
ಬಸವಕಲ್ಯಾಣ: ನಗರದ ಬಸವಣ್ಣನವರ ಪರುಷಕಟ್ಟೆಯಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ ದುಬೈನಲ್ಲಿ ರಾಷ್ಟ್ರೀಯ ಬಸವದಳ, ಹೈದ ರಬಾದ್‌ನ ಗುರು ಬಸವ ಫೌಂಡೇಶನ್, ಚನ್ನಬಸವೇಶ್ವರ ಸಾಹಿತ್ಯಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಸಹಯೋಗದೊಂದಿಗೆ ನಡೆಯುವ 6ನೇ ಅಂತರರಾಷ್ಟ್ರೀಯ ಬಸವತತ್ವ ಸಮಾವೇಶಕ್ಕಾಗಿ ತೆಗೆದುಕೊಂಡು ಹೋಗಲಿರುವ ಬಸವ ಜ್ಯೋತಿಯನ್ನು ಹೊತ್ತಿಸಿಕೊಳ್ಳಲಾಯಿತು.
ರಾಷ್ಟ್ರೀಯ ಬಸವ ದಳದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಚಾಲನೆ ನೀಡಿ ಮಾತನಾಡಿ,‘ಚನ್ನಬಸವಾನಂದ ಸ್ವಾಮೀಜಿಯವರು ಬಸವತತ್ವವನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ದುಬೈನಲ್ಲಿ ನಡೆಯುವ ಬಸವತತ್ವ ಸಮಾವೇಶಕ್ಕೆ ಅನೇಕರು ಇಲ್ಲಿಂದ ಹೋಗಲಿದ್ದು, ಅಲ್ಲಿನವರೂ ಭಾಗವಹಿಸುವರು’ ಎಂದರು.
ಕುಂಬಳಗೂಡು ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ,‘ಬಸವಣ್ಣನವರು ಸಾರಿದ ಸಮಾನತೆ, ಸಹೋದತ್ವ, ಸಹಬಾಳ್ವೆಯ ತತ್ವ ಜಗತ್ತಿಗೆ ತಿಳಿಸುವುದಕ್ಕಾಗಿ ದುಬೈನಲ್ಲಿ ಸಮಾವೇಶ ಆಯೋಜಿಸಲಾಗಿದೆ. ನೇಪಾಳದಲ್ಲಿ 2022ರಲ್ಲಿ ಪ್ರಥಮ ಸಮಾವೇಶ ಜರುಗಿತು. ಮಾತೆ ಮಹಾದೇವಿಯವರು ಬಸವತತ್ವ ಜಗತ್ತಿಗೆ ಬಿತ್ತರಿಸುವ ಸಂಕಲ್ಪ ಹೊತ್ತಿದ್ದರು. ಅವರ ಕಾರ್ಯ ಮುಂದುವರಿಸಲಾಗುತ್ತಿದೆ’ ಎಂದು ಹೇಳಿದರು.
ಬೀದರ್ ಬಸವಮಂಟಪದ ಸತ್ಯಾದೇವಿತಾಯಿ, ಚಂದ್ರಕಲಾ ಪಾಟೀಲ, ನಾಗನಾಥ ಪಾಟೀಲ ಹೈದರಾಬಾದ್, ಧರ್ಮೇಂದ್ರ ಪೂಜಾರಿ, ಸರಸ್ವತಿ ಶೆಟಗಾರ್, ವಿಜಯಕುಮಾರ ದಿಂಡೆ, ಶಿವಶರಣಪ್ಪ ಹಾರೋಗೇರಿ, ನಿರ್ಮಲಾ ನಿಲಂಗೆ, ಶ್ರೀನಾಥ ಕೋರೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.