ಬಸವಕಲ್ಯಾಣ: ಜಿಲ್ಲೆಯಲ್ಲಿನ ಎರಡನೇ ದೊಡ್ಡ ನಗರ, ಉಪವಿಭಾಗದ ಕೇಂದ್ರವೂ ಆಗಿರುವ ಬಸವಕಲ್ಯಾಣದ ಬಸವಗಂಜ್ ಮಾರುಕಟ್ಟೆಯು ಉತ್ಪನ್ನಗಳ ಆವಕ ಮತ್ತು ಮೂಲ ಸೌಕರ್ಯದ ವಿಷಯದಲ್ಲಿ ಹಿಂದುಳಿದಿದೆ.
‘ಲಾರಿಗಳ ನಗರ’ ಎಂಬ ಖ್ಯಾತಿ ನಗರಕ್ಕಿದ್ದರೂ ಅಂಥ ವಾಹನಗಳಲ್ಲಿ ಕೃಷಿ ಉತ್ಪನ್ನಗಳನ್ನು ಇಲ್ಲಿನ ಎಪಿಎಂಸಿಗೆ ಬರುವುದು ತೀರಾ ಅಪರೂಪ. ಮನೆ ಖರ್ಚಿಗೆ ಹಣ ಹೊಂದಿಸುವುದಕ್ಕಾಗಿ ಆಟೊ, ಟಂಟಂಗಳಲ್ಲಿ ಚೀಲ (ಚುಂಗಡಿ)ಗಳನ್ನು ತಂದು ಮಾರಾಟ ಮಾಡುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ.
ಮಾರುಕಟ್ಟೆ ಪ್ರಾಂಗಣ ನಗರದ ಮಧ್ಯ ಭಾಗದಲ್ಲಿದ್ದು, ಸುತ್ತಲೂ ಮುಖ್ಯ ರಸ್ತೆಗಳು ಹಾದು ಹೋಗಿವೆ. ಈ ರಸ್ತೆಗಳ ಅಕ್ಕಪಕ್ಕದಲ್ಲಿ ಇತರೆ ವ್ಯಾಪಾರ ಭರಾಟೆಯಿಂದ ನಡೆಯುತ್ತದೆ. ಮಾರುಕಟ್ಟೆಯಲ್ಲಿ ರೈತರು ಮಧ್ಯಾಹ್ನ ಉತ್ಪನ್ನ ಮಾರಾಟ ಮಾಡುವುದು, ಇಲ್ಲಿ ದೊರೆತ ನಗದು ಹಣದಿಂದ ಸುತ್ತಲಿನ ಅಂಗಡಿಗಳಿಂದ ಬಟ್ಟೆ, ಸಾಮಗ್ರಿ ಖರೀದಿಸಿ ಸಂಜೆ ಮನೆಗೆ ಹೋಗುವುದು ವಾಡಿಕೆಯಂತಾಗಿದೆ. ಗ್ರಾಮೀಣ ಭಾಗದ ಅಲ್ಪ ಭೂಹಿಡುವಳಿದಾರರಿಗೆ ಪಾಲಿಗೆ ಈ ಮಾರುಕಟ್ಟೆ ಅನುಕೂಲಕರ ಎನ್ನಬಹುದು.
ತಾಲ್ಲೂಕಿನ ದೊಡ್ಡ ರೈತರು ಕಲಬುರಗಿ ಮತ್ತು ಮಹಾರಾಷ್ಟ್ರದ ಲಾತೂರ್, ಕಾಸಾರಶಿರಸಿ, ಔರಾದ್ (ಷಹಾಜಹಾನಿ) ಮಾರುಕಟ್ಟೆಗಳನ್ನು ಅವಲಂಬಿಸಿದ್ದಾರೆ. ಲಾರಿಗಟ್ಟಲೇ ಉತ್ಪನ್ನ ಅಲ್ಲಿಗೇ ಸಾಗಿಸಲಾಗುತ್ತದೆ. ಹೆಚ್ಚಿನ ಬೆಲೆ ಸಿಗುವುದು ಮತ್ತು ಒಂದೇ ಸಲಕ್ಕೆ ಎಲ್ಲ ಹಣ ದೊರಕುವುದು ಇದಕ್ಕಿರುವ ಪ್ರಮುಖ ಕಾರಣ. ಹಾಗೆ ನೋಡಿದರೆ, ಇಲ್ಲಿನ ಕೆಲ ವರ್ತಕರು ಸಹ ಆಗಾಗ ಬೇರೆಡೆಯ ಬೆಲೆ ಕೊಡುತ್ತಿದ್ದರೂ, ಧಾನ್ಯಗಳ ಆವಕದಲ್ಲಿ ಅಷ್ಟೇನೂ ಹೆಚ್ಚಳ ಕಂಡು ಬಂದಿಲ್ಲ.
