
ಬಸವಕಲ್ಯಾಣ: ತಾಲ್ಲೂಕಿನ ಗಡಿ ಭಾಗದ ಮರಾಠಿ ಭಾಷಿಕರು ಅಧಿಕವಿರುವ ಗ್ರಾಮಗಳಲ್ಲಿ ಕನ್ನಡ ಶಾಲೆ ಆರಂಭಕ್ಕೆ ಶಾಸಕ ಶರಣು ಸಲಗರ ಬೆಳಗಾವಿ ಅಧಿವೇಶನದಲ್ಲಿ ಆಗ್ರಹಿಸಿರುವುದಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಳ ಮರಾಠಾ ಮುಖಂಡರು ಬೆಂಬಲ ಸೂಚಿಸಿದ್ದಾರೆ.
ಏಕಂಬಾ, ಮೋರಖಂಡಿ, ಘೋಟಾಳ, ಕೋಟಮಾಳ, ಮನ್ನಳ್ಳಿ, ಹುಲಸೂರ, ಮಾಚನಾಳ, ಗ್ರಾಮಗಳ ಪ್ರಮುಖರು ಭಾನುವಾರ ನಗರದಲ್ಲಿ ಶಾಸಕರನ್ನು ಸನ್ಮಾನಿಸಿ ಧನ್ಯವಾದ ಸಲ್ಲಿಸಿದ್ದಾರೆ. ಗಡಿ ಗ್ರಾಮಗಳಲ್ಲಿ ಕನ್ನಡ ಶಾಲೆ ಆರಂಭ ಆಗುವತನಕ ತಾವು ಪ್ರಯತ್ನ ಮುಂದುವರಿಸಬೇಕು ಎಂದು ಅವರಿಗೆ ಕೇಳಿಕೊಂಡಿದ್ದಾರೆ.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡ ಮಹಾದೇವ ಹಸೂರೆ ಮಾತನಾಡಿ, ‘ನಾವು ಕನ್ನಡಿಗ ಮರಾಠರು. ಕನ್ನಡ ನಾಡು ನುಡಿಯನ್ನು ಗೌರವಿಸುವವರು. ಆದರೂ, ಕೆಲವೆಡೆ ಮರಾಠಿ ಮಾಧ್ಯಮದ ಶಾಲೆ ಇರುವ ಕಾರಣ ಅಲ್ಲಿನವರು ಈ ಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ. ಆದರೆ ಮುಂದಿನ ಪೀಳಿಗೆ ಕನ್ನಡ ಕಲಿಯಲಿ ಎಂಬ ಉದ್ದೇಶದಿಂದ ಹಲವಾರು ಊರಿನವರು ನಮಗೆ ಕನ್ನಡ ಶಾಲೆ ಮಂಜೂರು ಮಾಡಿಸಿ ಎಂದು ಶಾಸಕರಿಗೆ ಅನೇಕ ಸಲ ಮನವಿ ಸಲ್ಲಿಸಿದ್ದರು. ಅದರಂತೆ ಅವರು ಮರಾಠಿಯೊಂದಿಗೆ ಕನ್ನಡ ಶಾಲೆಯೂ ಬೇಕು ಎಂದು ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ಆದರೆ, ಮರಾಠಾ ಸಮಾಜದವರೇ ಕೆಲವರು ಶಾಸಕರು ಮರಾಠಿ ಶಾಲೆ ಮುಚ್ಚುವಂತೆ ಒತ್ತಾಯಿಸಿದ್ದಾರೆ ಎಂದು ಇಲ್ಲಸಲ್ಲದನ್ನು ಹೇಳುತ್ತಿದ್ದು ಅದನ್ನು ಎಲ್ಲರ ಪರವಾಗಿ ಖಂಡಿಸುತ್ತೇನೆ’ ಎಂದರು.
ಶಂಕರರಾವ್ ನಾಗದೆ ಮಾತನಾಡಿ, ‘ಜನರ ವಿನಂತಿಯ ಮೇರೆಗೆ ಶಾಸಕರು ಅಧಿವೇಶನದಲ್ಲಿ ಮಾತನಾಡಿದ್ದಾರೆ. ಅದಕ್ಕೆ ಅನ್ಯರು ವಿರೋಧಿಸುವುದು ಸರಿಯಲ್ಲ' ಎಂದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಜ್ಞಾನೇಶ್ವರ ಮುಳೆ ಮಾತನಾಡಿ, ‘ನಮ್ಮೂರಲ್ಲಿ ಕನ್ನಡ ಶಾಲೆ ಇರುವುದರಿಂದ ಮರಾಠಿ ಭಾಷಿಕರೂ ಈ ಮಾಧ್ಯಮದಲ್ಲೇ ಶಿಕ್ಷಣ ಪಡೆದಿದ್ದರಿಂದ ವಿವಿಧ ಹುದ್ದೆಗಳಲ್ಲಿದ್ದಾರೆ’ ಎಂದರು.
