ADVERTISEMENT

ಬಸವಣ್ಣ ತತ್ವದ ಜೀವಂತ ಪ್ರತೀಕ: ಬಸವರಾಜ ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 6:14 IST
Last Updated 29 ನವೆಂಬರ್ 2021, 6:14 IST
ಬಸವಕಲ್ಯಾಣದಲ್ಲಿ ಬೆಂಗಳೂರು ಬಸವ ಕೇಂದ್ರದ ಅಧ್ಯಕ್ಷ ಅರವಿಂದ ಜತ್ತಿ ಅವರಿಗೆ ‘ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ’ ಮತ್ತು ₹1 ಲಕ್ಷ ನಗದು ನೀಡಿ, ದಂಪತಿಯನ್ನು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಸನ್ಮಾನಿಸಿದರು
ಬಸವಕಲ್ಯಾಣದಲ್ಲಿ ಬೆಂಗಳೂರು ಬಸವ ಕೇಂದ್ರದ ಅಧ್ಯಕ್ಷ ಅರವಿಂದ ಜತ್ತಿ ಅವರಿಗೆ ‘ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ’ ಮತ್ತು ₹1 ಲಕ್ಷ ನಗದು ನೀಡಿ, ದಂಪತಿಯನ್ನು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಸನ್ಮಾನಿಸಿದರು   

ಬಸವಕಲ್ಯಾಣ: ’ನೂತನವಾಗಿ ನಿರ್ಮಿಸು ತ್ತಿರುವ ಅನುಭವ ಮಂಟಪವು ಬರೀ ಕಟ್ಟಡವಾಗದೆ, ಶರಣ ಚರಿತ್ರೆ ಮತ್ತು ಬಸವ ತತ್ವ ಬಿತ್ತರಿಸುವ ಜೀವಂತ ಸ್ಮಾರಕ ಆಗಲಿದೆ’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಹಾಗೂ ಕೃಷಿ ಸಂಘ ಮತ್ತು ಅನುಭವ ಮಂಟಪ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂ ಹೇಳಿದರು.

ಭಾನುವಾರ ನಡೆದ 42ನೇ ಅನುಭವ ಮಂಟಪ ಉತ್ಸವ ಹಾಗೂ ಶರಣ ಕಮ್ಮಟದಲ್ಲಿ ಅವರು ಮಾತನಾಡಿದರು. ‘ಕೆಲವೇ ತಿಂಗಳಲ್ಲಿ ಕಟ್ಟಡದ ನಿರ್ಮಾಣ ಕಾಮಗಾರಿ ಶುರುವಾಗಲಿದೆ. 5 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ‘ಎಲ್ಲೆಡೆ ಹೆಚ್ಚಿರುವ ಭ್ರಷ್ಟಾಚಾರವನ್ನು ವಚನಗಳ ಮೂಲಕನಿರ್ಮೂಲನೆ ಮಾಡಲು ಸಾಧ್ಯ. ಅನುಭವ ಮಂಟಪದ ಭೂಸ್ವಾಧೀನ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ’ ಎಂದರು.

ADVERTISEMENT

ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ರಾಜ್ಯ ಸರ್ಕಾರ ಈಚೆಗೆ ನೀಡಿದ ಬಸವ ಪ್ರಶಸ್ತಿಯ ₹ 10 ಲಕ್ಷ ನಗದನ್ನು ಈ ಟ್ರಸ್ಟ್‌ಗೆ ನೀಡುತ್ತೇನೆ’ ಎಂದರು.

ಹಾರಕೂಡ ಚನ್ನವೀರ ಶಿವಾ ಚಾರ್ಯರು ಮಾತನಾಡಿ, ‘ಜ್ಞಾನದ ಬಲದಿಂದ ಬಸವಣ್ಣನವರು ಜಗದ್ಗುರು ವಾಗಿ ರೂಪುಗೊಂಡರು’ ಎಂದರು.

ಶಾಸಕ ಶರಣು ಸಲಗರ ಮಾತನಾಡಿ, ’ಬಸವಾದಿ ಶರಣರು ಕಾರ್ಯಗೈದ ಕಾರಣ ಈ ನೆಲ ಪವಿತ್ರವೆನಿಸಿದೆ. ಇಲ್ಲಿ ಜನ್ಮಪಡೆದ ನಾವೆಲ್ಲ ಧನ್ಯರು' ಎಂದರು.

