ಬೀದರ್: ತಾಲ್ಲೂಕಿನ ಯಾಕತಪೂರ ಗ್ರಾಮದಲ್ಲಿ ಭಾಗ್ಯವಂತಿ ದೇವಿ 11ನೇ ಜಾತ್ರಾ ಮಹೋತ್ಸವ ಡಿ. 8 ಹಾಗೂ 9ರಂದು ನಡೆಯಲಿದೆ ಎಂದು ಜಾತ್ರಾ ಮಹೋತ್ಸವದ ಸಂಘಟಕ ಭೀಮರಾವ್ ಬೀದರಕರ್ ತಿಳಿಸಿದ್ದಾರೆ.
ಡಿ. 8ರಂದು ಬೆಳಿಗ್ಗೆ 8ಕ್ಕೆ ಭಾಗ್ಯವಂತಿ ದೇವಿಯ ಪಾದ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮ ನಡೆಯಲಿದೆ. ಅನಂತರ ನೈವೇದ್ಯ ಸಮರ್ಪಿಸಲಾಗುವುದು. ಭಾಗ್ಯವಂತಿ ದೇವಿಯ ಮೂರ್ತಿಯೊಂದಿಗೆ ಗ್ರಾಮದ ದೇವತೆಗಳಿಗೆ ದೇವಿಯ ಮೂರ್ತಿ ಮೆರವಣಿಗೆ ಸಂಜೆ 6ರಿಂದ ರಾತ್ರಿ 10ರ ವರೆಗೆ ಜರುಗಲಿದೆ. ಬಳಿಕ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಮಂಗಳವಾರ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಡಿ. 9ರಂದು ಬೆಳಿಗ್ಗೆ 8ಕ್ಕೆ ದೇವಿಯ ಪಲ್ಲಕಿ ಮೆರವಣಿಗೆ, ಪುರವಂತಿಗೆ ಸೇವೆ, ಡೊಳ್ಳು ಕುಣಿತ, ದೇವಿಯ ಮೂರ್ತಿಯೊಂದಿಗೆ ಸುಮಂಗಲಿಯರ ಕುಂಭ ಕಳಸ, ಶಾಲಾ ಮಕ್ಕಳ ಕೋಲಾಟ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜಹೀರಾಬಾದ್ ಮಲ್ಲಯ್ಯಗಿರಿ ಆಶ್ರಮದ ಬಸವಲಿಂಗ ಅವಧೂತರು, ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ, ಸೇಡಂ ತಾಲ್ಲೂಕಿನ ಮಳಖೇಡದ ಹಜರತ್ ಸೈಯದ್ ಷಾಹ ಮುಸ್ತಫಾ ಖಾದ್ರಿ, ಸಜ್ಜಾದಾನ ಶೀನ್ ರೋಜ್-ಎ-ರಹಮಾನಿಯಾ ಸಾನ್ನಿಧ್ಯ ವಹಿಸುವರು. ರಾತ್ರಿ 10ಕ್ಕೆ ಆಕಾಶವಾಣಿ ಕಲಾವಿದರಿಂದ ಸಂಗೀತ ದರಬಾರ್ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.