ಬಸವಕಲ್ಯಾಣ: ‘ಸಮಾಜದ ಹಿತಕ್ಕಾಗಿ ಎಲ್ಲ ಮಠಾಧೀಶರು ಒಂದೇ ವೇದಿಕೆಯಲ್ಲಿ ಕುಳಿತು ಧರ್ಮ ಮಾನ್ಯತೆ ಸಂಬಂಧ ಒಗ್ಗಟ್ಟಿನ ನಿರ್ಣಯ ತೆಗೆದುಕೊಳ್ಳವುದು ಅತ್ಯಂತ ಅವಶ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಬಸವ ಮಹಾಮನೆಯಲ್ಲಿ ಶನಿವಾರ ನಡೆದ 24ನೇ ಕಲ್ಯಾಣ ಪರ್ವದಲ್ಲಿ ಮಾತನಾಡಿದ ಅವರು, ‘ಪ್ರತ್ಯೇಕ ಧರ್ಮ ಮಾನ್ಯತೆಗೆ ಹಲವು ಬಾರಿ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿದ್ದರೂ ವಾಪಸ್ಸಾಗಿದೆ. ಅದು ಯಶಸ್ವಿ ಆಗಬೇಕಾದರೆ ಎಲ್ಲರೂ ಒಂದಾಗುವುದು ಅತ್ಯಂತ ಅವಶ್ಯ. ನಾನು ಈವರೆಗೆ ಸಮಾಜದ ಹಿತದೃಷ್ಟಿಯಿಂದಲೇ ನಿರ್ಣಯ ತೆಗೆದುಕೊಂಡಿದ್ದೇನೆ. ಜಗತ್ತಿನ ಸಂಘರ್ಷಕ್ಕೆ ಬಸವತತ್ವ ದಿವ್ಯ ಔಷಧವಾಗಿದೆ. ಯುವಜನರು ದಾರಿ ತಪ್ಪುತ್ತಿದ್ದು, ಸರಿದಾರಿಗೆ ತರಲು ಎಲ್ಲರೂ ಪ್ರಯತ್ನಿಸಬೇಕಿದೆ’ ಎಂದು ಹೇಳಿದರು.
‘ಅನುಭವ ಮಂಟಪ ಕಾಮಗಾರಿಗೆ ಸಿದ್ದರಾಮಯ್ಯ ಸರ್ಕಾರದಿಂದ ₹ 200 ಕೋಟಿ ಮಂಜೂರು ಮಾಡಿಸಿ, ಈಚೆಗೆ ₹ 50 ಕೋಟಿ ಬಿಡುಗಡೆಗೊಳಿಸಿದ್ದೇನೆ. ಮುಂದಿನ ವರ್ಷ ಮಂಟಪ ಲೋಕಾರ್ಪಣೆಗೊಳ್ಳಲಿದೆ’ ಎಂದು ಹೇಳಿದರು.
ಶಾಸಕ ಶರಣು ಸಲಗರ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಮಾತೆ ಗಂಗಾದೇವಿ, ಸಿದ್ರಾಮೇಶ್ವರ ಸ್ವಾಮೀಜಿ, ಶಿವಯೋಗೇಶ್ವರ ಸ್ವಾಮೀಜಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಬಸವರಾಜ ಬುಳ್ಳಾ, ಅಧ್ಯಕ್ಷ ಕಂಟೆಪ್ಪ ಗಂದಿಗುಡಿ, ಪ್ರಧಾನ ಕಾರ್ಯದರ್ಶಿ ಶಿವರಾಜ ನರಶೆಟ್ಟಿ, ಸೋಮನಾಥ ಪಾಟೀಲ ಗಾದಗಿ, ರಾಷ್ಟ್ರೀಯ ಬಸವದಳದ ತಾಲ್ಲೂಕು ಅಧ್ಯಕ್ಷ ರವೀಂದ್ರ ಕೊಳಕೂರ, ಲತಾ ಹಾರಕೂಡೆ, ಶಶಿಕಾಂತ ದುರ್ಗೆ, ಸುಧೀರ ಕಾಡಾದಿ, ಶರಣು ಆಲಗೂಡ ಮತ್ತಿತರರು ಉಪಸ್ಥಿತರಿದ್ದರು.
