
ಭಾಲ್ಕಿ: ‘ಸತ್ಸಂಗದಿಂದ ನಮ್ಮ ದೃಷ್ಟಿ, ಮಾತು ಮತ್ತು ಆಲೋಚನಾ ಶಕ್ತಿ ಹೆಚ್ಚುತ್ತದೆ’ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ಹೇಳಿದರು.
ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದ ಬಸವೇಶ್ವರ ವೃತ್ತ ಬಳಿ ಹಮ್ಮಿಕೊಂಡಿದ್ದ ಪ್ರವಚನ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
‘ಸಮಾಜ ಒಪ್ಪುವ ಹಾಗೆ ಪ್ರತಿಯೊಬ್ಬರು ಬದುಕುವುದು ಮಾನವರ ಕರ್ತವ್ಯ. ಇಂದಿನ ದಿನಗಳಲ್ಲಿ ಒತ್ತಡದ ಜೀವನದಿಂದಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರವಚನ ಕಾರ್ಯಕ್ರಮಕ್ಕೂ ಮೊದಲು ಅಲಂಕೃತ ಸಾರೋಟಿನಲ್ಲಿ ಶ್ರೀಗಳ ಮೆರವಣಿಗೆ ನಡೆಯಿತು. ಮೆರವಣಿಗೆಯು ಗ್ರಾಮದ ಪ್ರಮುಖ ವೃತ್ತಗಳ ಮೂಲಕ ಸಾಗಿ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡಿತು.
ಮೆರವಣಿಗೆಯಲ್ಲಿ ಹಲಗೆ, ಡೊಳ್ಳು ಕುಣಿತ, ಕಳಸ ಹೊತ್ತ ಮಹಿಳೆಯರು, ಮಕ್ಕಳ ಕೋಲಾಟ ಸೇರಿದಂತೆ ಇನ್ನಿತರ ಕಲಾ ತಂಡಗಳು ನೋಡುಗರ ಮನ ತಣಿಸಿದವು. ಯುವಕರು, ಮಕ್ಕಳು ಡಿಜೆ ಹಾಡಿಗೆ ಹೆಜ್ಜೆ ಹಾಕಿದರು.
ಪ್ರಮುಖರಾದ ಗಂಗಾಧರ ಮಜಗೆ, ಎಂಜಿಎಸ್‌ಎಸ್‌ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ ಮುಗನೂರು, ವಿಜಯಕುಮಾರ ಕಡಗಂಚೆ, ಸಿದ್ಧಯ್ಯ ಸ್ವಾಮಿ, ಶಿವು ಉಮರ್ಗೆ, ಕಲ್ಲಪ್ಪ ರಡ್ಡೆರ್, ಧನರಾಜ ಸಿರಸಗೆ, ದತ್ತು ಭಾವಿದೊಡ್ಡೆ, ಶಿವು ಹೊನ್ನಳೆ, ನರಸಪ್ಪ ಮೊರೆ, ಸಂತೋಷ ಸಿರಸಗೆ, ನಾಗಯ್ಯ ಸ್ವಾಮಿ, ವಿಶ್ವನಾಥ ಬಿರಾದಾರ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.