ADVERTISEMENT

ಬಸವಕಲ್ಯಾಣ: ಕಾಯಕಲ್ಪಕ್ಕೆ ಕಾದಿರುವ ‘ಬಟಗೇರಾ ಕೆರೆ'

ಮಾಣಿಕ ಆರ್ ಭುರೆ
Published 9 ಡಿಸೆಂಬರ್ 2023, 5:39 IST
Last Updated 9 ಡಿಸೆಂಬರ್ 2023, 5:39 IST
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾದ ಕೆರೆ
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾದ ಕೆರೆ   

ಬಸವಕಲ್ಯಾಣ: ಈ ಭಾಗದ ಹಳೆಯ ಕೆರೆಗಳಲ್ಲಿ ಒಂದಾಗಿರುವ ತಾಲ್ಲೂಕಿನ ಬಟಗೇರಾದ ಊರ ಕೆರೆ ಸಂಬಂಧಿತರ ನಿರ್ಲಕ್ಷದಿಂದ ಹಾಳಾಗುವ ಹಂತಕ್ಕೆ ತಲುಪಿದ್ದು ಕಾಯಕಲ್ಪಕ್ಕೆ ಕಾದಿದೆ.

ಬಟಗೇರಾ ಗಡಿ ಭಾಗದ ದೊಡ್ಡ ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ. 1972 ರಲ್ಲಿ ನಿರ್ಮಿಸಿದ ಇಲ್ಲಿನ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಸಾಕಷ್ಟು ನೀರು ನಿಲ್ಲದಂತಾಗಿದೆ. ಸುತ್ತಲಿನ ಊರುಗಳಲ್ಲಿ ನಂತರದ ಕಾಲದಲ್ಲಿ ಅನೇಕ ಕೆರೆಗಳಾದವು. ಆದರೆ ಇಲ್ಲಿನ ಕೆರೆಯಲ್ಲಿ ಆಗಾಗ ಕೆಲ ಮಟ್ಟಿನ ಹೂಳು ತೆಗೆದಿರುವುದು ಬಿಟ್ಟರೆ ಇದರ ಅಭಿವೃದ್ಧಿಗಾಗಿ ಪ್ರಯತ್ನ ನಡೆದಿರುವುದು ಕಡಿಮೆ.

ಇದೇನು ದೊಡ್ಡ ಕೆರೆಯಲ್ಲ. ಆದರೂ ಇದು ಎತ್ತರದ ಪ್ರದೇಶದಲ್ಲಿರುವ ಕಾರಣ ಇಳಿಜಾರಿನಲ್ಲಿರುವ ಗ್ರಾಮದಲ್ಲಿನ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಿಗೆ ನೀರಿನ ಜೀವಾಳವಾಗಿದೆ. ಇಲ್ಲಿ ನೀರು ತುಂಬಿಕೊಂಡಿದ್ದರೆ ಕುಡಿಯಲು ಮತ್ತು ಮನೆ ಬಳಕೆಗೆ ನೀರಿನ ಕೊರತೆ ಆಗುವುದಿಲ್ಲ. ಅಲ್ಲದೆ ಮಹಾಲಕ್ಷ್ಮಿದೇವಿ ದೇವಸ್ಥಾನದ ಗುಡ್ಡ ಮತ್ತು ಮಹಾಳಿಂಗರಾಯ ಮತ್ತು ಬೀರಲಿಂಗೇಶ್ವರ ದೇವಸ್ಥಾನದ ಎತ್ತರದ ಗುಡ್ಡಗಳ ಮಧ್ಯೆ ಇದು ಇರುವುದರಿಂದ ಗುಡ್ಡ ಏರಿದರೆ ರಮಣೀಯ ದೃಶ್ಯ ಕಾಣುತ್ತದೆ.

