ADVERTISEMENT

ಭಾಲ್ಕಿ | ಸೈಕಲ್ ಎಡೆ ಯಂತ್ರಕ್ಕೆ ಹೆಚ್ಚಿದ ಬೇಡಿಕೆ: ಸಂಕಷ್ಟದಲ್ಲಿ ಅನ್ನದಾತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:43 IST
Last Updated 26 ಜುಲೈ 2025, 6:43 IST
ಭಾಲ್ಕಿ ತಾಲ್ಲೂಕಿನ ಚಳಕಾಪುರ ವಾಡಿ ಗ್ರಾಮದ ರೈತ ಬಾಬುರಾವ್ ಜಾಧವ ಹೆಸರು ಬೆಳೆಯ ನಡುವೆ ಕಳೆ ತೆಗೆಯಲು ಸೈಕಲ್ ಯಂತ್ರ ಬಳಸಿ ಎಡೆ ಹೊಡೆಯುತ್ತಿರುವುದು
ಭಾಲ್ಕಿ ತಾಲ್ಲೂಕಿನ ಚಳಕಾಪುರ ವಾಡಿ ಗ್ರಾಮದ ರೈತ ಬಾಬುರಾವ್ ಜಾಧವ ಹೆಸರು ಬೆಳೆಯ ನಡುವೆ ಕಳೆ ತೆಗೆಯಲು ಸೈಕಲ್ ಯಂತ್ರ ಬಳಸಿ ಎಡೆ ಹೊಡೆಯುತ್ತಿರುವುದು   

ಭಾಲ್ಕಿ: ಹೊಲದಲ್ಲಿ ಕಳೆ ಬೆಳೆಯದಂತೆ ನೋಡಿಕೊಳ್ಳಲು ಎಡೆ ಹೊಡೆಯಲು ಅನ್ನದಾತರಿಗೆ ಎತ್ತುಗಳ ಮತ್ತು ಕಾರ್ಮಿಕರ ಕೊರತೆ ಕಾಡುತ್ತಿದೆ. ಇದರಿಂದ ರೈತರಿಗೆ ತಮ್ಮ ಹೊಲವನ್ನು ಕಳೆ ಮುಕ್ತವಾಗಿಸಲು ಪರದಾಡುವಂತಾಗಿದೆ.

ಗ್ರಾಮೀಣ ಭಾಗದಲ್ಲಿ ಕೆಲ ವರ್ಷಗಳ ಹಿಂದೆ ಪ್ರತಿ ರೈತನ ಮನೆಯಲ್ಲಿ ಕನಿಷ್ಠ ಎರಡು ಎತ್ತುಗಳು ಇರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಒಕ್ಕಲುತನದ ಕಡೆಗೆ ಬಹುತೇಕರ ಒಲವು ಕಡಿಮೆ ತಗ್ಗಿದೆ. ಗ್ರಾಮದ ಬೆರಳೆಣಿಕೆಯ ರೈತರ ಮನೆಗಳಲ್ಲಿ ಎತ್ತುಗಳಿದ್ದು, ಎಡೆ ಹೊಡೆಯಲು ರಾಸುಗಳ ಸಮಸ್ಯೆ ಕಾಡುತ್ತಿದೆ.