ಮಾರುಕಟ್ಟೆ ಆವರಣದಲ್ಲಿ ಕೃಷಿ ಉತ್ಪನ್ನಗಳ ಖರೀದಿಯ 40 ಅಂಗಡಿಗಳಿವೆ. ಧಾನ್ಯ ಸಂಗ್ರಹದ ಗೋದಾಮುಗಳು, ಬೀಜ, ಗೊಬ್ಬರ, ಕೀಟನಾಶಕ ಮತ್ತಿತರ ರೈತರಿಗೆ ಅಗತ್ಯವಿರುವ ಸಾಮಗ್ರಿಗಳ ಮಾರಾಟದ ಅಂಗಡಿಗಳು ಕೂಡ ಇವೆ.ಎಪಿಎಂಸಿ ನಡುವಣ ರಸ್ತೆಗಳು ವಿಶಾಲವಾಗಿದ್ದು, ವಾಹನ ದಟ್ಟಣೆ ಆಗುವುದಿಲ್ಲ. ಆದರೆ, ಚರಂಡಿಗಳು ಶುಚಿತ್ವ ಕೊರತೆ ಎದುರಿಸುತ್ತಿವೆ. ಗಟಾರಗಳು ಯಾವಾಗಲೂ ಕಸ,ಕಡ್ಡಿ, ಕೊಳೆಚೆಯಿಂದ ತುಂಬಿ ದುರ್ನಾತ ಹೊಮ್ಮುತ್ತಿರುತ್ತದೆ. ಶೌಚಾಲಯ, ಮೂತ್ರಾಲಯಗಳ ಕೊರತೆ ಕಾಡುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ.
‘ಈ ಮಾರುಕಟ್ಟೆಯಲ್ಲೂ ರೈತರ ಕೃಷಿ ಉತ್ಪನ್ನಗಳಿಗೆ ಬೇರೆ ಮಾರುಕಟ್ಟೆಗಳಲ್ಲಿನಂತೆ ಉತ್ತಮ ಬೆಲೆ ಸಿಗುವಂತಾಗಬೇಕು. ದವಸ ಧಾನ್ಯಗಳ ಸ್ವಚ್ಛತೆ ಹೆಸರಲ್ಲಿ ಹಣ ಪಡೆಯಬಾರದು. ಎಪಿಎಂಸಿ ಶುಲ್ಕದಲ್ಲೂ ರಿಯಾಯಿತಿ ನೀಡಬೇಕು. ಪ್ರಾಂಗಣದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಹೀಗಾದರೆ ರೈತರು ಎಲ್ಲ ಉತ್ಪನ್ನಗಳನ್ನು ಇಲ್ಲಿಗೆ ತಂದು ಮಾರಾಟ ಮಾಡಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ರೈತ ಶಿವಪ್ಪ ಪಾಟೀಲ.
ದವಸ ಧಾನ್ಯಗಳಿಗೆ ದೊಡ್ಡ ಮಾರುಕಟ್ಟೆಗಳಲ್ಲಿನ ಬೆಲೆಯೇ ಇಲ್ಲಿ ಸಿಗುವಂತಾಗಬೇಕು. ಗ್ರಾಮೀಣ ರೈತರ ವಾಸ್ತವ್ಯಕ್ಕಾಗಿ ರೈತ ಭವನದ ದುರಸ್ತಿ ಕೈಗೊಳ್ಳಬೇಕುಸುಭಾಷ ರಗಟೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ
ಮಾರುಕಟ್ಟೆ ಆವರಣದಲ್ಲಿ ನಿಯಮಿತವಾಗಿ ಸ್ವಚ್ಛತೆ ಕೈಗೊಳ್ಳದೆ ತೊಂದರೆ ಅನುಭವಿಸಬೇಕಾಗಿದೆ. ಸಾಮೂಹಿಕ ಮೂತ್ರಾಲಯ ಶೌಚಾಲಯದ ವ್ಯವಸ್ಥೆ ಆಗಬೇಕುವೀರೇಶ ಬೋರಗೆ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.