ಭಗವಂತ ಖೂಬಾ
ಬೀದರ್: ‘ಸ್ವಾತಂತ್ರ್ಯೋತ್ಸವ ಮುಗಿಸಿದ ಮೇಲೆ ಸುಳ್ಳಿನ ಭಾಷಣ ಮಾಡಿ, ಮಾಧ್ಯಮಗಳ ಮುಂದೆ ನನ್ನ ಬಗ್ಗೆ ಅನಾಗರಿಕ ಹೇಳಿಕೆ ನೀಡಿರುವ ಈಶ್ವರ ಖಂಡ್ರೆ ಒಬ್ಬ ಮಹಾಸುಳ್ಳುಗಾರ’ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ತಿರುಗೇಟು ನೀಡಿದ್ದಾರೆ.
ಜನರಿಗೆ ಹೇಸಿಗೆ ಬರುವಂತಹ ಭಾಷೆಗಳನ್ನು ಬಳಸಿ, ಅಹಂಕಾರದಿಂದ ಮಾತನಾಡಿದ ಈಶ್ವರ ಖಂಡ್ರೆ, ಈ ಕಲಿಯುಗದ ಒಬ್ಬ ಮಹಾನ್ ಮೋಸಗಾರ. ಜೀವನಪೂರ್ತಿ ಸುಳ್ಳು ಮೋಸದಿಂದಲೇ ಬದುಕುವ ರೂಢಿ ಮಾಡಿಕೊಂಡಿದ್ದಾರೆ’ ಎಂದು ಹರಿಹಾಯ್ದರು.
ಜಿಲ್ಲೆಯಲ್ಲಿ ರೈತರಿಗೆ ಸಾಲ ಸಿಗುತ್ತಿಲ್ಲ. ಡಿಸಿಸಿ ಬ್ಯಾಂಕ್ ನಷ್ಟದಲ್ಲಿದೆ. ದರೋಡೆ, ಅಕ್ಕಿ, ಗಾಂಜಾ ಕಳ್ಳ ಸಾಗಾಣೆ, ಇಸ್ಪಿಟ್, ಮಟಕಾ ಕ್ಲಬ್‍ಗಳು, ಎಟಿಎಮ್ ದರೋಡೆ, ಕೋಲೆಯಂತಹ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ವೈಯಕ್ತಿಕ ದ್ವೇಶಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.
‘ಪ್ರಸಾದ ಯೋಜನೆಯಡಿ ನೀಡುವ ಅನುದಾನ ಕೇವಲ ₹5 ಕೋಟಿ. ಆದರೆ ನಾನು ₹22 ಕೋಟಿ ಅನುದಾನ ತಂದಿದ್ದೆ. ಮಾರ್ಚ್ 4, 2024ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ನಿಮಗೆ ತಾಕತ್ ಇದ್ದರೆ ರಾಜ್ಯ ಸರ್ಕಾರದಿಂದ ₹25 ಕೋಟಿ ಅನುದಾನ ಕೊಡಿಸಿ’ ಎಂದು ಸವಾಲು ಹಾಕಿದ್ದಾರೆ.
‘ನಾನು ಮೋದಿ ಹೆಸರಿನ ಮೇಲೆ ಗೆದ್ದಿದ್ದೀನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ನನ್ನಂತಹ ಒಬ್ಬ ಸಾಮಾನ್ಯ ಕಾರ್ಯಕರ್ತ ಗೆಲ್ಲಬೇಕಾದರೆ ಪಕ್ಷ, ಸಂಘಟನೆ, ಮೋದಿ ಶಕ್ತಿಯಿಂದಲೆ ಸಾಧ್ಯ. ನಿಮಗೆ ಆ ಶಕ್ತಿ ಇದ್ದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನೆರಳಿನಿಂದ ಆಚೆ ಬಂದು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆದ್ದು ತೊರಿಸಿ’ ಎಂದು ಕೇಳಿದರು.
ನಾನು 10 ವರ್ಷ ಸಂಸದನಾಗಿ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ರಾಜ್ಯದ ಜನ ನೋಡಿ, ಮೆಚ್ಚಿದ್ದಾರೆ. ನಿಮ್ಮ ಮಗನ ಸಾಧನೆ ಏನು ಎನ್ನುವುದು ಕೂಡ ಜನರಿಗೆ ಗೊತ್ತಿದೆ. ಅದನ್ನು ಮರೆಮಾಚಲು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದೀರಿ. ನಾವು ಮಾಡಿದ ಕೆಲಸಗಳೆಲ್ಲಾ ನಿಮ್ಮ ಮಗ ಮಾಡಿದ್ದು ಎಂದು ನಿಮ್ಮ ಮಗನ ಅವಧಿ ಮುಗಿಯುವವರೆಗೂ ಸುಳ್ಳು ಹೇಳಿಕೊಂಡೆ ತಿರುಗಾಡಿ ಎಂದು ಖಂಡ್ರೆಗೆ ಲೇವಡಿ ಮಾಡಿದರು.
ಒಬ್ಬ ತಂದೆಯಾಗಿ ಮಕ್ಕಳಿಗೆ ಸತ್ಯ ಮತ್ತು ಧರ್ಮ ಮಾರ್ಗದಲ್ಲಿ ನಡೆಯಲು ಹೇಳಿಕೊಡಬೇಕು, ಆದರೆ ಈಶ್ವರ ಖಂಡ್ರೆ ಅವರ ಮಗನಿಗೆ ಅಸತ್ಯ ಮತ್ತು ಅಧರ್ಮದ ಮಾರ್ಗದಲ್ಲಿ ರಾಜಕಾರಣ ಮಾಡಬೇಕೆಂದು ಹೇಳಿಕೊಡುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.