ಎತ್ತುಗಳ ಸಹಾಯದಿಂದ ನಿತ್ಯ ನಾಲ್ಕರಿಂದ ಐದು ಎಕರೆ ಹೊಲದಲ್ಲಿ ಎಡೆ ಹೊಡೆಯಬಹುದು‌. ಎತ್ತುಗಳ ಕೊರತೆಯಿಂದ ಬಹುತೇಕ ರೈತರು ಸೈಕಲ್ ಎಡೆಗೆ ಮೊರೆ ಹೋಗುವಂತಾಗಿದೆ.‌ ಸೈಕಲ್ ಎಡೆ ಯಂತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಬಹುತೇಕ ರೈತರು ಸೈಕಲ್ ಎಡೆ ಯಂತ್ರವನ್ನು ಖರೀದಿಸಿ ತಮ್ಮ ಹೊಲವನ್ನು ಕಳೆಯಿಂದ ಮುಕ್ತವಾಗಿಸಲು ಶ್ರಮಿಸುತ್ತಿದ್ದಾರೆ. ಕೆಲವೆಡೆ ಕೂಲಿ ಕಾರ್ಮಿಕರ ಕೊರತೆಯಿಂದ ಎರಡ್ಮೂರು ರೈತ ಕುಟುಂಬಗಳು ಸೇರಿ ಒಬ್ಬರ ಹೊಲದ ಕೆಲಸ ಮುಗಿದ ನಂತರ ಮತ್ತೊಬ್ಬರ ಹೊಲದಲ್ಲಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಸದ್ಯ ಬಹುತೇಕ ಕಡೆಗಳಲ್ಲಿ ಎಡೆ ಹೊಡೆಯುವ, ಕಳೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಬೇಡಿಕೆಯೂ ಹೆಚ್ಚಾಗಿದೆ. ಆದರೆ, ಕೂಲಿ ಕಾರ್ಮಿಕರ ಕೊರತೆ ಬಹುವಾಗಿ ಕಾಡುತ್ತಿದೆ. ಹೊಲದ ಕೆಲಸ ತುಂಬಾ ಶ್ರಮದಾಯಕ ಆಗಿರುವುದರಿಂದ ಕೆಲಸ ಮಾಡಲು ಜನರು ಮುಂದೆ ಬರುತ್ತಿಲ್ಲ. ಇನ್ನು ಸರ್ಕಾರದ ಉಚಿತ ಯೋಜನೆಗಳು ಸಹಜವಾಗಿಯೇ ಜನರ ಸಾಮಾನ್ಯ ಅಗತ್ಯತೆಗಳನ್ನು ಈಡೇರಿಸುತ್ತಿವೆ. ಇದರಿಂದಲೂ ಹೆಚ್ಚಿನ ಜನರು ಕೂಲಿ ಕೆಲಸಕ್ಕೆ ಮುಂದಾಗುತ್ತಿಲ್ಲ ಎಂಬುದು ರೈತರ ಅಂಬೋಣ.

‘ದಿನವೊಂದಕ್ಕೆ ₹600ರಿಂದ ₹700 ಕೂಲಿ ನೀಡಿದರೂ ಕೃಷಿ ಕಾರ್ಮಿಕರ ಕೊರತೆ ಎದುರಾಗುತ್ತಿದೆ. ಹೊಲದಲ್ಲಿ ಉತ್ತಮ ಬೆಳೆ ಬೆಳೆಯಬೇಕು ಎಂದು ಸಾಕಷ್ಟು ಲಾಗೋಡಿ ಖರ್ಚು ಮಾಡಿದರೂ ಬೆಳೆ ಕೈ ಸೇರುತ್ತದೆ ಎಂಬ ವಿಶ್ವಾಸ ನಮಗಿಲ್ಲ.‌ ಮೇ ತಿಂಗಳಿನಲ್ಲಿ ಹೆಚ್ಚಿನ ಮಳೆಯಾಗಿದೆ. ಆದರೆ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಮಟ್ಟಿಗೆ ಮಳೆ ಆಗದಿರುವುದರಿಂದ ಬೆಳೆಗಳು ಬಾಡುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಂತು ಗ್ಯಾರಂಟಿ’ ಎನ್ನುತ್ತಾರೆ ರೈತರಾದ ಉತ್ತಮ, ಮಲ್ಲಿಕಾರ್ಜುನ ಮಚಕೂರೆ.

ಕಾರ್ಮಿಕರು ಎತ್ತುಗಳ ಕೊರತೆ ಅನ್ನದಾತರನ್ನು ಬಹಳ ಕಾಡುತ್ತಿದೆ. ಹೊಲಗಳಲ್ಲಿ ಕಳೆ ಬೆಳೆಯದಂತೆ ನೋಡಿಕೊಳ್ಳಲು ಸ್ವತಃ ಸೈಕಲ್ ಎಡೆ ಹೊಡೆಯುತ್ತಿದ್ದೇವೆ. ಆದರೆ ಇದಕ್ಕೆ ಹೆಚ್ಚಿನ ಸಮಯ ತಗಲುತ್ತಿದೆ
ಆನಂದ ಜಾಧವ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.