ಬಸವಕಲ್ಯಾಣದ ಬಸವ ವನದ ಪ್ರವೇಶ ದ್ವಾರ
ಬಸವಕಲ್ಯಾಣ: ನಗರದ ಬಸವ ವನ 58 ವರ್ಷಗಳ ಹಿಂದೆ ಬಸವಣ್ಣನವರ ಅಷ್ಟ ಜನ್ಮಶತಮಾನೋತ್ಸವ ಸವಿನೆನಪಿಗಾಗಿ ಉದ್ಘಾಟಿಸಿದ ಮಹತ್ವದ ಉದ್ಯಾನವಾಗಿದೆ. ನೀರಿನ ಸೌಲಭ್ಯವಿಲ್ಲದೆ ಇಲ್ಲಿನ ಮರಗಳು ಒಣಗಿ ಬೋಳಾಗಿ ನಿಂತಿದ್ದು ಎಲ್ಲೆಡೆ ಬರೀ ಕಸಕಡ್ಡಿ ಹರಡಿದೆ.
ಈ ವನ 26ನೇ ಡಿಸೆಂಬರ್ 1967ರಲ್ಲಿ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಎಸ್.ನಿಜಲಿಂಗಪ್ಪ ಅವರು ಉದ್ಘಾಟಿಸಿದ್ದರು. ಆ ಕಾರ್ಯಕ್ರಮದ ಫಲಕ ಹಾಗೂ ಅಂದು ಇಲ್ಲಿ ಪ್ರತಿಷ್ಠಾಪಿಸಿದ್ದ ಆಕರ್ಷಕ ನಂದಿ ಮೂರ್ತಿ ಸುಸ್ಥಿತಿಯಲ್ಲಿದೆ. ಇನ್ನುಳಿದ ಎಲ್ಲವೂ ಹಾಳಾಗಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಸುತ್ತಲಿನಲ್ಲಿ ಆವರಣಗೋಡೆ ಹಾಗೂ ಪ್ರವೇಶದ್ವಾರ ಕಟ್ಟಲಾಗಿದೆ. ಆದರೆ, ಒಳಗಡೆ ಬೆಳೆದ ಹುಲ್ಲು ಒಣಗಿದೆ. ಮರಗಿಡಗಳ ಎಲೆಗಳು ಉದುರಿದ್ದರಿಂದ ನೆರಳು ಬೀಳುತ್ತಿಲ್ಲ. ಈ ಕಾರಣ ಇಲ್ಲಿಗೆ ಯಾರೂ ಹೋಗದಂತಾಗಿದೆ.
ಮೂರು ಎಕರೆಯಲ್ಲಿನ ಈ ವನ ಈಗ ನಗರ ಬೆಳೆದಿದ್ದರಿಂದ ಮಧ್ಯ ಭಾಗದಲ್ಲಿದ್ದರೂ ಮೊದಲು ಹೊರಭಾಗದಲ್ಲಿತ್ತು. ಬಸವಣ್ಣನವರ ಕಾಲದ 770 ಅಮರ ಗಣಂಗಳ ಹೆಸರಲ್ಲಿ ಇಲ್ಲಿ ಅಷ್ಟೇ ಸಂಖ್ಯೆಯ ಸಸಿಗಳನ್ನು ನೆಡಲಾಗಿತ್ತು. ಅವು ಬೆಳೆದು ಹಸಿರಿನಿಂದ ಕಂಗೊಳಿಸಿದ್ದರಿಂದ ದೂರದೂರದ ಪ್ರವಾಸಿಗರು ಸಹ ಇಲ್ಲಿಗೆ ಬಂದು ಕುಳಿತು ಆಯಾಸ ಪರಿಹರಿಸಿಕೊಳ್ಳುತ್ತಿದ್ದರು. ಇಲ್ಲಿ ಬಹಳಷ್ಟು ವರ್ಷಗಳವರೆಗೆ ಇದೊಂದೇ ವನ ಇದ್ದುದರಿಂದ ಆಕರ್ಷಣೀಯ ಕೇಂದ್ರವಾಗಿತ್ತು.
ವನದ ವ್ಯವಸ್ಥೆ ತೋಟಗಾರಿಕೆ ಇಲಾಖೆಗೆ ವಹಿಸಿ ಇಲಾಖೆಯ ಕಚೇರಿ ಸಹ ಒಳಗಡೆಯೇ ಕಟ್ಟಲಾಯಿತು. ಎರಡು ದಶಕಗಳ ಹಿಂದೆ ಇಲಾಖೆಯಿಂದ ರಾಕ್ ಗಾರ್ಡನ್ ಮಾದರಿಯಲ್ಲಿ ಕಲ್ಲುಗಳನ್ನು ಸುಂದರವಾಗಿ ಪೋಣಿಸಿ ನೀರು ಧುಮ್ಮಿಕ್ಕುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿ ಕಾರಂಜಿ ಇದ್ದವು. ಹುಲ್ಲು ಹೂಗಿಡಗಳನ್ನು ಬೆಳೆಸಲಾಗಿತ್ತು. ಆದರೆ, ನಂತರದಲ್ಲಿ ಅನುದಾನದ ಕೊರತೆ ಮತ್ತು ನೋಡುವವರಿಲ್ಲದೆ ಎಲ್ಲವೂ ಅಸ್ತವ್ಯಸ್ತವಾಯಿತು.
