ಭಾಲ್ಕಿ: ಬಸವಲಿಂಗ ಪಟ್ಟದ್ದೇವರು 1992ರಲ್ಲಿ ನಲವತ್ತು ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರಿಂದ ಆರಂಭಿಸಿದ ಶಿಕ್ಷಣ ಸಂಸ್ಥೆಯಲ್ಲಿ ಇಂದು ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳು, ಎರಡು ಸಾವಿರ ಜನ ಶಿಕ್ಷಕ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಸವಲಿಂಗ ಪಟ್ಟದ್ದೇವರ ದೂರದೃಷ್ಟಿ, ದೃಢಸಂಕಲ್ಪ, ಉದಾತ್ತ ಯೋಚನೆ, ಶೈಕ್ಷಣಿಕ ಕ್ರಾಂತಿಯ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಿಬ್ಬಂದಿಯ ಪಾಲಿಗೆ ಹಿರೇಮಠ ಸಂಸ್ಥಾನ ವಿದ್ಯಾಪೀಠ ವರವಾಗಿ ಪರಿಣಮಿಸಿದೆ. ಸಾವಿರಾರು ಜನ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ದೇಶದ ವಿವಿಧ ಭಾಗಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿಂದು ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಸುಮಾರು 50 ಶಾಲೆ, ಕಾಲೇಜುಗಳು ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೇ ನಡೆಯುತ್ತಿವೆ. ಇನ್ನು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಮತ್ತು ತೆಲಂಗಾಣದ ಮೊರಗಿಯಲ್ಲಿಯೂ ನಡೆಯುತ್ತಿವೆ ಎಂದು ಆಡಳಿತಾಧಿಕಾರಿ ಮೋಹನರೆಡ್ಡಿ ತಿಳಿಸಿದರು.
ಬಸವಲಿಂಗ ಪಟ್ಟದ್ದೇವರು ಹಿರೇಮಠದ ಉತ್ತರಾಧಿಕಾರಿಯಾಗಿ ಬಂದಾಗ ಒಂದು ಸಣ್ಣ ಬಾತ್ ರೂಮ್ ಕಟ್ಟಿಕೊಳ್ಳುವ ಆರ್ಥಿಕ ಚೈತನ್ಯವೂ ಶ್ರೀ ಮಠಕ್ಕೆ ಇರಲಿಲ್ಲ. ಇವರ ಬಳಿ ಇದ್ದದ್ದು ಬರೀ ನೋವು, ಕಣ್ಣೀರು, ಅವಮಾನ, ಆರ್ಥಿಕ ದುಃಸ್ಥಿತಿ ಅಷ್ಟೇ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಬಸವಣ್ಣನ ಕಾರುಣ್ಯ, ಚನ್ನಬಸವ ಪಟ್ಟದೇವರ ನಾಮಬಲ ಮತ್ತು ಸಾಧಿಸಿಯೇ ತೀರುತ್ತೇನೆ ಎಂಬ ಛಲದಿಂದ ಮಠವನ್ನು ಸೊನ್ನೆಯಿಂದ ಮುನ್ನಡೆಸಿಕೊಂಡು ಬಂದು ಬಾನೆತ್ತರಕ್ಕೆ ಬೆಳೆಸಿದ್ದಾರೆ ಎಂದು ಬಸವಲಿಂಗ ಪಟ್ಟದ್ದೇವರನ್ನು ಸಮೀಪದಿಂದ ಕಂಡಿರುವ ರಮೇಶ ಪಟ್ನೆ ಹೇಳಿದರು. ಪಟ್ಟದ್ದೇವರ ಅಸಂಖ್ಯ ಮಾನವೀಯ, ಸಾಮಾಜಿಕ, ವಿಧಾಯಕ ಕಾರ್ಯಗಳು ನೂರಾರು ಅನಾಥ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ಶಿಕ್ಷಣ ನೀಡಿ ಅವರ ಬದುಕನ್ನು ಪ್ರಜ್ವಲ ದೀಪದಂತೆ ಬೆಳಗುತ್ತಿವೆ ಎನ್ನುತ್ತಾರೆ ಸಾಹಿತಿ ರಾಜು ಜುಬರೆ.
ಪಟ್ಟದ್ದೇವರ ಅಗಣಿತ ಸಮಾಜಮುಖಿ, ಶೈಕ್ಷಣಿಕ, ಧಾರ್ಮಿಕ, ಮಾನವೀಯ ಕೆಲಸಗಳನ್ನು ಗುರುತಿಸಿ ರಾಷ್ಟ್ರೀಯ ಬಸವ ಪುರಸ್ಕಾರ ಸೇರಿದಂತೆ ಸರ್ಕಾರ, ಸಂಘ, ಸಂಸ್ಥೆಗಳು ಅನೇಕ ಪ್ರಶಸ್ತಿಗಳನ್ನು ನೀಡಿವೆ. ಈಚೆಗೆ ಹಂಪಿ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿಯನ್ನು ನೀಡಿದೆ.
ಅಮೃತ ಮಹೋತ್ಸವ ಕಾರ್ಯಕ್ರಮ: ಪಟ್ಟಣದ ಚನ್ನಬಸವಾಶ್ರಮದಲ್ಲಿ ಅಮೃತ ಮಹೋತ್ಸವ ಸ್ವಾಗತ ಸಮಿತಿ ವತಿಯಿಂದ ಸೋಮವಾರ ಬೆಳಿಗ್ಗೆ 11 ಗಂಟೆಗೆ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಸುತ್ತೂರು ಶ್ರೀಕ್ಷೇತ್ರ ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಸಮಾರಂಭ ಉದ್ಘಾಟಿಸಲಿದ್ದಾರೆ. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸುವರು. ಸಂಸದ ಸಾಗರ್ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಸೇರಿದಂತೆ ಮುಂತಾದ ಗಣ್ಯರು, ಸಾಹಿತಿಗಳು, ಬುದ್ಧಿಜೀವಿಗಳು, ಚಿಂತಕರು ಭಾಗವಹಿಸಲಿದ್ದಾರೆ.
ಬಸವಲಿಂಗ ಪಟ್ಟದ್ದೇವರು ಅನೇಕ ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ಹಿರೇಮಠ ಸಂಸ್ಥಾನ ಬೆಳೆಸಿರುವ ಪರಿ ಮತ್ತು ಅವರು ಕೈಗೊಂಡಿರುವ ಶೈಕ್ಷಣಿಕ ಕ್ರಾಂತಿ ಬೆರಗು ಮೂಡಿಸುವಂತದ್ದುರಮೇಶ ಪಟ್ನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.