ADVERTISEMENT

ಬಸವಕಲ್ಯಾಣ | ರಸ್ತೆ ಹಾಳು: ದೂಳೋ ದೂಳು

ಮಾಣಿಕ ಆರ್ ಭುರೆ
Published 6 ನವೆಂಬರ್ 2023, 5:32 IST
Last Updated 6 ನವೆಂಬರ್ 2023, 5:32 IST
ಬಸವಕಲ್ಯಾಣದ ಗುಜರಾತಿ ಕಟ್ಟಿಗೆ ಮಷೀನು ಎದುರಿನ ಶಿವಪುರ ರಸ್ತೆಯಲ್ಲಿನ ಡಾಂಬರು ಕಾಣದ ರಸ್ತೆ
ಬಸವಕಲ್ಯಾಣದ ಗುಜರಾತಿ ಕಟ್ಟಿಗೆ ಮಷೀನು ಎದುರಿನ ಶಿವಪುರ ರಸ್ತೆಯಲ್ಲಿನ ಡಾಂಬರು ಕಾಣದ ರಸ್ತೆ   

ಬಸವಕಲ್ಯಾಣ: ನಗರದ ಗುಜರಾತಿ ಕಟ್ಟಿಗೆ ಮಷೀನು ಎದುರಿನ ಶಿವಪುರ ರಸ್ತೆ ಹದಗೆಟ್ಟಿರುವ ಕಾರಣ ಯಾವಾಗಲೂ ದೂಳು ಏಳುತ್ತಿದೆ. ಹೀಗಾಗಿ ಈ ರಸ್ತೆಯ ಪಕ್ಕದಲ್ಲಿಯೇ ಇರುವ 35 ಶಾಲೆಗಳ ಮಕ್ಕಳು ಹಾಗೂ ವಾಹನ ಚಾಲಕರು ಸಂಕಟ ಅನುಭವಿಸುತ್ತಿದ್ದಾರೆ.

ನಗರದ ನಾರಾಯಣಪುರ ಕ್ರಾಸ್‌ನಿಂದ ಶಿವಪುರ ನಾಗಣ್ಣ ಕಟ್ಟೆಗೆ ಹಾಗೂ ತ್ರಿಪುರಾಂತಕ್ಕೆ ಇಲ್ಲಿಂದ ದಾರಿಯಿದೆ. ಆದರೆ ಈ ಒಂದು ಸ್ಥಳದಲ್ಲಿ ಡಾಂಬರು ಕಿತ್ತಿರುವ ಹಾಗೂ ಕೆಂಪು ಮಣ್ಣು ಹರಡಿರುವ ರಸ್ತೆ ಇರುವುದರಿಂದ ತೊಂದರೆ ಆಗಿದೆ. ಪಕ್ಕದ ಜಾಗದವರೊಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಇಲ್ಲಿ ಡಾಂಬರೀಕರಣ ನಡೆದಿರಲಿಲ್ಲ. ಆದರೆ, ತಡೆಯಾಜ್ಞೆ ತೆರವುಗೊಂಡು ಅನೇಕ ತಿಂಗಳುಗಳಾಗಿವೆ. ಆದರೂ ಸಂಬಂಧಿತರು ಈ ಕಡೆ ನಿರ್ಲಕ್ಷ ವಹಿಸಿದ್ದಾರೆ.

ರಸ್ತೆ ನಗರಸಭೆ ವ್ಯಾಪ್ತಿಯಲ್ಲಿದ್ದರೂ ಅಲ್ಲಿನವರು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದೆ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ರಸ್ತೆಯಲ್ಲೆಲ್ಲ ಮಣ್ಣು ಹರಡಿದ್ದರಿಂದ ಬಿಸಿಲಿದ್ದಾಗ ದೂಳು ಏಳುತ್ತದೆ. ಹೀಗಾಗಿ ಪಕ್ಕದ ಅಂಗಡಿಯವರ ಸಾಮಾನುಗಳಿಗೆ ಹಾನಿ ಆಗುತ್ತಿದೆ. ಇವರೆಲ್ಲ ಶೆಟರ್ ಮತ್ತು ಬಾಗಿಲು ಮುಚ್ಚಿಕೊಂಡು ವ್ಯಾಪಾರ ನಡೆಸಬೇಕಾಗುತ್ತಿದೆ. ಇಲ್ಲಿಂದ ಹೋಗುವವರ ಮೈಕೈ ಮತ್ತು ಬಟ್ಟೆಗಳ ಮೇಲೆ ದೂಳು ಬೀಳುತ್ತಿದೆ.