ಸಮೀಪದಲ್ಲಿಯೇ ಮಿನಿ ಬಸ್ ನಿಲ್ದಾಣವಿದೆ. ಹಳ್ಳಿಯಿಂದ ಬಸ್ ಮೂಲಕ ಬರುವವರು ಹಾಗೂ ಶಾಲಾ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಬಿಸಿಲಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಇದಕ್ಕೆ ಹತ್ತಿಕೊಂಡೇ ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣ ಆಗುತ್ತಿದೆ. ಹೀಗಾಗಿ ಇನ್ನುಮುಂದೆ ಇಲ್ಲಿಗೆ ಬರುವವರ ಸಂಖ್ಯೆಯೂ ಹೆಚ್ಚಲಿದೆ. ಈ ಕಾರಣ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಹುಲ್ಲು, ಹೂಗಿಡಗಳನ್ನು ಬೆಳೆಸಬೇಕು. ಗಿಡಮರಗಳು ಯಾವಾಗಲೂ ಹಚ್ಚಹಸಿರಾಗಿ ಇರುವಂತೆ ವ್ಯವಸ್ಥೆಗೈಯಬೇಕಾಗಿದೆ. ಮುಖ್ಯವೆಂದರೆ, ವಿಶೇಷ ಸಂದರ್ಭದಲ್ಲಿ ನಿರ್ಮಿಸಿದ ಉದ್ಯಾನ ಇದಾಗಿದ್ದರಿಂದ ಇದರ ಸಂರಕ್ಷಣೆ ಅತ್ಯಗತ್ಯವಾಗಿದೆ.
ಪ್ರಸ್ತಾವ: ವನದಲ್ಲಿ ಕಾರಂಜಿ ಮತ್ತು ವಿದ್ಯುತ್ ದೀಪದ ವ್ಯವಸ್ಥೆ, ಹೆಚ್ಚಿನ ಸಸಿ ನೆಡುವುದು, ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸುವುದು, ವಾಕಿಂಗ್ ಪಾಥ್ ನಿರ್ಮಾಣ, ಮಕ್ಕಳ ಆಟಿಕೆ ಸಾಮಾನು ಅಳವಡಿಕೆಗಾಗಿ ಅನುದಾನ ಸಲ್ಲಿಸಲು ಸಂಬಂಧಿತರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಬೀದರ್‌ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ರಾಜ್ಯ ವಲಯ) ಸುನಿಲ ಗಂಗಸಿರಿ ತಿಳಿಸಿದ್ದಾರೆ. ಇಲ್ಲಿ ಅಭಿವೃದ್ಧಿ ಕೈಗೊಳ್ಳಲು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯವರಿಗೂ ಮನವಿ ಸಲ್ಲಿಸಲಾಗಿದೆ ಎಂದಿದ್ದಾರೆ.
ಬಸವವನ
ಬಸವಣ್ಣನವರ ಅಷ್ಟ ಜನ್ಮಶತಮಾನೋತ್ಸವದಂಥ ಐತಿಹಾಸಿಕ ಘಟನೆಗೆ ಸಾಕ್ಷಿ ಆಗಿರುವುದರಿಂದ ಅದನ್ನು ಉಳಿಸುವುದು ಸಂಬಂಧಿತರ ಕರ್ತವ್ಯವಾಗಿದೆಶಾಮ ಹತ್ತೆ ಮಂಠಾಳ ಸಾಮಾಜಿಕ ಕಾರ್ಯಕರ್ತ ಬಸವ ವನವು ನಗರಕ್ಕೆ ಆಗಮಿಸುವ ಕೂಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಮನೆಯಿಂದ ತಂದ ಊಟ ಮಾಡುವ ಸ್ಥಳವಾದ್ದರಿಂದ ಸಕಲ ಸೌಲಭ್ಯ ಒದಗಿಸಬೇಕುದತ್ತಾತ್ರಿ ಬಾಂದೇಕರ್ ಬಸವಕಲ್ಯಾಣ ನಗರದ ಮುಖ್ಯವಾದ ಈ ವನದಲ್ಲಿ ರಾತ್ರಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಬೇಕು. ಹುಲ್ಲು ಹೂಗಿಡಗಳನ್ನು ಬೆಳೆಸಿ ಸುಂದರಗೊಳಿಸುವುದು ಅತ್ಯಂತ ಅವಶ್ಯಕಸೂರಜ್ ಪಾಟೀಲ ಉದ್ಯಮಿ ವನದಲ್ಲಿ 12ನೇ ಶತಮಾನದ 770 ಅಮರ ಗಣಂಗಳ ಹೆಸರಲ್ಲಿ ನೆಟ್ಟಿರುವ ಗಿಡಗಳನ್ನು ಹಾಗೇ ಉಳಿಸಿಕೊಂಡು ಹೆಚ್ಚಿನ ಸಸಿ ಬೆಳೆಸಿ ಅಭಿವೃದ್ಧಿಪಡಿಸಬೇಕುರವಿ ಪಾಟೀಲ ಅಟ್ಟೂರ್ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.