ್ಸವ ಅಂಗವಾಗಿ ನಡೆದ ವಚನ ಸಾಹಿತ್ಯದ ಪಲ್ಲಕ್ಕಿ ಮೆರವಣಿಗೆಯಲ್ಲಿ ಅಕ್ಕ ಗಂಗಾಬಿಕಾ ಮಾತನಾಡಿದರು   

ಬಸವಕಲ್ಯಾಣ: ‘ವಿರೋಧಿ ಶಕ್ತಿಗಳು ಅಧಿಕವಾಗುತ್ತಿರುವ ಇಂದಿನ ದಿನಗಳಲ್ಲಿ ಬಸವತತ್ವದ ಪರಿಪಾಲನೆ ಅಗತ್ಯವಾಗಿದೆ’ ಎಂದು ಲಿಂಗವಂತ ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಬಿಕಾ ಹೇಳಿದರು.

ಶರಣ ಹರಳಯ್ಯ ಗವಿಯಲ್ಲಿ ಹಮ್ಮಿಕೊಂಡಿರುವ ವಚನ ವಿಜಯೋತ್ಸವ ಮತ್ತು ಹುತಾತ್ಮ ದಿನಾಚರಣೆಯ ಅಂಗವಾಗಿ ಸೋಮವಾರ ನಡೆದ ವಚನ ಸಾಹಿತ್ಯದ ಪಲ್ಲಕ್ಕಿ ಮೆರವಣಿಗೆ ಪರುಷಕಟ್ಟೆಗೆ ತಲುಪಿದಾಗ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಬರೀ ಮಾತಾಡುವುದಲ್ಲ. ನಡೆದು ತೋರಬೇಕು. ನಡೆ-ನುಡಿ ಒಂದಾದರೆ ಮಾತ್ರ ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸಬಲ್ಲದು. ಮನುಷ್ಯರು ನೆಮ್ಮದಿಯಿಂದ ಜೀವನ ಸಾಗಿಸಬಹುದು’ ಎಂದು ಹೇಳಿದರು.

ADVERTISEMENT

ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಬಸವಾನುಯಾಯಿಗಳಲ್ಲಿ ಐಕ್ಯತೆ ಇರಲಿ. ಫಲಾಪೇಕ್ಷೆ ಇಲ್ಲದೆ ಒಂದಾಗಿ ಧರ್ಮ ಕಾರ್ಯ ಕೈಗೊಳ್ಳಬೇಕು. ಶರಣ ವಿಜಯೋತ್ಸವದಂಥ ಕಾರ್ಯಕ್ರಮಕ್ಕೆ ಎಲ್ಲರೂ ಸರ್ವರೀತಿಯಿಂದ ಸಹಕಾರ ನೀಡಬೇಕು’ ಎಂದು ಹೇಳಿದರು.

ಬಸವ ಮಹಾಮನೆಯ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಬಸವಾದಿ ಶರಣರ ಸಂದೇಶ ಎಲ್ಲೆಡೆ ಮುಟ್ಟಿಸುವುದಕ್ಕಾಗಿ ಸೇನಾನಿಗಳಂತೆ ಧೈರ್ಯದಿಂದ ಪ್ರಯತ್ನಿಸಬೇಕು’ ಎಂದು ಹೇಳಿದರು.

ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ, ಮಹಾರಾಷ್ಟ್ರ ಅಲ್ಲಮಗಿರಿಯ ಚನ್ನಬಸವ ಸ್ವಾಮೀಜಿ, ಶರಣೆ ಚಿತ್ರಮ್ಮತಾಯಿ, ಅನಿಮಿಷಾನಂದ ಸ್ವಾಮೀಜಿ ಮಾತನಾಡಿದರು.

ಬೇಲೂರು ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಸತ್ಯಕ್ಕತಾಯಿ, ಲಾವಣ್ಯವತಿ ತಾಯಿ, ಇಂದುಮತಿ ತಾಯಿ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ತೊಂಡಾರೆ, ರಾಷ್ಟ್ರೀಯ ಬಸವದಳದ ತಾಲ್ಲೂಕು ಅಧ್ಯಕ್ಷ ರವೀಂದ್ರ ಕೊಳಕೂರ, ಎಸ್.ಜಿ. ಕರ್ಣೆ, ಬಸವರಾಜ ಬಾಲಿಕಿಲೆ, ಅಶೋಕ ನಾಗರಾಳೆ, ಆಕಾಶ ಖಂಡಾಳೆ, ಶಿವಕುಮಾರ ಬಿರಾದಾರ, ನಿರ್ಮಲಾ ಶಿವಣಕರ ಮತ್ತಿತರರು ಪಾಲ್ಗೊಂಡಿದ್ದರು.

ಶರಣ ವಿಜಯೋತ್ಸವಕ್ಕೆ ದಶಕಪೂರ್ತಿ ಹರಳಯ್ಯ ಪೀಠದಿಂದ ಆಯೋಜನೆ

ಛತ್ರಿ ಚಾಮರದೊಂದಿಗೆ ಮೆರವಣಿಗೆ ವಚನಸಾಹಿತ್ಯವನ್ನು ಪಲ್ಲಕ್ಕಿಯಲ್ಲಿಟ್ಟು ಛತ್ರಿ ಚಾಮರದೊಂದಿಗೆ ಮೆರವಣಿಗೆ ನಡೆಸಲಾಯಿತು. ಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭವಾಯಿತು. ದಾರಿಯುದ್ದಕ್ಕೂ ವಚನಗಳನ್ನು ಹಾಡಲಾಯಿತು. ಡೊಳ್ಳು ಕುಣಿತ ಮತ್ತಿತರೆ ವಾದ್ಯ ಮೇಳದವರು ಪಾಲ್ಗೊಂಡಿದ್ದರು. ಎಲ್ಲರೂ ಬಿಳಿ ವಸ್ತ್ರಗಳನ್ನು ಧರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.