ಬೀದರ್: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 19 ಜನರನ್ನು ರಕ್ಷಿಸಿ ಸಾಂತ್ವನ ಹಾಗೂ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಭಿಕ್ಷಾಟನೆ ಮಾಡುತ್ತಿರುವ ಜಾಗಗಳನ್ನು ಪರಿಶೀಲಿಸಿದಾಗ 19 ಜನರು ಪತ್ತೆಯಾಗಿದ್ದಾರೆ. 19 ಜನರಲ್ಲಿ 14 ಜನ ಮಕ್ಕಳಿಗೆ ನಗರದ ಬ್ರಿಮ್ಸ್‌ನಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ. 12 ಮಕ್ಕಳು, ಮೂವರು ಮಹಿಳೆಯರಿಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಇಬ್ಬರು ಪುರುಷರಿಗೆ ನಗರಸಭೆ ವ್ಯಾಪ್ತಿಯ ಪುನರ್ವಸತಿ ಕೇಂದ್ರದಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾನುವಾರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಆಪ್ತ ಸಮಾಲೋಚನೆ ಮಾಡಿ, ಮೂವರು ಮಹಿಳೆಯರೊಂದಿಗೆ ಪುನಃ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ ಎಂದಿದ್ದಾರೆ.
ನಗರ ಪ್ರದೇಶಗಳಲ್ಲಿ ಭಿಕ್ಷಾಟನೆ ಸಮಸ್ಯೆ ಸಾಮಾನ್ಯವಾಗಿದೆ. ಹಲವರು ಸಂಘಟಿತ ಭಿಕ್ಷಾಟನೆ ಜಾಲದ ಭಾಗವಾಗಿದ್ದಾರೆ. ಇದು ಸಾಮಾಜಿಕ ಸಮಸ್ಯೆಯಷ್ಟೇ ಅಲ್ಲ, ಆರೋಗ್ಯ, ಶಿಷ್ಟಾಚಾರ ಮತ್ತು ಕಾನೂನು ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಮೂಡುವಂತೆ ಮಾಡಿದೆ. ನಿಜವಾದ ಭಿಕ್ಷುಕರು, ನಕಲಿ ಭಿಕ್ಷುಕರ ಮಧ್ಯೆ ವ್ಯತ್ಯಾಸ ಗುರುತಿಸುವುದು ಬಹಳ ಕಷ್ಟ. ನಿಜವಾದ ಭಿಕ್ಷುಕರನ್ನು ಗುರುತಿಸಿ, ಪುನರ್ವಸತಿ ಕಲ್ಪಿಸುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳ ಹಾಗೂ ದೇವಾಸ್ಥಾನಗಳಲ್ಲಿ ಭಿಕ್ಷಾಟನೆಗೆ ಸಂಬಂಧಿಸಿದಂತೆ ಮಕ್ಕಳನ್ನು ದಿನದ ಬಾಡಿಗೆ ಮೇಲೆ ತೊಡಗಿಸುವುದು, ಹಸುಗೂಸುಗಳನ್ನು ಬಳಸಿಕೊಂಡು ಭಿಕ್ಷೆ ಬೇಡುತ್ತಿರುವುದು ಹೆಚ್ಚಾಗಿ ಕಂಡು ಬಂದಿದೆ. ಇದಕ್ಕೆ ಪ್ರಾಥಮಿಕ ಹಂತದಲ್ಲೇ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಸಭೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ‘ಬೆಟರ್‌ಮೆಂಟ್’ ಫೌಂಡೇಶನ್ ವತಿಯಿಂದ ವಿವಿಧ ಸ್ಥಳಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ಸುಮಾರು 70 ಜನರಿಗೆ ರೇಷನ್ ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯ ಇನ್ನಿತರೆ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
Cut-off box - ‘ಭಿಕ್ಷಾಟನೆಗೆ ದೂಡಿದರೆ 3 ವರ್ಷ ಜೈಲು’ ಬಾಲ ನ್ಯಾಯ ಕಾಯ್ದೆ 2015ರ ಪ್ರಕಾರ ಮಕ್ಕಳನ್ನು ಭಿಕ್ಷಾಟನೆಗೆ ದೂಡುವರಿಗೆ 3 ವರ್ಷ ಜೈಲು ಹಾಗೂ 1 ಲಕ್ಷ ದಂಡ ವಿಧಿಸಲು ಅವಕಾಶವಿದೆ. ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬಂದರೆ ಕೂಡಲೇ 1098ಗೆ ಕರೆ ಮಾಹಿತಿ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.