ಬಸವಕಲ್ಯಾಣ: ನಗರದ ಮುಖ್ಯ ರಸ್ತೆಯಲ್ಲಿ ಕೆಲ ತಿಂಗಳಿಂದ ಅನೇಕ ಕಡೆ ತಗ್ಗುಗುಂಡಿಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ತಿಂಗಳಲ್ಲಿ ಎರಡು ಸಲ ಕೆಲ ತಗ್ಗುಗಳನ್ನು ಮುಚ್ಚಿದರೂ ಕಳಪೆ ಕೆಲಸದ ಕಾರಣ ಮತ್ತೆ ಅವುಗಳ ಪರಿಸ್ಥಿತಿ ಮೊದಲಿನಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಸುವ ಸ್ಥಳದಲ್ಲಿನ ಮಹಾದ್ವಾರದ ಸುತ್ತಲಿನಲ್ಲಿ ರಸ್ತೆ ಹೆಚ್ಚು ಹದಗೆಟ್ಟಿದೆ. ಕಾರ್ ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಕಷ್ಟಪಡಬೇಕಾಗುತ್ತಿದೆ. ರಾತ್ರಿಯ ಕತ್ತಲಲ್ಲಿ ದ್ವಿಚಕ್ರ ವಾಹನಗಳು ಮುಗುಚಿ ಬೀಳುತ್ತಿವೆ. ರಸ್ತೆ ದಾಟುವವರು ಸಹ ಕಾಲು ಜಾರಿ ಬಿದ್ದು ಗಾಯಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ.
ತಹಶೀಲ್ದಾರ್ ಕಚೇರಿ ಹತ್ತಿರದಲ್ಲಿ, ತ್ರಿಪುರಾಂತ ಸೇತುವೆ ಮತ್ತು ಹನುಮಾನ ದೇವಸ್ಥಾನ ಮತ್ತು ಮಡಿವಾಳ ವೃತ್ತದ ಮಧ್ಯದಲ್ಲಿ ರಸ್ತೆ ತೀರ ಹಾಳಾಗಿದೆ. ಹರಳಯ್ಯ ವೃತ್ತ, ಶಿಕ್ಷಕರ ಸಂಘದ ಗುರು ಭವನ, ನಾರಾಯಣಪುರ ಕ್ರಾಸ್, ಧರ್ಮಪ್ರಕಾಶ ಓಣಿ, ಮುಚಳಂಬ ರಸ್ತೆಯಿಂದ ಮುಂಡೆಪಾಳಿವರೆಗಿನ ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗುಗಳಿವೆ. ಮಳೆ ಮತ್ತು ಚರಂಡಿ ನೀರು ಇದರಲ್ಲಿ ಸಂಗ್ರಹಗೊಂಡು ಮತ್ತಷ್ಟು ಸಂಕಟ ಎದುರಾಗುತ್ತಿದೆ.
ಇದು ಲಾರಿಗಳ ನಾಡು ಆಗಿರುವುದರಿಂದ ಎಲ್ಲೆಡೆ ವಾಹನ ದಟ್ಟಣೆ ಅಧಿಕವಿರುತ್ತದೆ. ಹೀಗಾಗಿ ಸಮೀಪ ಹೋಗುವವರೆಗೆ ತಗ್ಗುಗಳು ಕಾಣುವುದೇ ಇಲ್ಲ. ಗುಂಡಿ ನೋಡಿ ಒಮ್ಮೆಲೆ ವಾಹನ ನಿಲ್ಲಿಸಿದರೆ ಹಿಂದೆ ವೇಗವಾಗಿ ಬರುವ ವಾಹನಗಳಿಗೆ ಹಾನಿ ಆಗುತ್ತಿದೆ. ಅನೇಕ ಕಡೆ ಪಾದಚಾರಿ ಮಾರ್ಗವೂ ಇಲ್ಲ. ಆದ್ದರಿಂದ ನಡೆದುಕೊಂಡು ಹೋಗುವವರು ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ.