ದಾಸೋಹ ಇಲ್ಲದೆ ಕಲ್ಯಾಣ ಇಲ್ಲ: ‘ದಾಸೋಹ ಇಲ್ಲದೆ ಕಲ್ಯಾಣದ ಕಲ್ಪನೆಯೇ ಸಾಧ್ಯವಿಲ್ಲ. ಶರಣರು ಧನಮನ ಸಂಪನ್ನರಾಗಿ ದಾಸೋಹ ಗೈಯುತ್ತಿದ್ದರು. ಅರ್ಚನ ಹಾಗೂ ಅರ್ಪಣಕ್ಕೆ ಮಹತ್ವ ನೀಡಿದ್ದರು. ಬಾಹ್ಯ ಸಂಪತ್ತಿಗಿಂತ ಎದೆಯೊಳಗಿನ ಶ್ರೀಮಂತಿಕೆ ಅವರಿಗೆ ಮುಖ್ಯವಾಗಿತ್ತು. ಬಡತನ-ಸಿರಿತನ, ಜಾತಿ–ಮತ ಎಂಬ ಭೇದ ಇರಲಿಲ್ಲ. ಶರಣತತ್ವದ ಪಾಲನೆಯಾದರೆ ಬದುಕೇ ಉತ್ಸವ ಆಗುತ್ತದೆ' ಎಂದು ಸಿದ್ದೇಶ್ವರ ಸ್ವಾಮೀಜಿ
ನುಡಿದರು.

ಕೃಷಿ ಪ್ರಶಸ್ತಿ ಪ್ರದಾನ: ಬಸವಣ್ಣಪ್ಪ ನೂಲಾ ಗಡವಂತಿ ಅವರಿಗೆ ‘ಶರಣ ಒಕ್ಕಲಿಗ ಮುದ್ದಣ್ಣ ಸಾವಯವ ಕೃಷಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಹುಲಸೂರ ಶಿವಾನಂದ ಸ್ವಾಮೀಜಿ, ಶಾಸಕ ಶರಣು ಸಲಗರ, ಉದ್ಯಮಿ ಬಸವರಾಜ ಧನ್ನೂರ, ಸಾಹಿತಿ ಮಹಾಂತೇಶ ಕುಂಬಾರ, ಸೂರ್ಯ ಕಾಂತ ಪಾಟೀಲ, ಶಿವಕುಮಾರ ಬಿರಾ ದಾರ, ನವಲಿಂಗಕುಮಾರ ಪಾಟೀಲ ಮಾತನಾಡಿದರು. ವೈಜನಾಥ ಕಾಮ ಶೆಟ್ಟಿ, ಡಾ.ಎಸ್. ಬಿ.ದುರ್ಗೆ, ಮಾಲಾ ಬಿ.ನಾರಾಯಣ ರಾವ್, ಸಿದ್ದಣ್ಣ ಲಂಗೋಟಿ, ಅನಿಲಕುಮಾರ ರಗಟೆ, ಶಿವರಾಜ ನರಶೆಟ್ಟಿ, ಆನಂದ ದೇವಪ್ಪ, ಅರ್ಜುನ ಕನಕ, ಶಶಿಕಾಂತ ದುರ್ಗೆ, ರವೀಂದ್ರ ಕೊಳಕೂರ, ಗುರುನಾಥ ಕೊಳ್ಳೂರ್, ರಾಜೀವ ಜುಬರೆ ಇದ್ದರು.

ಪುಸ್ತಕಗಳ ಬಿಡುಗಡೆ: ‘ಶರಣ ಉರಿಲಿಂಗ ಪೆದ್ದಿ‘, ‘ಅಮುಗಿ ರಾಮಯ್ಯ’, ‘ಶರಣ ಮಾರ್ಗ’, ‘ಲಿಂಗಾಯತ ಮಾರ್ಗ’, ‘ವಚನ ಪ್ರಕಾಶ’, ‘ಬಸವಣ್ಣನವರ ಶರಣಗಣ ಸಂಘಟನೆ’, ‘ಶರಣ ಜೀವನ ದರ್ಶನ’, ‘ಡಾ.ಶಿವಲಿಂಗ ಶಿವಾಚಾರ್ಯ ಮಹಾರಾಜ’, ‘ಯುಗ ಪ್ರವರ್ತಕ ಮಹಾತ್ಮ ಬಸವೇಶ್ವರ’ ಸೇರಿದಂತೆ ಹಲವು ಕನ್ನಡ, ಹಿಂದಿ, ಮರಾಠಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.