ADVERTISEMENT

ಮಳೆ ಬಂದಾಗ ನೀರು ಸಂಗ್ರಹಗೊಂಡು ಕೆಸರು ಆಗುತ್ತಿದೆ. ಅಲ್ಲಲ್ಲಿ ತಗ್ಗುಗಳು ಸಹ ಇರುವುದರಿಂದ ಕೆಂಪು ನೀರಿನಲ್ಲಿ ಅವು ಕಾಣದೆ ದ್ವಿಚಕ್ರ ವಾಹನಗಳು ಸ್ಲೀಪ್ ಆಗುತ್ತಿವೆ. ಈ ಕಾರಣ ಅನೇಕರಿಗೆ ಗಾಯಗಳು ಸಹ ಆಗಿವೆ. `ನ್ಯಾಯಾಲಯದ ತಡೆಯಾಜ್ಞೆ ತೆರವಾಗಿ ಅನೇಕ ತಿಂಗಳುಗಳಾಗಿವೆ. ಆದರೂ ಅನುದಾನದ ಕೊರತೆಯ ಕಾರಣ ಕೆಲಸ ನಡೆದಿಲ್ಲ ಎಂದು ಸಂಬಂಧಿತರು ತಿಳಿಸಿದ್ದಾರೆ' ಎಂದು ರಸ್ತೆ ಪಕ್ಕದ ಅಂಗಡಿಯ ಬಸವರಾಜ ಸ್ವಾಮಿ ಹೇಳಿದ್ದಾರೆ.

‘ತಡೆಯಾಜ್ಞೆಯ ಕಾರಣ ಕಚ್ಚಾ ಉಳಿದಿದ್ದ ರಸ್ತೆಯಲ್ಲಿ ಒಂದು ಸಲ ಸುಧಾರಣೆ ಕೈಗೊಳ್ಳಲಾಗಿದೆ. ಆದರೂ, ರಸ್ತೆ ಮತ್ತೆ ಹದಗೆಟ್ಟಿದ್ದರಿಂದ ಶೀಘ್ರದಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳಲಾಗುವುದು' ಎಂದು ನಗರಸಭೆ ಎಇಇ ಶಿವಶರಣಪ್ಪ ಸಜ್ಜನಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಬಸವಕಲ್ಯಾಣದ ಗುಜರಾತಿ ಕಟ್ಟಿಗೆ ಮಷೀನು ಎದುರಿನ ಶಿವಪುರ ರಸ್ತೆಯಲ್ಲಿನ ಡಾಂಬರು ಕಾಣದ ರಸ್ತೆ

Quote - ರಸ್ತೆ ಕಾಮಗಾರಿ ಕೈಗೊಳ್ಳುವಾಗ ಪಕ್ಕದ ಜಾಗದವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದೀಗ ತೆರವು ಆಗಿದ್ದರಿಂದ ಶೀಘ್ರದಲ್ಲಿ ದುರಸ್ತಿ ನಡೆಸಲಾಗುವುದು -ಶಿವಶರಣಪ್ಪ ಸಜ್ಜನಶೆಟ್ಟಿ ಎಇಇ ನಗರಸಭೆ

Quote - ರಸ್ತೆಯಲ್ಲಿ ಮಣ್ಣು ಇರುವುದರಿಂದ ವಾಹನಗಳ ಸಂಚಾರದಿಂದ ಧೂಳು ಏಳುತ್ತಿದ್ದು ಪಕ್ಕದ ಅಂಗಡಿಗಳ ವ್ಯಾಪಾರಸ್ಥರಿಗೆ ತೊಂದರೆ ಆಗುತ್ತಿದೆ -ಬಸವರಾಜ ಸ್ವಾಮಿ ವ್ಯಾಪಾರಸ್ಥರು

Quote - ಈ ರಸ್ತೆ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಶಿವಪುರ ನಾಗಣ್ಣ ಕಟ್ಟೆಯ ಮುಂದಿರುವ ರಸ್ತೆ ಮಾತ್ರ ನಮ್ಮ ಇಲಾಖೆಯ ಆಧೀನಕ್ಕೆ ಬರುತ್ತದೆ -ಧನರಾಜ ಚವಾಣ್ ಎಇಇ ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.