ವಿವಿಧ ಸಂಘ ಸಂಸ್ಥೆಯವರು ಅನೇಕ ಸಲ ಮನವಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಸ್ಥಳಕ್ಕೆ ಹೋಗಿ ತಾವು ಸ್ವತಃ ಮಣ್ಣಿನ ಬುಟ್ಟಿಯನ್ನು ಹೊತ್ತುಕೊಂಡು ಅಟೋನಗರದಲ್ಲಿನ ತಗ್ಗುಗುಂಡಿಯನ್ನು ಮುಚ್ಚಿದ್ದಾರೆ. ಈಚೆಗೆ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಯಿತು. ಆದರೂ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಮಳೆಯ ಕಾರಣ ಕೆಲಸ ನಡೆದಿಲ್ಲ ಎಂದು ಮೊದಲು ಹೇಳಲಾಯಿತು. ಆದರೆ, ಕೆಲ ದಿನಗಳಿಂದ ಮಳೆ ಬಂದಿಲ್ಲವಾದರೂ ಯಾರೂ ಈ ಕಡೆ ಲಕ್ಷ ವಹಿಸಿಲ್ಲ.
ಪೌರಾಯುಕ್ತರಿಗೆ ಕೇಳಿಕೊಂಡರೂ ಕ್ರಮವಿಲ್ಲ ಧೂಳಿನಿಂದ ಅಂಗಡಿಯವರಿಗೆ ತೊಂದರೆ ಕೆಲವೆಡೆ ಪಾದಚಾರಿ ಮಾರ್ಗವಿಲ್ಲ
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಸ್ಥಳಕ್ಕೆ ಹೋಗಿ ಸಾಮಾಜಿಕ ಜಾಲತಾಣದ ಮೂಲಕ ತಗ್ಗುಗುಂಡಿಗಳು ಎಲ್ಲೆಲ್ಲಿವೆ ಎಂಬುದನ್ನು ತೋರಿಸಿದರೂ ಕ್ರಮವಿಲ್ಲ.ಆಕಾಶ ಖಂಡಾಳೆ ಕಾರ್ಯಾಧ್ಯಕ್ಷ ತಾಲ್ಲೂಕು ಜೆಡಿಎಸ್ ಪಕ್ಷ
ಈ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಿರುವ ಕಾರಣ ತಗ್ಗುಗಳು ದೂರದಿಂದ ಕಾಣದೆ ಒಮ್ಮೇಲೆ ಎದುರಾಗುವುದರಿಂದ ವಾಹನ ಚಾಲಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಶಿವಕುಮಾರ ಕುದರೆ ಯುವ ಮುಖಂಡ
ರಸ್ತೆ ದುರುಸ್ತಿ ನಗರಸಭೆಯದ್ದು ಮುಖ್ಯ ರಸ್ತೆ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದೆ ಎಂಬುದು ಕೆಲವರ ನೆಪವಾಗಿದೆ. ಆದರೆ ಮುಂಡೆಪಾಳಿಯಿಂದ ಸಸ್ತಾಪುರ ಬಂಗ್ಲಾವರೆಗಿನ ರಸ್ತೆ ನಗರಸಭೆ ವ್ಯಾಪ್ತಿಗಿದೆ ಎಂದು ಇಲಾಖೆಯ ಎಇಇ ರಮೇಶ ಪಾಟೀಲ ಸ್ಪಷ್ಟಪಡಿಸಿದ್ದಾರೆ. ಇದು 11 ನೇ ಸಂಖ್ಯೆಯ ರಾಜ್ಯ ಹೆದ್ದಾರಿಯಾಗಿದೆ. ಈಗಾಗಲೇ ಕೆಲ ಸಲ ನಗರಸಭೆಯವರು ತಗ್ಗುಗುಂಡಿ ಮುಚ್ಚುವ ಕಾಮಗಾರಿ ನಡೆಸಿದ್ದಾರೆ. ಉತ್ತಮ ರೀತಿಯಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳಬೆಕು ಎಂದು ಅಲ್ಲಿನ ಅಧಿಕಾರಿಗಳಿಗೆ ಹಲವಾರು ಸಲ ಪತ್ರ ಬರೆಯಲಾಗಿದೆ ಎಂದು ಸಹ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.