ADVERTISEMENT

ಬಸವ ಧರ್ಮಪೀಠ ಒಡೆದದ್ದು ಭಾಲ್ಕಿ ಶ್ರೀ: ಚನ್ನಬಸವಾನಂದ ಸ್ವಾಮೀಜಿ ಆರೋಪ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 15:15 IST
Last Updated 28 ಆಗಸ್ಟ್ 2025, 15:15 IST
   

ಬೀದರ್‌: ‘ಲಿಂಗಾನಂದ ಸ್ವಾಮೀಜಿ ಹುಟ್ಟು ಹಾಕಿರುವ ಬಸವ ಧರ್ಮಪೀಠ ಸಂಸ್ಥೆಯನ್ನು ಒಡೆಯಲು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರೇ ಮುಖ್ಯ ಕಾರಣೀಕರ್ತರು’ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ  ಚನ್ನಬಸವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ವಿರೋಧಿಸಲು ನಮಗೆ ಆಹ್ವಾನಿಸುವ ಭಾಲ್ಕಿ ಶ್ರೀಗಳು ಬಸವ ಸಂಸ್ಕೃತಿ ಅಭಿಯಾನಕ್ಕೆ ನಮ್ಮನ್ನು ಕರೆಯುವುದಿಲ್ಲ. ಇವರ ದ್ವಂದ್ವ, ತುಷ್ಟೀಕರಣ ನೀತಿಗೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರನ್ನು ಪದೇ ಪದೇ ಭಾಲ್ಕಿ ಮಠಕ್ಕೆ ಕರೆಸಿಕೊಂಡು ಹಿರಿಯ ಮತ್ತು ಕಿರಿಯ ಸ್ವಾಮೀಜಿಗಳು ಕಿವಿಯೂದುವ ಕೆಲಸ ಮಾಡುತ್ತಿದ್ದು, ಇದನ್ನು ಬಿಡಬೇಕು. ನೀವು ಹಿರಿಯರು ಎನ್ನುವ ಕಾರಣಕ್ಕೆ ನಿಮಗೆ ಗೌರವ ಕೊಡುತ್ತಿದ್ದೇವೆ. ಭಾಲ್ಕಿ ಶ್ರೀಗಳು ಬಸವ ಧರ್ಮಪೀಠ ಒಡೆಯುವ ಕೆಲಸ ಕೈಬಿಡದಿದ್ದರೆ ಭಾಲ್ಕಿ ಹಿರೇಮಠದ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಬರುವ ಅಕ್ಟೋಬರ್ 11, 12ರಂದು ಬಸವಕಲ್ಯಾಣದಲ್ಲಿ 4ನೇ ಸ್ವಾಭಿಮಾನಿ ಕಲ್ಯಾಣ ಪರ್ವ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯ ಸೇರಿದಂತೆ ಇತರೆ ಜಿಲ್ಲೆಯ ಬಸವ ಭಕ್ತರು ಭಾಗವಹಿಸುವರು ಎಂದು ತಿಳಿಸಿದರು. 

ಬಸವ ಮಂಟಪದ ಮಾತೆ ಸತ್ಯಾದೇವಿ, ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ, ಪ್ರಮುಖರಾದ ಬಸವಂತರಾವ್‌ ಬಿರಾದಾರ, ಮಲ್ಲಿಕಾರ್ಜುನ ಜೈಲರ್, ಗಿರಿಜಮ್ಮ ಧಾರವಾಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.