ADVERTISEMENT

ಬರಗಾಲದಲ್ಲಿ ಸರ್ಕಾರ ಕಾಮಗಾರಿ ಆರಂಭಿಸಿದಾಗ ಗ್ರಾಮದ ಮುಖಂಡರು ಈ ಕೆರೆ ನಿರ್ಮಿಸುವುದಕ್ಕೆ ಪ್ರಾಮುಖ್ಯತೆ ನೀಡಿದರು. ಮಹಿಳೆ ಮಕ್ಕಳಾದಿಯಾಗಿ ಎಲ್ಲರೂ ಸಾಮೂಹಿಕವಾಗಿ ಇಲ್ಲಿನ ಮಣ್ಣು ಅಗೆದಿದ್ದರಿಂದ ಊರ ಹಿರಿಯರೆಲ್ಲರ ಶ್ರಮವೂ ಇದರಲ್ಲಡಗಿದೆ. ಆಗಿನ ಕಾಲದಲ್ಲಿ ಸುತ್ತಲಿನ ಹತ್ತಾರು ಕಿ.ಮೀ ವ್ಯಾಪ್ತಿಯಲ್ಲಿ ಇದೊಂದೇ ಕೆರೆ ನಿರ್ಮಾಣವಾಗಿತ್ತು. ಕಾಲಾನಂತರದಲ್ಲಿ ಒಳಗೆ ಕಲ್ಲು ಮಣ್ಣು ತುಂಬಿಕೊಂಡಿದ್ದರಿಂದ ಅಧಿಕ ಮಳೆಯಾದಾಗ ಕೆಲಸಲ ಕೆರೆ ಒಡೆದು ಹಾನಿಯೂ ಆಗಿದೆ.

‘ಕೆರೆ ಅಭಿವೃದ್ಧಿ ಕುರಿತು ಸಂಬಂಧಿತರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು' ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಶರಣಪ್ಪ ಗೌಡೆ ತಿಳಿಸಿದ್ದಾರೆ. ‘ಕೆರೆಯ ಆಳ ಹೆಚ್ಚಿಸಬೇಕು. ಸುತ್ತಲಿನಲ್ಲಿರುವ ಉದ್ದನೆಯ ಗುಡ್ಡಗಳಿಂದ ಹರಿದುಹೋಗುವ ಮಳೆ ನೀರು ಪೂರ್ಣ ಪ್ರಮಾಣದಲ್ಲಿ ಇದರೊಳಗೆ ಬರುವಂತೆ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ ಕಪನೂರೆ ಹೇಳಿದ್ದಾರೆ.

ಕೆರೆಯನ್ನು ಪರಿಶೀಲಿಸಿ ಏನೇನು ಸಮಸ್ಯೆ ಇದೆ ಎಂಬುದರ ಪಟ್ಟಿ ಸಿದ್ಧಪಡಿಸಲಾಗುವುದು. ಈ ಬಗ್ಗೆ ಸಂಬಂಧಿತ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯಲಾಗುವುದು' ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ ಹೇಳಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಬಟಗೇರಾದ ಕೆರೆ ಪಕ್ಕದಲ್ಲಿರುವ ಪ್ರಸಿದ್ಧ ಮಹಾಲಕ್ಷ್ಮಿದೇವಿ ದೇವಸ್ಥಾನ
ಕೆರೆ ಅಭಿವೃದ್ಧಿಯಾದರೆ ಮಹಾಲಕ್ಷ್ಮಿದೇವಿ ಮತ್ತು ಮಹಾಳಿಂಗರಾಯ ದೇವಸ್ಥಾನಗಳಿಗೆ ಇನ್ನಷ್ಟು ಸೌಂದರ್ಯ ಪ್ರಾಪ್ತವಾಗಲಿದ್ದು ಅಂತರ್ಜಲ ಮಟ್ಟವೂ ಹೆಚ್ಚುವುದು
-ಶಿವಶರಣಪ್ಪ ಗೌಡೆ ಅಧ್ಯಕ್ಷ ಗ್ರಾ.ಪಂ.
ಕೆಲ ವರ್ಷಗಳ ಹಿಂದೆ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಕೆರೆಯಲ್ಲಿನ ಹೂಳು ತೆಗೆಯಲಾಗಿತ್ತು. ಇದಕ್ಕಾಗಿ ಪ್ರತ್ಯೇಕ ಅನುದಾನದ ಅಗತ್ಯವಿದೆ
-ಲಕ್ಷ್ಮಣ ಕಪನೂರೆ ಗ್ರಾ.ಪಂ. ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.