‘ಧರ್ಮದ ಹೆಸರಲ್ಲಿ ಈಚೆಗೆ ಎಲ್ಲೆಡೆ ಗೊಂದಲ ಸೃಷ್ಟಿಯಾಗಿದೆ. ಎಲ್ಲರೂ ಬಸವಧರ್ಮದ ಪಾಲನೆ ಮಾಡಿದರೆ ಶಾಂತಿ ನೆಲೆಸಬಲ್ಲದು’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ನಗರದ ಬಸವ ಮಹಾಮನೆಯಲ್ಲಿ ಶನಿವಾರ ನಡೆದ ಕಲ್ಯಾಣ ಪರ್ವದ ಧರ್ಮಚಿಂತನಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ವೇಳೆ ಬಸವ ಧರ್ಮ ಘೋಷಣೆಯಾದರೆ, ಒಂದು ಕ್ಷಣವೂ ಹಿಂದೆ ಮುಂದೆ ಯೋಚಿಸದೆ ಧರ್ಮ ಕಾಲಂನಲ್ಲಿ ನಾನು ಬಸವಧರ್ಮ ಬರೆಸುತ್ತೇನೆ. ಧರ್ಮ ಎಲ್ಲರಿಗೂ ಒಳಿತು ಮಾಡಬೇಕು. ಮೂಢನಂಬಿಕೆ, ಕಂದಾಚಾರ ಇಲ್ಲದಂತಾಗಬೇಕು. ಜಾತಿ ಆಧಾರಿತ ಶೋಷಣೆ ಈಗಲೂ ಇದ್ದು ಅದು ಹೋಗಬೇಕು’ ಎಂದರು.
ಭಾಲ್ಕಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಭಾಲ್ಕಿಯ ಲಿಂ.ಚನ್ನಬಸವ ಪಟ್ಟದ್ದೇವರು ಸರ್ವಪ್ರಥಮ ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಂಡು ಈ ಬಗ್ಗೆ ಪ್ರಚಾರ ಮಾಡಿದರು. ಲಿಂಗಾನಂದ ಸ್ವಾಮೀಜಿ ಮತ್ತು ಮಾತೆ ಮಹಾದೇವಿಯವರು ಪ್ರಥಮವಾಗಿ ಲಿಂಗಾಯತ ಧರ್ಮ ಮಾನ್ಯತೆಗೆ ಹೋರಾಟ ಆರಂಭಿಸಿದರು’ ಎಂದು ಹೇಳಿದರು.
ಸಾಹಿತಿ ಸಿದ್ದು ಯಾಪಲಪರ್ವಿ, ಮಾತೆ ಗಂಗಾದೇವಿ ಮಾತನಾಡಿದರು. ಇದೇ ವೇಳೆ ಮಲ್ಲಿಕಾರ್ಜುನ ಗುಂಗೆ ಹಾಗೂ ಪುಂಡಲೀಕರಾವ ಪಾಟೀಲ ಅವರಿಗೆ ‘ಶರಣ ಸಮಾಜ ಸೇವಾರತ್ನ’, ಚಂದ್ರಶೇಖರ ಸೋಮಶೆಟ್ಟಿಗೆ ‘ಶರಣ ಕಲಾರತ್ನ’, ಸುಶೀಲಾಬಾಯಿ ಧನ್ನೂರ ಅವರಿಗೆ ‘ಶರಣ ದಾಸೋಹರತ್ನ’, ಯಶವಂತರಾವ ಪಾಟೀಲಗೆ ‘ಶರಣ ಕಾಯಕರತ್ನ’ ಪ್ರಶಸ್ತಿ ಮತ್ತು ಗುರುಲಿಂಗಪ್ಪ ಮೇಲ್ದೊಡ್ಡಿ, ಹಾವಗಿರಾವ್ ವಟಗೆ ಅವರಿ ಶರಣ ಕೃಷಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೋಟರಿ ಕ್ಲಬ್ ಬೀದರ್ ಸಹಯೋಗದಲ್ಲಿ ಉಚಿತ ಹೃದಯರೋಗ ತಪಾಸಣೆ ಮತ್ತು ಎಸ್.ಬಿ. ಡೆಂಟಲ್ ಕಾಲೇಜು ಬೀದರ್ ಸಹಯೋಗದಲ್ಲಿ ಉಚಿತ ದಂತರೋಗ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಶೂನ್ಯ ಪೀಠಾರೋಹಣದ 23 ನೇ ವಾರ್ಷಿಕೋತ್ಸವ ಅಂಗವಾಗಿ ಸಿದ್ದರಾಮೇಶ್ವರ ಸ್ವಾಮೀಜಿ ಅವರನ್ನು ಪೀಠದಲ್ಲಿ ಕೂಡಿಸಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.