ADVERTISEMENT

ಬಸವಕಲ್ಯಾಣ: ಬಸವೇಶ್ವರ ದೇಗುಲಕ್ಕೆ ಹೊಸ ಮೆರುಗು

ಕೂಡಲಸಂಗಮದ ಐಕ್ಯಮಂಟಪದಂಥ ಕಟ್ಟಡದ ನಿರ್ಮಾಣ

ಮಾಣಿಕ ಆರ್ ಭುರೆ
Published 29 ಮೇ 2022, 5:14 IST
Last Updated 29 ಮೇ 2022, 5:14 IST
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಹೊಸ ಕಟ್ಟಡದ ನೀಲನಕ್ಷೆ
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಹೊಸ ಕಟ್ಟಡದ ನೀಲನಕ್ಷೆ   

ಬಸವಕಲ್ಯಾಣ: ನಗರದಲ್ಲಿನ ಬಸವೇಶ್ವರ ದೇವಸ್ಥಾನದ ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲಿಯೇ ಇದಕ್ಕೆ ಹೊಸ ಮೆರುಗು ಸಿಗಲಿದೆ. ಇಲ್ಲಿನ ಇತರೆ ಶರಣ ಸ್ಮಾರಕಗಳಂತೆ ಈ ಸ್ಥಳವೂ ಇನ್ನಷ್ಟು ಆಕರ್ಷಣೀಯವಾಗಿ ಕಂಗೊಳಿಸಲಿದೆ.

ಬಸವಾದಿ ಶರಣರು 12 ನೇ ಶತಮಾನದಲ್ಲಿ ಕಾರ್ಯಗೈದ ಪುಣ್ಯ ನೆಲ ಇದಾಗಿದೆ. ಸಮಾಜ ಪರಿವರ್ತನೆಗಾಗಿ ನಡೆಸಿದ ಕಲ್ಯಾಣ ಕ್ರಾಂತಿಯು ಜಗತ್ತಿನ ಪ್ರಮುಖ ಕ್ರಾಂತಿಗಳಲ್ಲೊಂದು. ಶರಣರ ಕಾಯಕ, ದಾಸೋಹ ತತ್ವಕ್ಕೆ ಮತ್ತು ಅವರು ರಚಿಸಿದ ವಚನಗಳಿಗೆ ಎಲ್ಲೆಡೆ ಮನ್ನಣೆ ದೊರಕುತ್ತಿದೆ. ಇಂಥ ಮಹತ್ವದ ಸ್ಥಳದಲ್ಲಿನ ಬಸವಣ್ಣನವರ ಸ್ಮಾರಕವಾದ ಬಸವೇಶ್ವರ ದೇವಸ್ಥಾನ ಅಷ್ಟೊಂದು ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಅದರ ನವೀಕರಣ ನಡೆಸಲಾಗುತ್ತಿದೆ.

ದೇವಸ್ಥಾನ ಮೊದಲು ಮಠವಾಗಿತ್ತು. ಹೀಗಾಗಿ ಕಪ್ಪು ಕಲ್ಲಿನ ವಾಡೆಯಂಥ ಕಟ್ಟಡ ಇದಾಗಿತ್ತು. ಹಿಂಬದಿಯಲ್ಲಿ ಗರ್ಭಗೃಹ ಮತ್ತು ಅದರೆದುರಿಗೆ ದೊಡ್ಡದಾದ ಆವರಣವಿರುವ ಸಭಾಂಗಣವಿತ್ತು. ನೂರಾರು ವರ್ಷಗಳ ಹಳೆಯ ಕಟ್ಟಡವಾಗಿದ್ದರಿಂದ ಗೋಡೆಗಳು ಶಿಥಿಲಗೊಂಡಿದ್ದವು. ಮೇಲ್ಛಾವಣಿಯೂ ಹಾಳಾಗಿತ್ತು. ಹೀಗೆ ಎಲ್ಲವೂ ಹಳೆಯದಾಗಿರುವ ಕಾರಣ ಅದನ್ನು ತೆಗೆದು ಹೊಸ ಆಕರ್ಷಕ ವಿನ್ಯಾಸದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು ಅಲ್ಪಸ್ವಲ್ಪ ಕೆಲಸ ಮಾತ್ರ ಬಾಕಿ ಉಳಿದಿದೆ.

ADVERTISEMENT

ಎದುರಿನ ಮಂಟಪದ ಸುತ್ತಲಿನ ಗೋಡೆ ಕೆಡವಿ ಸಿಮೆಂಟ್‌ನ ಚಿತ್ರಾವಳಿಗಳಿರುವ ಕಂಬಗಳನ್ನು ಅಳವಡಿಸಲಾಗುತ್ತಿದೆ. ಮಧ್ಯದಲ್ಲಿ ಕೂಡಲ ಸಂಗಮದಲ್ಲಿ ಇರುವಂತೆ ಐಕ್ಯಮಂಟಪದ ಮಾದರಿಯಲ್ಲಿ ಮಂಟಪ ಕಟ್ಟಲಾಗುತ್ತಿದೆ. ಹಿಂದಿನ ಹಳೆಯ ಶಿಖರ ಮತ್ತು ಗರ್ಭಗೃಹ ಕೂಡ ತೆಗೆದು ಕಲ್ಲಿನ ಶಿಖರ ನಿರ್ಮಿಸಲಾಗುತ್ತಿದೆ. ಸಭಾಂಗಣದ ಭಿತ್ತಿಗಳಲ್ಲಿ ವಿವಿಧ ಶರಣರ ಮೂರ್ತಿಗಳನ್ನು ಕೂಡ ಅಳವಡಿಸಲಾಗುತ್ತಿದೆ.

ನಗರದಲ್ಲಿನ ವಿವಿಧ ಶರಣರ ಸ್ಮಾರಕಗಳ ಜೀರ್ಣೋದ್ಧಾರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಕೈಗೊಳ್ಳಲಾಗಿದೆ. ಆದರೆ ಬಸವೇಶ್ವರ ದೇವಸ್ಥಾನದ ಕಟ್ಟಡ ಮಾತ್ರ ಹಳೆಯದೇ ಇತ್ತು. ಆದ್ದರಿಂದ ದೇವಸ್ಥಾನ ಪಂಚ ಸಮಿತಿಯಿಂದ ಇದರ ನವೀಕರಣ ಕೈಗೊಳ್ಳಲಾಗುತ್ತಿದೆ. ಕೆಲ ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ ತಿಳಿಸಿದ್ದಾರೆ.

ಗರ್ಭಗೃಹದ ಎದುರಿನ ಭಾಗದ ಕೆಲಸ ಪೂರ್ಣಗೊಂಡ ನಂತರ ಇತರೆ ಕಾಮಗಾರಿ ನಡೆಸಲಾಗುವುದು. ಪ್ರವೇಶ ದ್ವಾರ ಕೂಡ ಕೆತ್ತನೆಯ ಕಲ್ಲುಗಳಿಂದಲೇ ನಿರ್ಮಿಸಲಾಗುತ್ತದೆ ಎಂದು ದೇವಸ್ಥಾನ ಸಮಿತಿ ಉಪಾಧ್ಯಕ್ಷ ಅಶೋಕ ನಾಗರಾಳೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.