ಕೋಟಮಾಳ ಗ್ರಾಮದ ಯುವಕ ಮಹಾದೇವ ಎವಲೆ ಮಾತನಾಡಿ, ‘ನಮ್ಮೂರಲ್ಲಿ ಶೇ 80ರಷ್ಟು ಮರಾಠರಿದ್ದು ಮರಾಠಿ ಕಲಿತಿದ್ದರಿಂದ ಶೈಕ್ಷಣಿಕ ಹಿನ್ನಡೆಯಾಗಿದೆ. ಯಾರಿಗೂ ಯಾವುದೇ ನೌಕರಿಯೂ ಸಿಕ್ಕಿಲ್ಲ. ಆದ್ದರಿಂದ ಕನ್ನಡ ಶಾಲೆ ಮಂಜೂರಿಗೆ ಆಗ್ರಹಿಸಿ ಶಾಸಕರಿಗೆ ಅನೇಕ ಸಲ ಕೇಳಿಕೊಂಡಿದ್ದೇವೆ. ಅದರಂತೆ ಅವರು ಬೇಡಿಕೆ ಮಂಡಿಸಿದ್ದು ಅದರಲ್ಲಿ ತಪ್ಪೇನಿದೆ’ ಎಂದರು.
ಶಾಸಕ ಶರಣು ಸಲಗರ, ರಮೇಶ ಪಾಟೀಲ ಮಾಚನಾಳ, ಜಯವಂತ ವಾಮನರಾವ್ ಗಡಿಗೌಡಗಾಂವ, ಬಾಲಾಜಿ ಕರಾಳೆ ಏಕಂಬಾ, ಕಮಲಾಕರ ಪಾಟೀಲ ಮನ್ನಳ್ಳಿ, ಶಿವಾಜಿ ಪಾಟೀಲ ಮತ್ತಿತರರು ಮಾತನಾಡಿದರು. ಮುಖಂಡರಾದ ಶ್ರೀನಿವಾಸ ಪಾಟೀಲ ಕೊಹಿನೂರ, ತಾತೇರಾವ್ ಪಾಟೀಲ ಮಂಗಳೂರ, ಓಂಪಾಟೀಲ ಜಾನಾಪುರ, ಶಹಾಜಿ ಜಾಜನಮುಗಳಿ, ಅಭಿಮನ್ಯು ಪಾಟೀಲ ಬೆಟಬಾಲ್ಕುಂದಾ, ರಾಜೀವ ವಾಡಿಕರ, ಬಾಲಾಜಿ ಕಾರಬಾರಿ ಮತ್ತಿತರರು ಉಪಸ್ಥಿತರಿದ್ದರು.
ತೇಜೋವಧೆಗೆ ಯತ್ನ
ಶಾಸಕ ಶರಣು ಸಲಗರ ಮಾತನಾಡಿ ‘ತಾಲ್ಲೂಕಿನ ಹಲವಾರು ಗಡಿಗ್ರಾಮಗಳ ಜನರು ಪದೇ ಪದೇ ಮನವಿ ಸಲ್ಲಿಸಿದ್ದರಿಂದಲೇ ನಾನು ಮರಾಠಿ ಶಾಲೆಯೊಂದಿಗೆ ಕನ್ನಡ ಶಾಲೆಯೂ ಆರಂಭಿಸಿ ಎಂದು ಅಧಿವೇಶನದಲ್ಲಿ ಆಗ್ರಹಿಸಿದ್ದೇನೆ. ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೂ ಸಹಮತಿ ವ್ಯಕ್ತಪಡಿಸಿದ್ದಾರೆ. ನಾನು ಯಾವುದೇ ಭಾಷೆ ಜಾತಿಯ ವಿರೋಧಿ ಅಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕನ್ನಡ ಶಾಲೆಗೆ ಮಂಜೂರಾತಿ ನೀಡಬೇಕು ಎಂದಿದ್ದೇನೆ. ಆದರೆ ಕೆಲವರು ಶಾಸಕರು ಮರಾಠಿ ಶಾಲೆ ಮುಚ್ಚುವಂತೆ ಒತ್ತಾಯಿಸಿದ್ದಾರೆ ಎಂಬ ಸುದ್ದಿ ಹರಡಿಸಿ ಬೇಕೆಂತಲೇ ನನ್ನ ತೇಜೋವಧೆಗೆ ಯತ್ನಿಸಿದ್ದಾರೆ. ಹತ್ತಾರು ವರ್ಷಗಳಿಂದ ಮರಾಠಾ ಸಮುದಾಯದ ಮುಖಂಡತ್ವವನ್ನು ವಹಿಸಿಕೊಂಡ ನಾಲ್ಕೈದು ಜನರು ತಮ್ಮ ಸಮಾಜದವರು ಕನ್ನಡ ಕಲಿತರೇ ನೌಕರಿ ಹಿಡಿಯುತ್ತಾರೆ. ಆಗ ನಮ್ಮ ಹಿಂದೆ ತಿರುಗುವವರಾರು. ಮಾತು ಕೇಳುವವರಾರು ಎಂಬ ಚಿಂತೆ ಅವರಿಗೆ ಕಾಡುತ್ತಿರುವಂತಿಗೆ. ಆದ್ದರಿಂದಲೇ ಅವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.